ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಶ್ರೀಕೃಷ್ಣಾಷ್ಟಮಿ ಮತ್ತು ಮೊಸರು ಕುಡಿಕೆ ಉತ್ಸವವನ್ನು ಆ.26 ರಂದು ಆಚರಿಸಲಾಯಿತು.
ಕಾಶಿಕಟ್ಟೆಯಲ್ಲಿ ಅಷ್ಟಮಿಯಂದು ಪೂಜಿತವಾದ ಕೃಷ್ಣನ ವಿಗ್ರಹವನ್ನು ಸ್ಥಳೀಯ ಮೂಲನಿವಾಸಿಗಳಾದ ಮಲೆಕುಡಿಯ ಜನಾಂಗದವರು ಪಾಲಕಿಯಲ್ಲಿ ಮಂಗಳವಾದ್ಯದ ಮೂಲಕ ಆನೆ, ಬಿರುದಾವಳಿ, ಮೆರವಣಿಗೆಯಲ್ಲಿ ದೇವಳಕ್ಕೆ ತಂದರು. ದೇವಳಕ್ಕೆ ಪ್ರದಕ್ಷಿಣೆ ಬಂದು ದೇವಳದಿಂದ ಕಾಶಿಕಟ್ಟೆಗೆ ಉತ್ಸವವು ತೆರಳಿತು.
ಈ ವೇಳೆ ರಥಬೀದಿಯಿಂದ ಕಾಶಿಕಟ್ಟೆ ತನಕ ಕಂಬದಲ್ಲಿ ಕಟ್ಟಿದ್ದ ಮೊಸರು ತುಂಬಿದ ಕುಡಿಕೆಗಳನ್ನು ಮಹಿಳೆಯರು ಒಡೆದು ಜನ್ಮಾಷ್ಠಮಿಯನ್ನು ಆಚರಿಸಿದರು. ಕಾಶಿಕಟ್ಟೆಯಲ್ಲಿ ಇರಿಸಿದ್ದ ಮೊಸರಿನ ಗಡಿಗೆಗಳನ್ನು ಒಡೆಯಲಾಯಿತು. ನಂತರ ಕಾಶಿಕಟ್ಟೆಯಲ್ಲಿ ಶ್ರೀಕೃಷ್ಣನಿಗೆ ಮಹಾಪೂಜೆ ನೆರವೇರಿತು.
ಶ್ರೀಕೃಷ್ಣ ಜನ್ಮಾಷ್ಠಮಿಯಂದು ಸಂಪ್ರದಾಯದಂತೆ ಪೇಟ್ಲೆ ಬೆಡಿ ಹೊಡೆಯಲಾಯಿತು. ಉತ್ಸವದಲ್ಲಿ ಹಿರಿಯರು ಮಕ್ಕಳು ಪೇಟ್ಲೆ ಬೆಡಿಯ ಆಟವಾಡಿ ರಂಜಿಸಿದರು. ಕಾವಟೆಮರದ ಗೆಲ್ಲುಗಳಿಂದ ತಯಾರಿಸಿದ ಈ ಪೇಟ್ಲೆ ಬೆಡಿಗೆ ಕಾವಟೆ ಕಾಯಿಯನ್ನು ಪೋಣಿಸಿ ಒಡೆಯುವ ಮೂಲಕ ಸಂಪ್ರದಾಯವನ್ನು ಯುವಕರು ಮೆರೆದರು. ಹಿಂದಿನಿಂದಲೂ ಹಿರಿಯರು ಕಿರಿಯರಿಗೆ ಇದನ್ನು ರಚಿಸಿ ಕೊಡುತ್ತಿದ್ದರು. ದೇವಳದಿಂದ ಕಾಶಿಕಟ್ಟೆಯ ತನಕ ಮಕ್ಕಳು, ಯುವಕರು ಮತ್ತು ಹಿರಿಯರು ಪೇಟ್ಲೆಬೆಡಿಯನ್ನು ಒಡೆದು ಸಂಭ್ರಮಿಸಿದರು.