ಅಲೆಕ್ಕಾಡಿ ಅಕ್ಷಯ ಆಳ್ವರ ಹಟ್ಟಿಯಿಂದ ಶಾಲಿನಿ ರಜನೀಶ್ ಮನೆ ಹಟ್ಟಿಗೆ
ರಾಜಧಾನಿ ಬೆಂಗಳೂರು ಸೇರಿದ ಹಂಸಿ ಮತ್ತು ಸ್ವರ್ಣ ಕಪಿಲೆ ಗೋವು
ಸುಳ್ಯದ ಕೃಷಿಕರೊಬ್ಬರ ಹಟ್ಟಿಯಿಂದ ಮಲೆನಾಡು ಗಿಡ್ಡ ಗೋತಳಿಯೊಂದು ರಾಜ್ಯ ಸರಕಾರದ ಮುಖ್ಯಕಾರ್‍ಯದರ್ಶಿಯವರ ಮನೆ ಹಟ್ಟಿ ಸೇರಿದೆ. ಆ ಮೂಲಕ ಮಲೆನಾಡು ಗಿಡ್ಡ ಗೋತಳಿಯ ಸಂರಕ್ಷಣೆ ಮತ್ತು ಸಂವರ್ಧನೆ ಅಭಿಯಾನದಲ್ಲಿ ಗೌರವದ ಮೈಲಿಗಲ್ಲು ಸ್ಥಾಪಿತವಾಗಿದೆ.
ಅಳಿವಿನಂಚಿಗೆ ಹೋಗುತ್ತಿರುವ ದೇಸೀ ಜಾನುವಾರು ತಳಿ ಮಲೆನಾಡು ಗಿಡ್ಡದ ಉಳಿವಿಗಾಗಿ ರಾಮಚಂದ್ರಾಪುರ ಮಠದಿಂದ ಕಾರ್ಯಕ್ರಮಗಳು ನಡೆದಿತ್ತು. ಇತ್ತ ಈ ಭಾಗದ ಕೃಷಿಕರಾದ ಅಲೆಕ್ಕಾಡಿಯ ಅಕ್ಷಯ ಆಳ್ವ, ಎಣ್ಮೂರಿನ ಪ್ರಸನ್ನ ಭಟ್ ಮೊದಲಾದವರು ಮಲೆನಾಡು ಗಿಡ್ಡ ಜಾನುವಾರುಗಳನ್ನು ಸಾಕುತ್ತಿದ್ದರು. ಸದಾಶಿವ ಭಟ್ ಮರಿಕೆ ಸೇರಿದಂತೆ ಹಲವು ಕೃಷಿ ತಜ್ಞರ ಜತೆಯಾಗಿ ಇದನ್ನು ಮತ್ತಷ್ಟು ಬೆಳೆಸುವ ದೃಷ್ಠಿಯಿಂದ ಈ ಭಾಗದಲ್ಲಿ ಸಮಾನಮನಸ್ಕ ಕೃಷಿಕರು ಜೊತೆ ಸೇರಿ ಸಂರಕ್ಷಣೆ ಮತ್ತು ಸಂವರ್ಧನೆಯ ಹಿನ್ನಲೆಯಲ್ಲಿ ವಾಟ್ಸಾಪ್ ಗ್ರೂಪ್ ಒಂದನ್ನು ರಚಿಸಿ ಕಾರ್ಯಪ್ರರ್ವತರಾಗಿ ಅಭಿಯಾನ ಶುರು ಮಾಡಿದರು. ಸಾಕುವವರಿಗೆ ಹಸುಗಳನ್ನು ನೀಡತೊಡಗಿದರು.
ಈ ಕುರಿತ ಅಭಿಯಾನದ ವಿಶೇಷ ಸ್ಟೋರಿ ಕೆಲವು ತಿಂಗಳ ಹಿಂದೆ ಸುಳ್ಯ ಸುದ್ದಿ ಚಾನೆಲ್ ನಲ್ಲಿ ಪ್ರಸಾರಗೊಂಡಿದ್ದು, ಲಕ್ಷಾಂತರ ಮಂದಿ ಅದನ್ನು ವೀಕ್ಷಿಸಿದ್ದರು. ಅಭಿಯಾನದ ಹಿನ್ನೆಲೆಯಲ್ಲಿ ಅಕ್ಷಯ ಆಳ್ವರ ಮನೆಯಲ್ಲಿ ಮಾಹಿತಿ ಸಂಕಿರಣ ಕೂಡಾ ನಡೆದಿತ್ತು.
ಇತ್ತೀಚೆಗೆ ಕರ್ನಾಟಕ ರಾಜ್ಯ ಸರಕಾರದ ಮುಖ್ಯ ಕಾರ್‍ಯದರ್ಶಿ ಶಾಲಿನಿ ರಜನೀಶ್ ರವರು ತಾವು ಹೊಸದಾಗಿ ಕಟ್ಟಿಸಿದ ಮನೆಯ ಪಕ್ಕ ಹಟ್ಟಿಯೊಂದನ್ನು ಕೂಡಾ ನಿರ್ಮಿಸಿದ್ದು, ಅಲ್ಲಿ ಮಲೆನಾಡು ಗಿಡ್ಡ ತಳಿಯ ಜಾನುವಾರು ಸಾಕಲು ನಿರ್ಧರಿಸಿದ್ದರು.
ಶಾಲಿನಿ ಹಾಗೂ ಅವರ ಪತಿ ರಜನೀಶ್ ಗೋಯೆಲ್ ರವರು ಹಲವು ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಆಡಳಿತ ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿರುವ ಕಾರಣ ಸಹಜವಾಗಿ ಈ ಭಾಗದ ಪರಿಚಯವಿತ್ತು.
ಈ ಹಿನ್ನೆಲೆಯಲ್ಲಿ ಕೊಯಿಲ ಪಶುಪಾಲನಾ ಕೇಂದ್ರವನ್ನು ಸಂಪರ್ಕಿಸಿ ಮಲೆನಾಡು ತಳಿಯ ಬಗ್ಗೆ ವಿಚಾರಿಸಿದ್ದರು. ಆದರೆ ಅಲ್ಲಿಂದ ರೈತರಿಗೆ ಜಾನುವಾರುಗಳ ವಿತರಣೆ ಮಾತ್ರ ಸಾಧ್ಯತೆ ಇತ್ತು. ಹೀಗಾಗಿ ಅಲ್ಲಿಯ ಉಪನಿರ್ದೇಶಕರಾಗಿರುವ ಡಾ.ಪ್ರಸನ್ನ ಹೆಬ್ಬಾರ್ ರವರು ಅಕ್ಷಯ ಆಳ್ವರವರನ್ನು ಸಂಪರ್ಕಿಸಿದರು. ಸರಕಾರ ಮಟ್ಟದ ಅಧಿಕಾರಿಗಳ ಬಳಿಗೇ ಮಲೆನಾಡು ಗಿಡ್ಡ ತಳಿ ಹೋಗುವುದರಿಂದ ಆಳ್ವರು ಒಪ್ಪಿಕೊಂಡರು.
ಈ ಹಿನ್ನೆಲೆಯಲ್ಲಿ ಅಲೆಕ್ಕಾಡಿಗೆ ಭೇಟಿ ನೀಡಿದ ಹಿರಿಯ ಅಧಿಕಾರಿಗಳು ಹಂಸಿ ಎನ್ನುವ ಐದು ವರ್ಷದ ಗೋವು, ಅದರ ಕರು ಪಂಚಮಿ, ಹಾಗೂ ಅಕ್ಷಯ ಆಳ್ವರು ನೀಡಿದ್ದ ಹಸು ಸ್ವರ್ಣ ಕಪಿಲೆ ಬಾಳುಗೋಡು ರಾಜಶೇಖರ ಭಟ್ ಎಂಬವರಲ್ಲಿದ್ದು, ಎರಡೂವರೆ ವರ್ಷ ಪ್ರಾಯದ ಆ ಹಸು ಮತ್ತು ಕರು ಸೇರಿದಂತೆ ಎರಡು ಹಸು ಮತ್ತು ಎರಡು ಕರುಗಳನ್ನು ಗೊತ್ತುಪಡಿಸಿದರು. ಇವುಗಳನ್ನು ಮುಖ್ಯ ಕಾರ್ಯದರ್ಶಿಯವರು ಖರೀದಿಸಲು ನಿರ್ಧರಿಸಿದರು.
ಅದರಂತೆ ಧಾರ್ಮಿಕ ವಿಧಿ ವಿಧಾನ, ಪ್ರಾರ್ಥನೆ, ಗೋಪೂಜೆ ನಡೆದು ಹಸ್ತಾಂತರ ಪ್ರಕ್ರಿಯೆ ನಡೆದು ಹಸು ಹಾಗೂ ಕರುವನ್ನು ಬೆಂಗಳೂರಿಗೆ ಕೊಂಡೊಯ್ಯಲಾಯಿತು.
ಕಣ್ಣೀರು : ಮಲೆನಾಡು ಗಿಡ್ಡ ತಳಿ ಸರಕಾರ ಮಟ್ಟದ ಉನ್ನತ ಅಧಿಕಾರಿಯೊಬ್ಬರ ಮನೆ ಸೇರುವುದು ಅಭಿಯಾನದ ದೃಷ್ಟಿಯಿಂದ ಮಹತ್ವದ್ದಾಗಿದ್ದರೂ, ಊರು ಬಿಡುವ ಹಂಸಿ ಕಣ್ಣಲ್ಲಿ ನೀರು ಸುರಿಯುತ್ತಿದ್ದುದೂ ಕಂಡು ಬಂತು.
ಗೋ ಪೂಜೆ ಸಂದರ್ಭದಲ್ಲಿ ಸಂರಕ್ಷಣೆ ಮತ್ತು ಸಂವರ್ಧನಾ ಅಭಿಯಾನದ ಸದಾಶಿವ ಭಟ್ ಮರಿಕೆ, ಪ್ರಸನ್ನ ಭಟ್ ಎಣ್ಮೂರು, ಕೊಯಿಲ ಪಶುಪಾಲನಾ ಕೇಂದ್ರದ ಉಪ ನಿರ್ದೇಶಕ ಡಾ.ಪ್ರಸನ್ನ ಹೆಬ್ಬಾರ್ , ಸುಳ್ಯ ತಾಲೂಕು ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ನಿತಿನ್ ಪ್ರಭು, ಪಶುವೈದ್ಯ ಡಾ.ಸೂರ್ಯನಾರಾಯಣ ಭಟ್, ಅಕ್ಷಯ ಆಳ್ವರವರ ಮನೆಯವರು ಉಪಸ್ಥಿತರಿದ್ದರು.
ಬೆಂಗಳೂರಿನಲ್ಲಿ ಶಾಲಿನಿ ರಜನೀಶ್ ಮತ್ತು ಮನೆಯವರು ಈ ಹಸುಗಳನ್ನು ಬರಮಾಡಿಕೊಂಡರು.