ಚರಿತ್ರೆ ಅಭಿಮಾನಕ್ಕೆ ಕಾರಣವಾಗಬೇಕು, ಅಹಂಕಾರಕಲ್ಲ: ಡಾ. ಬಿಳಿಮಲೆ

0

ಚರಿತ್ರೆಯ ಸಂಕೀರ್ಣ ಬೆಳವಣಿಗೆಗಳನ್ನು ಸರಳ ಗೊಳಿಸಿ ನೋಡಬಾರದು. ಚರಿತ್ರೆಗಳು ಅಭಿಮಾನಕ್ಕೆ ಕಾರಣವಾಗಬೇಕೆ ವಿನಹ ಅಹಂಕಾರಕ್ಕೆ ಕಾರಣವಾಗಬಾರದು ಎಂದು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.

ಸುಳ್ಯ ನೆಹರೂ ಸ್ಮಾರಕ ಕಾಲೇಜು, ಹಂಪಿ ಯುನಿವರ್ಸಿಟಿ ಪ್ರಸಾರಾಂಗ ವಿಭಾಗ ಮತ್ತು ಬಂಟಮಲೆ ಅಕಾಡೆಮಿಯ ಆಶ್ರಯದಲ್ಲಿ ಇಂದು ಸುಳ್ಯದ ನೆಹರು ಸ್ಮಾರಕ ಕಾಲೇಜಿನಲ್ಲಿ ನಡೆದ ಅಮರ ಸುಳ್ಯ ಸಂಗ್ರಾಮ- 1837 ರಾಷ್ಟ್ರೀಯ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.

ಕೆಲವು ವರ್ಷಗಳ ಹಿಂದೆ ಕೇಂದ್ರ ಸರ್ಕಾರ ಮುನ್ನಲೆಗೆ ಬಾರದೆ ಅವಜ್ಞೆಗೆ ಒಳಗಾಗಿರುವ ಸ್ವಾತ್ರಂತ್ರ್ಯ ಹೋರಾಟಗಾರರನ್ನು ನೆನಪಿಸುವ ದೃಷ್ಠಿಯಿಂದ ಯೋಜನೆಯೊಂದನ್ನು ದೇಶಾದ್ಯಂತ ಕೈಗೆತ್ತಿಗೊಂಡಿತು. ಇದರಲ್ಲಿ 7000 ರಷ್ಟು ಹೆಸರುಗಳನ್ನು ಬಂದಿದ್ದು 252 ಹೆಸರುಗಳನ್ನು ಅಂತಿಮಗೊಳಿಸಲಾಯಿತು. ವಿಪರ್ಯಾಸವೆಂದರೆ ಈ ಹೆಸರುಗಳಲ್ಲಿ ಅಮರ ಕ್ರಾಂತಿ ಹೋರಾಟಗಾರರ ಹೆಸರುಗಳಾಗಾಗಲೀ, ಕಾರ್ನಾಡ ಸದಾಶಿವ ರಾಯರ ಹೆಸರಾಗಲೀ ಇರಲಿಲ್ಲ. ಇದು ಇಂದಿನ ತಲೆಮಾರಿನ ಸಂಶೋಧನಾ ಮಾನಸಿಕತೆಗೆ ಸಾಕ್ಷಿ ಎಂದ ಡಾ. ಬಿಳಿಮಲೆಯವರು , ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಕಾರಣ ಸುಳ್ಯಕ್ಕೂ ಬೆಲೆ ತೆರಬೇಕಾಗಿ ಬಂತು. ಅಮರ ಸ್ವಾತಂತ್ರ್ಯ ಹೋರಾಟದ ಬಳಿಕದ 100 ವರ್ಷಗಳಲ್ಲಿ ಇಲ್ಲಿ ಯಾವ ಅಭಿವೃದ್ಧಿ, ಬೆಳವಣಿಗೆಗೆಗಳು ಆಗಲಿಲ್ಲ. ಕುರುಂಜಿಯವರ ಕಾರಣದಿಂದ ಆ ಬಳಿಕ ಇಲ್ಲಿ ಬೆಳವಣಿಗೆಗಳು ಆರಂಭವಾಯಿತು ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಹಂಪಿ ಕನ್ನಡ ವಿಶ್ವ ವಿದ್ಯಾನಿಲಯದ ಕುಲಪತಿಗಳಾದ ಡಾ. ಡಿ.ವಿ. ಪರಮಶಿವಮೂರ್ತಿ ಮಾತನಾಡಿ, ಅಮರ ಕ್ರಾಂತಿ ಹೋರಾಟ ದಂತ ಅನೇಕ ಸಂಗ್ರಾಮಗಳು ಇತಿಹಾಸದಲ್ಲಿ ದಾಖಲಾಗಿಲ್ಲ. ಇಂಥ ಹೋರಾಟಗಳನ್ನು ಜಗಳ , ದರೋಡೆ ಎಂದು ಕಡೆಗಣಿಸಲಾಗಿತ್ತು . ಆದರೆ ಇವೆಲ್ಲವೂ ಆತ್ಮಾಭಿಮಾನದ ಸಂಗತಿಗಳು. ಇಂಥಹ ವಿಚಾರ ಸಂಕರಣದ ಮೂಲಕ ಇಂಥ ಹೋರಾಟಗಳು ಮುಖ್ಯ ಇತಿಹಾಸಗಳನ್ನು ಗುರುತಿಸಲ್ಪಟ್ಟು ಭವಿಷ್ಯದ ತೀರ್ಮಾನಕ್ಕೆ ಪ್ರೇರಣೆಯಾಗಲಿ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿದ್ದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ನಮ್ಮ ಹೋರಾಟಗಾರರನ್ನೇ ನಾವು ಕಡೆಗಣಿಸುತ್ತಿರುವುದು ವಿಪರ್‍ಯಾಸ . ಹೋರಾಟಗಾರರು ಮಾತ್ರವಲ್ಲ ಅನೇಕ ಸಾಧಕರು ಕೂಡ ತೆರೆಯ ಮರೆಯಲ್ಲಿದ್ದರು .ಅಂತಹ ಸಾಧಕರನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಗುರುತಿಸುವ ಕಾರ್ಯ ಮಾಡಿದ್ದಾರೆ ಎಂದರು.