ಸೋಣಂಗೇರಿಯಲ್ಲಿ ನೂತನ ಬಸ್ಸು ತಂಗುದಾಣ ಹಾಗೂ ಅಂಗನವಾಡಿ ಪುನರ್ ನಿರ್ಮಾಣಕ್ಕೆ ಶಾಸಕರಿಗೆ ಮನವಿ

0

ಜಾಲ್ಸೂರು ಗ್ರಾಮದ ಸೋಣಂಗೇರಿಯಲ್ಲಿ ನೂತನ ಬಸ್ಸು ತಂಗುದಾಣ ನಿರ್ಮಾಣ ಹಾಗೂ ಸೋಣಂಗೇರಿ ಅಂಗನವಾಡಿ ಕೇಂದ್ರವನ್ನು ಪುನರ್ ನಿರ್ಮಾಣ ಮಾಡುವಂತೆ ಜಾಲ್ಸೂರು ಗ್ರಾಮ ಪಂಚಾಯತಿ ನಿಯೋಗವು ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ಸೆ.2ರಂದು ಮನವಿ ಸಲ್ಲಿಸಿದರು.

ಸೋಣಂಗೇರಿಯಲ್ಲಿ ಈ ಹಿಂದೆ ಇದ್ದ ಬಸ್ಸು ತಂಗುದಾಣ ಹಾಗೂ ಸಾರ್ವಜನಿಕ ಶೌಚಾಲಯವು ರಸ್ತೆ ಅಗಲೀಕರಣ ಕಾಮಗಾರಿಯ ಸಂದರ್ಭದಲ್ಲಿ ತೆರವುಗೊಳಿಸಲ್ಪಟ್ಟಿದ್ದು, ಅಲ್ಲಿ ಪ್ರಯಾಣಿಕರ ನೂತನ ತಂಗುದಾಣ ನಿರ್ಮಾಣ ಹಾಗೂ ಸೋಣಂಗೇರಿಯಲ್ಲಿ ಈ ಹಿಂದೆ ಇದ್ದ ಅಂಗನವಾಡಿ ಕೇಂದ್ರ ತಗ್ಗು ಪ್ರದೇಶದಲ್ಲಿದ್ದು, ಮಳೆಗಾಲದಲ್ಲಿ ಮಳೆನೀರು ಅಂಗನವಾಡಿ ಕೇಂದ್ರದ ಒಳ ನುಗ್ಗಿ ಅಂಗನವಾಡಿ ಸದ್ಯ ಮುಚ್ಚಲ್ಪಟ್ಟಿದ್ದು, ಸೋಣಂಗೇರಿಯಲ್ಲಿಯೇ ಜಾಗ ಗುರುತಿಸಿ, ಅಂಗನವಾಡಿ ಕೇಂದ್ರ ಪುನರ್ ನಿರ್ಮಾಣ ಮಾಡುವಂತೆ ಶಾಸಕರಿಗೆ ನೀಡಿದ ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಜಾಲ್ಸೂರು ಗ್ರಾಮ ಪಂಚಾಯತಿ ಹಿಂಬದಿ ಗುಡ್ಡಪ್ರದೇಶವಿದ್ದು, ಮಳೆಗಾಲದಲ್ಲಿ ಗ್ರಾ.ಪಂ. ಸಭಾಂಗಣದ ಮೇಲೆ ಗುಡ್ಡದಿಂದ ಮಣ್ಣು ಕುಸಿಯುತ್ತಿದ್ದು, ಗುಡ್ಡದ ಮಣ್ಣು ತೆರವುಗೊಳಿಸಲು ವಿಶೇಷ ಅನುದಾನ ಒದಗಿಸುವಂತೆ ಶಾಸಕರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ತಿರುಮಲೇಶ್ವರಿ ಮರಸಂಕ, ಉಪಾಧ್ಯಕ್ಷೆ ಶ್ರೀಮತಿ ತಿರುಮಲೇಶ್ವರಿ ಅರ್ಭಡ್ಕ, ಗ್ರಾ.ಪಂ. ಪ್ರಭಾರ ಅಭಿವೃದ್ಧಿ ಅಧಿಕಾರಿ ಚೆನ್ನಪ್ಪ ನಾಯ್ಕ, ಸದಸ್ಯರುಗಳಾದ ಕೆ.ಎಂ. ಬಾಬು ಕದಿಕಡ್ಕ, ಪಿ.ಆರ್. ಸಂದೀಪ್ ಕದಿಕಡ್ಕ, ಎನ್‌.ಎಂ. ಸತೀಶ್ ಕೆಮನಬಳ್ಳಿ, ಅಬ್ದುಲ್ ಮಜೀದ್ ನಡುವಡ್ಕ, ಈಶ್ವರ ನಾಯ್ಕ ಸೋಣಂಗೇರಿ, ಶಿವಪ್ರಸಾದ್ ನೀರಬಸಿರು, ಶ್ರೀಮತಿ ಗೀತಾ ಚಂದ್ರಹಾಸ ಅರ್ಭಡ್ಕ, ಶ್ರೀಮತಿ ದೀಪಾ ಅಜಕಳಮೂಲೆ, ಸ್ಥಳೀಯರಾದ ಮಾದವ ಗೌಡ ಕಾಳಮನೆ ಉಪಸ್ಥಿತರಿದ್ದರು.