ನಾಗಪಟ್ಟಣ: ಪಯಸ್ವಿನಿ ನದಿ ತಟದಲ್ಲಿ ದೇವರ ಮೀನುಗಳಿಗೆ ಬಾಗಿನ ಸಮರ್ಪಣೆ

0

ನಿರಂತರ ನಾಲ್ಕುವರೆ ತಿಂಗಳ ಕಾಲ ನಡೆಯಲಿದೆ ಆಚರಣೆ

ಸುಳ್ಯ ಚೆನ್ನಕೇಶವ ದೇವಸ್ಥಾನಕ್ಕೆ ಸಂಬಂಧಪಟ್ಟಂತೆ ಸುಳ್ಯದ ಜೀವನದಿ ಪಯಸ್ವಿನಿಯಲ್ಲಿ ದೇವರ ಮತ್ಸ್ಯಗಳಿಗೆ ಬಾಗಿನ ಅರ್ಪಿಸುವ ಅಪರೂಪದ ಆಚರಣೆಯು ಸೆ .2 ರಂದು ಆರಂಭಗೊಂಡಿತು.

ಶ್ರಾವಣ ಮಾಸದ ಅಮಾವಾಸ್ಯೆಯ ದಿನ ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಆಡಳಿತ ಮುಖ್ಯಸ್ಥರು, ಬಲ್ಲಾಳ ಪ್ರತಿನಿಧಿಗಳು ಮತ್ತು ಅರ್ಚಕರು ಹಾಗೂ ದೇವಸ್ಥಾನಕ್ಕೆ ಸಂಬಂಧಪಟ್ಟವರು ದೇವಸ್ಥಾನದಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿ ಬೂಡು ಶ್ರೀ ಭಗವತಿ ದೇವಸ್ಥಾನದಲ್ಲಿ ಹಾಗೂ ನಾಲ್ಕು ಸ್ಥಾನ ದೈವಗಳ ಚಾವಡಿಯಲ್ಲಿ ಪ್ರಾರ್ಥನೆಯನ್ನು ನೆರವೇರಿಸಿ ನದಿಯ ತಟಕೆ ಬಂದು ಪೂಜೆಯನ್ನು ಸಲ್ಲಿಸಲಾಗುವುದು.

ಅರ್ಚಕರ ನೇತೃತ್ವದಲ್ಲಿ
ನದಿ ತಟದಲ್ಲಿ ದೀಪ ಸ್ವಸ್ತಿಕವಿಟ್ಟು ಅದಕ್ಕೆ ಪೂಜೆಯನ್ನು ಸಲ್ಲಿಸಿ ಗಂಗಾ ವರುಣ ಪೂಜೆಯನ್ನು ನಡೆಸಿ ನೈವೇದ್ಯವನ್ನು ತಯಾರಿಸುತ್ತಾರೆ. ಬಳಿಕ ಎಲ್ಲರೂ ತೀರ್ಥ ಸ್ನಾನ ಮಾಡಿ ಒಟ್ಟಾಗಿ ಪ್ರಾರ್ಥಿಸಿ ಅಕ್ಕಿ ಭತ್ತ ತೆಂಗಿನಕಾಯಿಯ ಹೋಳು ಬಾಳೆಹಣ್ಣು ಸೇರಿಸಿ ತಯಾರಿಸಿದ ನೈವೇದ್ಯ ಮತ್ತು ಹೂವು ಗಂಧದೊಂದಿಗೆ ದೇವರ ಮೀನುಗಳಿಗೆ ಅರ್ಪಿಸುವುದು ಸಂಪ್ರದಾಯವಾಗಿದೆ.


ಈ ಸಂದರ್ಭದಲ್ಲಿ ದೇವಸ್ಥಾನಕ್ಕೆ ಮತ್ತು ಬೂಡು ಭಗವತಿ ಕ್ಷೇತ್ರಕ್ಕೆ ಸಂಬಂಧಪಟ್ಟ ಎಲ್ಲರೂ ಉಪಸ್ಥಿತರಿರುತ್ತಾರೆ. ಸೀಮೆಯ ಮಲ್ಲಿಕಾರ್ಜುನ ದೇವಸ್ಥಾನದ ಮತ್ಸ್ಯ ತೀರ್ಥದ ದೇವರ ಮೀನುಗಳು ಈ ನೈವೇದ್ಯವನ್ನು ಸ್ವೀಕರಿಸಲು ಇಲ್ಲಿಗೆ ಆಗಮಿಸುತ್ತವೆ ಎಂಬ ನಂಬಿಕೆ ಇದೆ.


ಮುಂದಿನ‌ ನಾಲ್ಕುವರೆ ತಿಂಗಳು ಪ್ರತಿದಿನ ಪನ್ನೇ ಬಿಡು ಚಾವಡಿಗೆ ಸಂಬಂಧಿಸಿದ ಬಲ್ಲಾಳರ ಪ್ರತಿನಿಧಿ ಅಕ್ಕಿಯನ್ನು ನದಿಯ ಮೀನುಗಳಿಗೆ ಸಮರ್ಪಣೆ ಮಾಡುವ ಕಾರ್ಯವನ್ನು ಮುಂದುವರಿಸಿಕೊಂಡು ಬರುತ್ತಾರೆ. ಚೆನ್ನಕೇಶವ ದೇವಸ್ಥಾನದ ಅರ್ಚಕ ಹರಿಕೃಷ್ಣ ಭಟ್ ಕಾಯರ್ತೋಡಿ ಪೂಜಾ ಕೈಂಕರ್ಯ ನೆರವೇರಿಸಿದರು. ದೇವಸ್ಥಾನದ ಅನುವಂಶಿಕ ಮೊಕ್ತೇಸರರ ಪೈಕಿ ಕೃಪಾಶಂಕರ ತುದಿಯಡ್ಕ, ಬಳ್ಳಾಲ ಪ್ರತಿನಿಧಿ ಬೂಡು ರಾಧಾಕೃಷ್ಣ ರೈ, ಪ್ರಮುಖರಾದ ಶಿವರಾಮ ಕೇರ್ಪಳ, ಸುನಿಲ್ ಕೇರ್ಪಳ, ಮಹಾಬಲ ರೈ ಜನಾರ್ಧನ ನಾಯ್ಕ್, ಕುಸುಮಾದರ ರೈ ಬೂಡು, ನ.ಪಂ. ಸದಸ್ಯೆ ಸುಶೀಲಾ ಜಿನ್ನಪ್ಪ ಕಲ್ಲುಮುಟ್ಲು, ನಾರಾಯಣಗೌಡ ಕಳಗಿ, ತಿರುಮಲೇಶ್ವರ ಕಲ್ಲುಮುಟ್ಲು, ವಿಜಯ್ ಕುಮಾರ್, ಚಂದ್ರಶೇಖರ ಕೇರ್ಪಳ, ಮೋನಪ್ಪ ಪೂಜಾರಿ, ಭಾಸ್ಕರ್ ರೈ, ತಿರುಮಲೇಶ್ವರ ಕಲ್ಲುಮುಟ್ಲು, ನಾರಾಯಣಗೌಡ ಕಳಗಿ ಮತ್ತಿತರರು ಉಪಸ್ಥಿತರಿದ್ದರು.