ಕೊಡಿಯಾಲ ಗ್ರಾಮ ಪಂಚಾಯತ್ ಜಮಾಬಂದಿಯಲ್ಲಿ ಮಾಜಿ ಅಧ್ಯಕ್ಷರಿಂದ ಭ್ರಷ್ಟಾಚಾರದ ಕುರಿತು ಆರೋಪ – ವೀಡಿಯೋ ವೈರಲ್

0

ಪಂಚಾಯತ್ ಅಧ್ಯಕ್ಷ ಹರ್ಷನ್ ಕೆ.ಟಿ.ಯವರಿಂದ ಸ್ಪಷ್ಟೀಕರಣ – ಪತ್ರಿಕಾಗೋಷ್ಠಿ

ಕೊಡಿಯಾಲ ಗ್ರಾಮ ಪಂಚಾಯತ್ ನಲ್ಲಿ ಆ.೨೮ ರಂದು ನಡೆದ ೨೦೨೩- ೨೪ನೇ ಸಾಲಿನ ಜಮಾಬಂದಿ ಸಭೆಯಲ್ಲಿ ಪಂಚಾಯತ್‌ನ ಮಾಜಿ ಅಧ್ಯಕ್ಷರಾದ ಪ್ರದೀಪ್ ರೈ ಅಜ್ರಂಗಳರವರು ಭ್ರಷ್ಟಾಚಾರದ ಆರೋಪ ಮಾಡಿ ವಿಡಿಯೋ ವೈರಲ್ ಮಾಡಿರುವುದು ಸರಿಯಲ್ಲ ಮತ್ತು ಇದು ಸತ್ಯಕ್ಕೆ ದೂರವಾದದ್ದು ಎಂದು ಗ್ರಾಮ ಪಂಚಾಯತ್ ಅಧ್ಯಕ್ಷ ಹರ್ಷನ್ ಕೆ.ಟಿ.ಯವರು ಸೆ.೦೪ ರಂದು ಪತ್ರಿಕಾಗೋಷ್ಠಿ ನಡೆಸಿ ತಿಳಿಸಿದರು.

ಪಂಚಾಯತ್ ಸಿಬ್ಬಂದಿಗಳಿಂದ ಪೂರ್ವನಿರ್ಧರಿತವಾಗಿ ಪಂಚಾಯತ್ ನ ಕೆಲಸಕ್ಕಾಗಿ ಬಳಸುವ ಮೊಬೈಲ್ ನಿಂದ ವಿಡಿಯೋ ಮಾಡುವಂತೆ ತಿಳಿಸಿ ನಂತರ ಜಮಾಬಂದಿ ಸಭೆ ಮುಕ್ತಾಯವಾದ ನಂತರ ಮತ್ತೆ ಸಿಬ್ಬಂದಿಗಳಿಗೆ ಒತ್ತಡ ಹಾಕಿ ಪಂಚಾಯತ್ ನ ಅಧ್ಯಕ್ಷರಾಗಲಿ, ಉಪಾಧ್ಯಕ್ಷರಿಗಾಗಲಿ ಅಥವಾ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ಬಾರದೇ ಸಿಬ್ಬಂದಿಗಳು ವಿಡಿಯೋವನ್ನು ಮಾಜಿ ಅಧ್ಯಕ್ಷರಾದ ಪ್ರದೀಪ್ ರೈಯವರಿಗೆ ರವಾನೆ ಮಾಡಿರುತ್ತಾರೆ. ಅಲ್ಲದೆ ಈ ವಿಡಿಯೋವನ್ನು ಎಡಿಟಿಂಗ್ ಮಾಡಿ ಭ್ರಷ್ಟಾಚಾರದ ಆರೋಪವನ್ನು ಮಾತ್ರ ಬಿಂಬಿಸುವಂತೆ ಮಾಡಿ ವೈರಲ್ ಮಾಡಿರುತ್ತಾರೆ.

ನಮ್ಮ ಆಡಳಿತ ಅವಧಿಯ ಮೊದಲನೇ ಅಧಿಕಾರ ಅವಧಿಯಲ್ಲಿ ಪ್ರದೀಪ್ ರೈ ಅಜ್ರಂಗಳರವರು ಅಧ್ಯಕ್ಷರಾಗಿ ಮತ್ತು ನಾನು ಉಪಾಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡಿದ್ದೆವು.
ಈ ಸಂದರ್ಭದಲ್ಲಿ ೨.೫ ವರ್ಷದ (೩೦ ತಿಂಗಳು) ಮೊದಲನೇ ಅಧಿಕಾರದ ಅವಧಿಯಲ್ಲಿ ಪೂರ್ವ ನಿರ್ಧರಿತ ಹಿರಿಯರ ಮತ್ತು ಕಾರ್ಯಕರ್ತರ ಸಮ್ಮುಖದಲ್ಲಿ ನಡೆದ ಮಾತುಕತೆಯಂತೆ ೨೦ ತಿಂಗಳು ಪ್ರದೀಪ್ ರೈ ಅಧ್ಯಕ್ಷರು ನಂತರದ ೧೦ ತಿಂಗಳು ನನಗೆ ಅಧ್ಯಕ್ಷ ಸ್ಥಾನ ನೀಡಬೇಕೆಂದು ಮಾತುಕತೆ ಆಗಿತ್ತು.

ನಾವು ೧೦ ತಿಂಗಳ ಅಧ್ಯಕ್ಷ ಸ್ಥಾನದ ಅಧಿಕಾರ ಕೇಳಲು ಕಾರಣವೇನೆಂದರೆ ನಮ್ಮ ಊರಾದ ಕಲ್ಪಡಕ್ಕೆ ಸುಮಾರು ೩೨ ವರ್ಷಗಳಿಂದ ಕೊಡಿಯಾಲ ಪಂಚಾಯತ್ ನ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಸಿಗಲಿಲ್ಲ.
ಅದಕ್ಕಾಗಿ ಅಭಿವೃದ್ಧಿಯ ದೃಷ್ಟಿಕೋನವನ್ನಿಟ್ಟುಗೊಂಡು ಬೇಡಿಕೆ ಇಟ್ಟೆವು. ಅದಕ್ಕೆ ಪೂರ್ವನಿರ್ಧರಿತ ಮಾತಿಗೆ ಪ್ರಾಧಾನ್ಯತೆ ಕೊಡದೆ ಅಧಿಕಾರವನ್ನು ೩೦ತಿಂಗಳು ತನ್ನಲ್ಲೇ ಉಳಿಸಿಕೊಂಡು, ಎರಡನೇ ಅವಧಿಗೂ ಅಧಿಕಾರ ಪಡೆಯಲು ಪ್ರಯತ್ನಿಸಿದರು. ಆದರೆ ಎರಡನೇ ಅವಧಿಯ ಅಧಿಕಾರದ ಸಮಯದಲ್ಲಿ ನಮ್ಮ ಪಂಚಾಯತ್ ನ ಯಾವುದೇ ಸದಸ್ಯರ ಬೆಂಬಲ ಸಿಗದ ಕಾರಣ ಮಾಜಿ ಅಧ್ಯಕ್ಷರಾದ ಪ್ರದೀಪ್ ರೈ ಅಜ್ರಂಗಳರವ

ರಿಗೆ ಅಧಿಕಾರ ತಪ್ಪಿಹೋಯಿತು. ಬಳಿಕ ನನ್ನನ್ನು ಅಧ್ಯಕ್ಷನಾಗಿ ಶ್ರೀಮತಿ ಚಿತ್ರಾವತಿಯನ್ನು ಉಪಾಧ್ಯಕ್ಷರಾಗಿ ಉಳಿದ ಎಲ್ಲಾ ಸದಸ್ಯರ ಬೆಂಬಲದೊಂದಿಗೆ ಅವಿರೋಧವಾಗಿ ಆಯ್ಕೆಗೊಂಡೆವು.
ನಾನು ದಿನಾಂಕ ೧೮-೦೮-೨೦೨೩ ರಂದು ಎರಡನೇ ಅವಧಿಯ ಕೊಡಿಯಾಲ ಗ್ರಾಮ ಪಂಚಾಯತ್ ನ ಅಧ್ಯಕ್ಷನಾಗಿ ಅಧಿಕಾರ ಪಡೆದುಕೊಂಡೆನು. ನಾನು ಕೊಡಿಯಾಲ ಗ್ರಾಮ ಪಂಚಾಯತ್ ಅಧ್ಯಕ್ಷನಾಗಿ ಅಧಿಕಾರ ವಹಿಸಿದ ನಂತರ ನಡೆದ ಯಾವುದೇ ಕಾಮಗಾರಿಯಲ್ಲಿ ಭ್ರಷ್ಟಚಾರ ಮಾಡಿಲ್ಲವೆಂದು ಅವರು ಹೇಳಿದರು. ಈಗಾಗಲೇ ಭ್ರಷ್ಟಚಾರ ಆರೋಪ ಹೊರಿಸಿರುವ ಮಾಜಿ ಅಧ್ಯಕ್ಷರಾದ ಪ್ರದೀಪ್ ರೈ ಅಜಿರಂಗಳರವರ ಅಧಿಕಾರದ ಅವಧಿಯಲ್ಲಿ ಆಗಿನ ಪ್ರಭಾರ ಅಭಿವೃದ್ಧಿ ಅಧಿಕಾರಿಯವರು ಸೇರಿ ಯಾವುದೇ ಸಕ್ಷಮ ಪ್ರಾಧಿಕಾರದ(ಇಲಾಖಾವಾರು) ಅನುಮತಿ ಇಲ್ಲದೆ ಉಪಾಧ್ಯಕ್ಷರು ಮತ್ತು ಸದಸ್ಯರ ಗಮನಕ್ಕೆ ತರದೆ ಕಸವಿಲೇವಾರಿ ಮಾಡುವ ಪ್ಲಾಸ್ಟಿಕ್ ಶೆಡ್, ನ.ರೆ.ಗಾ ಯೋಜನೆಯಡಿಯಲ್ಲಿ ಸೃಷ್ಟಿಸಿ ಬೆಳೆಸಿದ ಗೇರು ಬೀಜದ ಮರಗಳನ್ನು, ಹಾಗೆಯೇ ಪಂಚಾಯತ್ ಕಾಂಪೌಂಡ್ ನಾಶಪಡಿಸಿರುತ್ತಾರೆ.

ಅಲ್ಲದೇ ಕಾಮಗಾರಿಗಳಲ್ಲಿ ಕೂಡ ಅವ್ಯವಹಾರ ಆಗಿದೆ ಇದರ ಬಗ್ಗೆ ಎರಡೂ ಗ್ರಾಮಸಭೆಯಲ್ಲಿ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಎರಡೂ ಗ್ರಾಮ ಸಭೆಯಲ್ಲಿ ಪ್ರದೀಪ್ ರೈ ಅಜ್ರಂಗಳರವರು ಗೈರುಹಾಜರಿಯಾಗಿದ್ದರು. ಅವ್ಯವಹಾರಗಳಿಗೆ ಅವರು ಉತ್ತರಿಸಲು ಈ ಮಾದ್ಯಮದ ಮುಖಾಂತರ ಕೇಳಿಕೊಳ್ಳುತ್ತಿದ್ದೇವೆ.

ನಾವು ಈಗಿನ ಎರಡನೆ ಅವಧಿಯ ಅಧ್ಯಕ್ಷರ, ಉಪಾಧ್ಯಕ್ಷರ ಹಾಗೂ ನಮ್ಮ ಬೆಂಬಲಿತ ಎಲ್ಲಾ ಸದಸ್ಯರ ನೆಲೆಯಲ್ಲಿ ಈ ಎಲ್ಲಾ ವಿಚಾರಗಳಿಗೆ ತೆರೆ ಎಳೆಯಲು ಸತ್ಯ ಶೋಧನೆಗಾಗಿ ೨೦೨೦-೨೦೨೧ ರಿಂದ ಈವರೆಗಿನ ನಡೆದ ಕಾಮಗಾರಿಗಳ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಚಿತ್ರ, ಸದಸ್ಯೆ ವಿಜಯಕುಮಾರಿ ಉಪಸ್ಥಿತರಿದ್ದರು.