ಮುಡಾ ಹಗರಣಕ್ಕಿಂತಲೂ ವಾಲ್ಮಿಕಿ ನಿಗಮದ್ದು ಪ್ರಬಲವಾದ ಭ್ರಷ್ಟಾಚಾರ

0

ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇರ ಪಾತ್ರವಿದೆ. ಇದರ ವಿರುದ್ದ ನಮ್ಮ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ನೇತೃತ್ವದಲ್ಲಿ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಕೈಗೊಂಡು ಅದರಲ್ಲಿ ಯಶಸ್ವಿಯಾಗಿದ್ದೇವೆ. ಈ ಮಧ್ಯೆ ಮುಖ್ಯಮಂತ್ರಿಗಳ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅವಕಾಶ ಮಾಡಿಕೊಟ್ಟಿದ್ದು, ಹೈಕೋರ್ಟಿನಲ್ಲಿ ರಿಟ್ ಅಪ್ಲಿಕೇಶನ್ ಚರ್ಚೆಯಲ್ಲಿದೆ ಎಂದು ಮೈಸೂರು – ಕೊಡಗು ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಹೇಳಿದರು.

ಸುಳ್ಯದಲ್ಲಿ ವಿಶ್ವ ಹಿಂದೂ ಪರಿಷತ್ ವತಿಯಿಂದ ನಡೆದ ಮೊಸರು ಕುಡಿಕೆ ಉತ್ಸವದಲ್ಲಿ ಭಾಗವಹಿಸಲು ಸುಳ್ಯಕ್ಕೆ ಆಗಮಿಸಿದ್ದ ಅವರು ‘ಸುದ್ದಿ’ ಗೆ ವಿಶೇಷ ಸಂದರ್ಶನ ನೀಡಿದರು.

ಉತ್ತರ ಕರ್ನಾಟಕ ಭಾಗದ ನಮ್ಮ ಪ್ರಭಲ ನಾಯಕರಾದ ಶಾಸಕರಾಗಿರುವ ಬಸನ ಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೋಳಿ, ಆ ಭಾಗದ ನಾಯಕರಾಗಿದ್ದು, ಬೆಂಗಳೂರಿನಲ್ಲಿ ಶಾಸಕರಾಗಿರುವ ಅರವಿಂದ ಲಿಂಬಾವಳಿ ಅವರೆಲ್ಲರು ಸೇರಿ ಮುಡಾ ಹಗರಣಕ್ಕಿಂತಲೂ ಪ್ರಬಲವಾದ ಹಗರಣ ವಾಲ್ಮಿಕಿ ನಿಗಮದಲ್ಲಿ ನಡೆದ ಭ್ರಷ್ಟಾಚಾರ ಹಗರಣ. ಹಾಗಾಗಿ ಅದರ ವಿರುದ್ಧ ಒಂದು ಪಾದಯಾತ್ರೆ ಕೈಗೊಳ್ಳಬೇಕು ಎಂದು ಅವರು ಚರ್ಚೆ ನಡೆಸಿದ್ದಾರೆ. ಅದಕ್ಕಾಗಿ ರಾಜ್ಯ ಬಿಜೆಪಿ ವತಿಯಿಂದ ಈಗಾಗಲೇ ತಯಾರಿ ನಡೆಯುತ್ತಿದೆ ಎಂದು ಅವರು ಹೇಳಿದರು.

ವಾಲ್ಮಿಕಿ ನಿಗಮದಲ್ಲಿ 187 ಕೋಟಿ ಹಣವನ್ನು ಬೇರೆ ಬೇರೆ ಅಕೌಂಟ್ ಗಳಿಗೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ದುರುಪಯೋಗ ಮಾಡಿಕೊಂಡಿದೆ. ಇದರಲ್ಲಿ 89 ಕೋಟಿ ರೂ. ಅವ್ಯವಹಾರ ನಡೆದಿರುವುದಾಗಿ ಸ್ವತಹ ಮುಖ್ಯಮಂತ್ರಿ ಸಿದ್ಧರಾಮಯ್ಯನವರೇ ಸದನದ ಒಳಗೆ ಒಪ್ಪಿಕೊಂಡಿದ್ದಾರೆ.

ಈ ಕುರಿತಂತೆ ಇ.ಡಿ. ವತಿಯಿಂದ ಮುಖ್ಯಮಂತ್ರಿಗಳಿಗೆ ಹಾಗೂ ಪೈನಾನ್ಸ್ ಕಾರ್ಯದರ್ಶಿಗಳಿಗೆ ಈಗಾಗಲೇ ನೋಟೀಸು ಕೂಡ ಕೊಟ್ಟಿದ್ದಾರೆ. ಈ ಪ್ರಕರಣವನ್ನು ನಾವು ಬಯಲಿಗೆಳೆಯುತ್ತಾ ಹೋದರೆ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಸಹಿತ ರಾಜ್ಯ ಸರ್ಕಾರದಲ್ಲಿರುವ ಎಷ್ಟೋ ತಲೆಗಳು ಉರುಳಲಿದೆ ಎಂದು ಅವರು ಹೇಳಿದರು.

ಹಾಗಾಗಿ ವಾಲ್ಮಿಕಿ ನಿಗಮದ ಭ್ರಷ್ಟಾಚಾರ ಹಗರಣ ಪ್ರಬಲವಾಗಿದ್ದು, ವಾಲ್ಮಿಕಿ ನಿಗಮದ ಅಕೌಂಟೆಂಟ್ ಹೆಸರು ಬರೆದಿಟ್ಟು ಆತ್ಮಹತ್ಯೆ ಕೂಡಾ ಮಾಡಿಕೊಂಡಿದ್ದಾರೆ.

ಕಾಂಗ್ರೆಸ್ ಬಳ್ಳಾರಿ ಮತ್ತು ರಾಯಚೂರು ಕ್ಷೇತ್ರಗಳ ಚುನಾವಣೆಯಲ್ಲಿ ವಾಲ್ಮಿಕಿ ನಿಗಮದ ಹಣವನ್ನು ಅಕ್ರಮವಾಗಿ ಪಡೆದು ಅದರಿಂದ ಮದ್ಯವನ್ನು ಖರೀದಿಸಿ ಆ ಎರಡೂ ಕ್ಷೇತ್ರದ ಚುನಾವಣೆಗಳ ಮೇಲೆ ಪ್ರಭಾವ ಬೀರಿ ಗೆದ್ದಿರುವುದು ಸಾಬೀತಾಗಿದೆ. ಹಾಗಾಗಿ ಆ ಎರಡೂ ಕ್ಷೇತ್ರದ ಚುನಾವಣೆಯನ್ನು ರದ್ದುಪಡಿಸುವಂತೆ ಚುನಾವಣಾ ಆಯೋಗಕ್ಕೆ ಬಿಜೆಪಿ ಮನವಿ ಸಲ್ಲಿಸಿ, ನಾವು ಯಶಸ್ವಿಯಾಗಬಹುದು. ಭ್ರಷ್ಟಾಚಾರದಲ್ಲಿ ಸಿಲುಕಿರುವ ಕಾಂಗ್ರೆಸ್ ಸರ್ಕಾರವನ್ನು ತೊಲಗಿಸಲು ಬಿಜೆಪಿ ನಿರಂತರವಾಗಿ ಹೋರಾಟ ಮಾಡಲಿದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಅವರು ‘ಸುದ್ಧಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದರು.