ನಗರ ಪಂಚಾಯತ್ ಸಭೆಯಲ್ಲಿ ಬ್ರೋಕರ್ ಗಳ ಹಾವಳಿ ಬಗ್ಗೆ ಚರ್ಚೆ

0

ಸುದ್ದಿ ಪತ್ರಿಕೆ ಹಮ್ಮಿಕೊಂಡಿರುವ ‘ಭ್ರಷ್ಟಾಚಾರ ನಿರ್ಮೂಲನೆ ಜನಾಂದೋಲನದ’ಬಗ್ಗೆ ನೆನಪಿಸಿದ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರುಗಳು

ಸುಳ್ಯ ನಗರ ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಸುದ್ದಿ ಪತ್ರಿಕೆ ಹಮ್ಮಿಕೊಂಡಿರುವ ಭ್ರಷ್ಟಾಚಾರ ನಿರ್ಮೂಲನೆ ಆಂದೋಲನದ ಬಗ್ಗೆ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರುಗಳು ನೆನಪಿಸಿಕೊಂಡ ಘಟನೆ ನಡೆಯಿತು.

ಇಂದು ನಗರ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಕಚೇರಿಯಲ್ಲಿ ಬ್ರೋಕರ್ ಗಳ ಹಾವಳಿ ಹೆಚ್ಚಾಗುತ್ತಿದೆ. ಮತ್ತು ಅವರು ಕಚೇರಿಗೆ ಬಂದು ಮಾಡಿಸಿ ಕೊಡುವ ಕೆಲಸ ಕಾರ್ಯಗಳ ಬಗ್ಗೆ ಸ್ಥಳೀಯ ಪಂಚಾಯತ್ ಸದಸ್ಯರುಗಳ ಗಮನಕ್ಕೆ ಬಂದಿರುವುದಿಲ್ಲ. ಈ ಬಗ್ಗೆ ಸಾರ್ವಜನಿಕರು ಹೊರಗಡೆ ಕಚೇರಿಯ ಬಗ್ಗೆ ಮಾತನಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ನಮ್ಮ ಕಚೇರಿಯಲ್ಲಿ ಬ್ರೋಕರ್ಗಳ ಹಾವಳಿಯನ್ನು ತಪ್ಪಿಸುವುದು ಕಡ್ಡಾಯವಾಗಿದೆ ಎಂದು ಅಧ್ಯಕ್ಷರು ಹೇಳಿದರು.

ಈ ಸಂದರ್ಭ ವಿಪಕ್ಷ ಸದಸ್ಯ ಎಂ ವೆಂಕಪ್ಪಗೌಡ ಮಾತನಾಡಿ ಇದು ಖಂಡಿತವಾಗಿಯೂ ಮಾಡಬೇಕಾದ ವಿಷಯವಾಗಿದೆ. ಕೆಲವೊಂದು ಕೆಲಸ ಕಾರ್ಯಗಳು ಜನಪ್ರತಿನಿಧಿಗಳ ಅಂದರೆ ನಗರ ಪಂಚಾಯತ್ ಸದಸ್ಯರ ಗಮನಕ್ಕೆ ಬಾರದೆ ಅಧಿಕಾರಿಗಳ ಮುಖೇನಾ ಏಜೆಂಟರು ಕೆಲಸವನ್ನು ಮಾಡಿಕೊಂಡು ಹೋಗುತ್ತಾರೆ. ಇದರಿಂದ ಕಚೇರಿಯಲ್ಲಿ ಭ್ರಷ್ಟಾಚಾರ ಹೆಚ್ಚಾಗಲು ಕಾರಣವಾಗುತ್ತದೆ. ಜನಸಾಮಾನ್ಯರಿಗೆ ಪಂಚಾಯತ್ ವತಿಯಿಂದ ಯಾವುದೇ ಕೆಲಸ ಕಾರ್ಯಗಳು ನಡೆಯಬೇಕಾದರೆ ಪಾರದರ್ಶಕವಾಗಿ ನಡೆಯಬೇಕು. ಮತ್ತು ಸ್ಥಳೀಯ ನಗರ ಪಂಚಾಯತ್ ಸದಸ್ಯರ ಗಮನಕ್ಕೆ ಬರಬೇಕು.
ಇದಾಗದೆ ಇದ್ದಾಗ ಅಲ್ಲಿ ಭ್ರಷ್ಟಾಚಾರ ಹೆಚ್ಚಾಗಲು ಕಾರಣವಾಗುತ್ತದೆ.
ಅಲ್ಲದೆ ಈ ಬಗ್ಗೆ ಸುಳ್ಯದ ಸ್ಥಳೀಯ ಪತ್ರಿಕೆಯಾದ ಸುದ್ದಿಯವರು ಭ್ರಷ್ಟಾಚಾರ ನಿರ್ಮೂಲನೆಯ ಆಂದೋಲನವನ್ನು ಕೈಗೆತ್ತಿಕೊಂಡು ಜನ ಜಾಗೃತಿ ಮಾಡುವ ತುಂಬಾ ಒಳ್ಳೆಯ ಕೆಲಸವನ್ನು ಮಾಡುತ್ತಿದ್ದಾರೆ.

ಆದ್ದರಿಂದ ನಾವು ಮತ್ತು ನಮ್ಮ ಕಚೇರಿಯ ಅಧಿಕಾರಿಗಳು,ಸಿಬ್ಬಂದಿಗಳು ಅದೇ ರೀತಿಯ ಒಳ್ಳೆಯ ಕೆಲಸವನ್ನು ಮಾಡಬೇಕಾಗಿದೆ ಎಂದು ಹೇಳಿದರು.
ಬ್ರೋಕರ್ ಗಳ ಹಾವಳಿಯನ್ನು ತಡೆಗಟ್ಟಲು ನಿರ್ಣಯ ಕೈಗೊಳ್ಳುವುದಾದರೆ ಅದಕ್ಕೆ ನಾನು ಪ್ರಸ್ತಾವನೆ ಮಾಡುತ್ತೇನೆ ಎಂದು ಹೇಳಿದರು.

ಇದೇ ವಿಷಯಕ್ಕೆ ಪೂರಕವಾಗಿ ಮಾತನಾಡಿದ ಆಡಳಿತ ಪಕ್ಷದ ಸದಸ್ಯ ವಿನಯಕುಮಾರ್ ಕಂದಡ್ಕ ರವರು ಬ್ರೋಕರ್ಗಳ ಬಗ್ಗೆ ಹೇಳುವುದಾದರೆ ಇದಕ್ಕೆ ನಾನು ಶೇಕಡ 50 ರಷ್ಟು ಬೆಂಬಲವನ್ನು ಕೊಡುತ್ತೇನೆ. ಏಕೆಂದರೆ ಯಾವುದೇ ಇಲಾಖೆಯಲ್ಲಿ ಕೊಡುವವರ ಸಂಖ್ಯೆ ಎಲ್ಲಿ ತನಕ ಕಡಿಮೆಯಾಗುವುದಿಲ್ಲವೋ ಅಲ್ಲಿ ತನಕ ಪಡೆಯುವವರ ಸಂಖ್ಯೆಯು ಕಡಿಮೆಯಾಗುವುದಿಲ್ಲ. ಆದ್ದರಿಂದ ಜನರು ಎಚ್ಚೆತ್ತುಕೊಂಡು ಜಾಗರೂಕತರಾಗಬೇಕಾಗಿದೆ. ಕೆಲವೊಂದು ದಾಖಲೆಗಳು ಸರಿ ಇಲ್ಲದೇ ಇದ್ದಾಗ ಅದರ ತಪ್ಪುಗಳನ್ನು ತಿಳಿ ಹೇಳುವ ಕೆಲಸ ಕಾರ್ಯಗಳು ಅಧಿಕಾರಿಗಳಿಂದ ಮತ್ತು ಸಿಬ್ಬಂದಿ ವರ್ಗದವರಿಂದ ಆಗಬೇಕು ಎಂದು ಹೇಳಿದರು. ಬ್ರೋಕರ್ಗಳು ಅದನ್ನೇ ಒಂದು ದಂದೆಯಾಗಿ ಮಾಡಿಕೊಂಡು ಹಣ ಸಂಪಾದನೆ ಮಾಡುವುದಾದರೆ ಅದು ತಪ್ಪು.

ಅಲ್ಲದೆ ಸಾರ್ವಜನಿಕರಿಗೆ ಉಪಯೋಗವಾಗುವಂತಹ ಕೆಲಸ ಕಾರ್ಯಗಳನ್ನು ಪ್ರಾಮಾಣಿಕವಾಗಿ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದರು.

ಯಾವುದಕ್ಕೂ ಕಾನೂನುಗಳನ್ನು ನಾವು ಸರಿಯಾಗಿ ಪಾಲಿಸಿದ್ದಲ್ಲಿ ಭ್ರಷ್ಟಾಚಾರ ನಡೆಯುವ ಅವಕಾಶವೇ ಇರುವುದಿಲ್ಲ ಎಂದು ಹೇಳಿದರು.

ಸದಸ್ಯ ಷರೀಫ್ ಕಂಠಿ ಮಾತನಾಡಿ, ಸ್ಥಳೀಯ ನಗರ ಪಂಚಾಯತಿ ಸದಸ್ಯರುಗಳು ಕೇವಲ ಅವರವರ ವಾರ್ಡ್ಗಳಲ್ಲಿ ಯಾರಾದರೂ ನಿಧನರಾದರೆ ಆ ಸಂದರ್ಭದಲ್ಲಿ ಸಹಿ ಮಾಡುವ ಕೆಲಸ ಮಾತ್ರ ಇದೀಗ ಬಂದಿದೆ. ಇತರ ಯಾವುದೇ ಕೆಲಸ ಕಾರ್ಯಗಳು ಬೇಕಾದರೆ ಬ್ರೋಕರ್ ಗಳ ಮೂಲಕ ಅದನ್ನು ಅದನ್ನು ಕಚೇರಿಯಿಂದ ಮಾಡಿಕ್ಕೊಂಡು ಹೋಗುತ್ತಾರೆ. ಇದು ಸರಿಯಾದ ರೀತಿಯಲ್ಲಿ ಎಂದು ಹೇಳಿದರು.

ಇದರ ಬಗ್ಗೆ ಮಾತನಾಡಿದ ಮುಖ್ಯ ಅಧಿಕಾರಿ ಸುಧಾಕರ್ ಈ ವಿಷಯಕ್ಕೆ ನನ್ನ ಪೂರ್ಣ ಸಮ್ಮತಿ ಇದೆ. ಆದರೆ ಕೆಲವೊಂದು ಬಾರಿ ಸೂಕ್ತ ದಾಖಲೆಗಳು ಇಲ್ಲದೆ ಬರುವಂತಹ ಜನರಿಗೆ ತಿಳಿ ಹೇಳುವ ಬದಲು ಅವರ ಪರವಾಗಿ ಮಾತನಾಡಿ ಕೆಲಸವನ್ನು ಮಾಡಿಕೊಡುವಂತೆ ನಮ್ಮ ಮೇಲೆ ಒತ್ತಡಗಳು ಬರುತ್ತದೆ. ಆಗ ನಾವು ಏನು ಮಾಡುವುದು ಎಂದು ಹೇಳಿದರು ಮತ್ತು ಅದು ಸರಿಯಲ್ಲ ಎಂದು ಹೇಳಿದರು. ಅರ್ಹರಿಗೆ ಯೋಜನೆಗಳು ಸಿಗುವುದು ಉತ್ತಮವೇ. ಆದರೆ ಅದನ್ನು ಕಾನೂನು ಬಾಹಿರವಾಗಿ ಪಡೆದುಕೊಳ್ಳುವುದು ಸರಿಯಲ್ಲ ಎಂದು ಹೇಳಿದರು.

ನಗರ ಪಂಚಾಯತಿ ಅಧ್ಯಕ್ಷ ಶಶಿಕಲಾ ನೀಡಬಿದಿರೆ ಯವರು ಕೂಡ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಮಾತನಾಡಿ ಕಚೇರಿಯಲ್ಲಿ ಬ್ರೋಕರ್ಗಳಿಗೆ ಅವಕಾಶವನ್ನು ಮಾಡಿ ಕೊಡಬೇಡಿ. ಎಲ್ಲಾ ಕೆಲಸ ಕಾರ್ಯಗಳು ಬ್ರೋಕರ್ಗಳು ಮಾಡುವುದಾದರೆ ನಾವು ಸದಸ್ಯರುಗಳು ಏಕೆ ಇರುವುದು.ಜನರ ಮೂಲಭೂತ ಸಮಸ್ಯೆಗಳ ಬಗ್ಗೆ ನಾವು ಗಮನ ಹರಿಸಿ ಅದಕ್ಕೆ ಸ್ಪಂದಿಸುವ ಕೆಲಸ ನಮ್ಮಿಂದ ಆಗಬೇಕು. ಮುಂದಿನ ದಿನಗಳಲ್ಲಿ ಈ ರೀತಿಯ ಯಾವುದೇ ಭ್ರಷ್ಟಾಚಾರದ ಕೆಲಸ ಕಾರ್ಯಗಳು ನಮ್ಮ ಕಚೇರಿಯಲ್ಲಿ ಆಗದಂತೆ ಎಲ್ಲರೂ ನೋಡಿಕೊಳ್ಳಬೇಕು. ಮತ್ತು ಇಲ್ಲಿಗೆ ಬರುವ ಎಲ್ಲಾ ನಾಗರಿಕರಿಗೂ ಸಮಾನವಾದ ಸೇವೆ ಸಿಗುವಂತೆ ಆಗಬೇಕು ಎಂದು ಹೇಳಿದರು.

ಇದಕ್ಕೆ ಸಭೆಯಲ್ಲಿ ಭಾಗವಹಿಸಿದ್ದ ಎಲ್ಲಾ ಸದಸ್ಯರುಗಳು ಕೂಡ ಧ್ವನಿಗೂಡಿಸಿದರು.