ಪುರುಷೋತ್ತಮ ಗೌಡರ ಕರ್ತವ್ಯ ನಿಷ್ಠೆಯನ್ನು ಕೊಂಡಾಡಿದ ಅತಿಥಿಗಳು
ಐವರ್ನಾಡು ಗ್ರಾಮ ಪಂಚಾಯತ್ ನಲ್ಲಿ ಬಿಲ್ ಕಲೆಕ್ಟರ್ ಆಗಿ ಸುದೀರ್ಘ 34 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಪುರುಷೋತ್ತಮ ಗೌಡ ಪಿ. ರವರಿಗೆ ಗ್ರಾಮ ಪಂಚಾಯತ್ ವತಿಯಿಂದ ಬೀಳ್ಕೊಡುಗೆ ಸಮಾರಂಭ ಇಂದು ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಬಾಲಕೃಷ್ಣ ಕೀಲಾಡಿ ವಹಿಸಿದ್ದರು. ಮುಖ್ಯ ಅತಿಥಿಯಾಗಿದ್ದ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ, ಐವರ್ನಾಡು ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥ ಮಾತನಾಡಿ ಪುರುಷೋತ್ತಮ ಗೌಡರು ಇಡೀ ಗ್ರಾಮದ ಪರಿಚಯ ಇರುವಂತವರು. ಇವರ ಕೆಲಸ ಕಾರ್ಯಗಳು ಕಿರಿಯರಿಗೆ ಮಾದರಿ ಎಂದು ಹೇಳಿದರು.ಇನ್ನೋರ್ವ ಅತಿಥಿ ಉಪನ್ಯಾಸಕ ದಿನೇಶ್ ಮಡ್ತಿಲ ಮಾತನಾಡಿ ಮಿತಭಾಷಿ, ಸೌಮ್ಯಸ್ವಭಾವದವರು.ಎಲ್ಲರೊಂದಿಗೆ ಸ್ಪಂದಿಸುವ ಸ್ವಭಾವ ಇವರದ್ದು ಎಂದು ಹೇಳಿದರು.
ಪ್ರಸ್ತಾವಿಕವಾಗಿ ಮಾತನಾಡಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ಯಾಮ್ ಪ್ರಸಾದ್ ಮಾತನಾಡಿ
ಕರ್ತವ್ಯ ನಿಷ್ಠೆ, ಪ್ರಮಾಣಿಕತೆಯಿಂದ ಕೆಲಸ ನಿರ್ವಹಿಸಿದವರು. ಗ್ರಾಮದ ಪ್ರತಿ ಮನೆಯ ಮಾಹಿತಿ ಅವರಲ್ಲಿತ್ತು. ಯಾವಾಗಲೂ ಕ್ರಿಯಾತ್ಮಕವಾಗಿ ಯೋಚಿಸುವವರು ಎಂದು ಹೇಳಿದರು.
ಪಂಚಾಯತ್ ಕಾರ್ಯದರ್ಶಿ ತಿರುಮಲೇಶ್ವರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪಂಚಾಯತ್ ವತಿಯಿಂದ ಹಾರ,ಶಾಲು, ಸ್ಮರಣಿಕೆ ,ಪೇಟ ತೊಡಿಸಿ ಸನ್ಮಾನಿಸಲಾಯಿತು. ಐವರ್ನಾಡು ಸಹಕಾರಿ ಸಂಘ, ಆರೋಗ್ಯ ಕೇಂದ್ರ, ಸಂಘ ಸಂಸ್ಥೆಗಳ ಪರವಾಗಿ, ಊರವರು, ಹಿತೈಷಿಗಳು ಸನ್ಮಾನಿಸಿದರು.
ಉಪನ್ಯಾಸಕ ಅಜಿತ್ ಐವರ್ನಾಡು ಕಾರ್ಯಕ್ರಮ ನಿರೂಪಿಸಿದರು.