ಸುಳ್ಯ: ಕೆಎಸ್‌ಆರ್‌ಟಿಸಿ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುವ ಚಾಲಕರಿಂದ ದಿಢೀರ್ ಪ್ರತಿಭಟನೆ

0

ಗ್ರಾಮೀಣ ಭಾಗದ 5 ಕ್ಕೂ ಹೆಚ್ಚು ಬಸ್‌ಗಳ ಸಂಚಾರ ಸ್ಥಗಿತ

ಕೆಎಸ್‌ಆರ್‌ಟಿಸಿ ಸುಳ್ಯ ಡಿಪೋದಲ್ಲಿ ಗುತ್ತಿಗೆ ಆಧಾರದಲ್ಲಿ ಚಾಲಕರಾಗಿ ಕೆಲಸ ನಿರ್ವಹಿಸುತ್ತಿರುವ ಸುಮಾರು ೯ ಕ್ಕೂ ಹೆಚ್ಚು ಸಿಬ್ಬಂದಿಗಳು ಸೆ. ೧೪ ರಂದು ದಿಢೀರ್ ಪ್ರತಿಭಟನೆ ನಡೆಸಿದ್ದು, ಗ್ರಾಮೀಣ ಭಾಗದಲ್ಲಿ ಸಂಚರಿಸುವ ಸುಮಾರು ೫ ಕ್ಕೂ ಹೆಚ್ಚು ಬಸ್ಸುಗಳ ಸಂಚಾರ ಸ್ಥಗಿತಗೊಂಡ ಘಟನೆ ನಡೆದಿದೆ.
ಇವರು ಕೆಲಸ ನಿರ್ವಹಿಸುತ್ತಿರುವ ಪೂಜಾಯ ಎಂಬ ಖಾಸಗಿ ಸಂಸ್ಥೆ ಸಿಬ್ಬಂದಿಗಳಿಗೆ ನೀಡುವ ವೇತನದಲ್ಲಿ ಏಕಾಏಕಿ ೫ ಸಾವಿರ ರೂಗಳನ್ನು ಕಡಿತಗೊಳಿಸಿರುವುದು ಮತ್ತು ಕೆಲವರಿಗೆ ವೇತನ ಪಾವತಿಸದೆ ಸತಾಯಿಸುತ್ತಿರುವುದೇ ಈ ಪ್ರತಿಭಟನೆಗೆ ಕಾರಣ ಎಂದು ತಿಳಿದು ಬಂದಿದೆ.


ಈ ಚಾಲಕರು ಚಾಲನೆ ಮಾಡುವ ಬಸ್ಸುಗಳು ಗ್ರಾಮೀಣ ಭಾಗದಲ್ಲಿ ಹೆಚ್ಚು ಸಂಚಾರ ನಡೆಸುತ್ತಿದ್ದು ಇವರ ಧಿಡಿರ್ ಪ್ರತಿಭಟನೆಯಿಂದ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಸಮಸ್ಯೆ ತಂದಿದೆ.


ಈ ಪ್ರತಿಭಟನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಪುತ್ತೂರು, ಬಂಟ್ವಾಳ, ಧರ್ಮಸ್ಥಳ ಕೊಡಗಿನ ಮಡಿಕೇರಿಯ ಬಸ್ ಸಿಬ್ಬಂದಿಗಳು ತಮ್ಮ ತಮ್ಮ ಬಸ್ಸು ನಿಲ್ದಾಣಗಳಲ್ಲಿ ಪ್ರತಿಭಟನೆ ಮಾಡಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ

.
‘ಈ ಹಿಂದೆ ನಮ್ಮನ್ನು ನೇಮಕ ಮಾಡಿದ್ದ ಪನ್ನಗ ಎಂಬ ಸಂಸ್ಥೆ ಚಾಲಕ ಉದ್ಯೋಗಿಗಳಿಗೆ ೨೩ ಸಾವಿರ ರೂ.ವೇತನ ನೀಡುತ್ತಿತ್ತು. ಆದರೆ ಇದೀಗ ಹೊಸದಾಗಿ ಕಾಂಟ್ರಾಕ್ಟ್ ಡೀಲ್ ಮಾಡಿಕೊಂಡಿರುವ ಪೂಜಾಯ ಅನ್ನುವ ಸಂಸ್ಥೆ ಸಿಬ್ಬಂದಿಗೆ ೧೬ ಸಾವಿರ ರೂ. ವೇತನ ನೀಡಿದ್ದು ನಮ್ಮ ವೇತನದಿಂದ ೫ ಸಾವಿರ ಕಡಿತಗೊಳಿಸಿ ನಮಗೆ ಅನ್ಯಾಯ ಮಾಡಿದ್ದಾರೆ. ಕೆಲವರಿಗೆ ಇನ್ನೂ ವೇತನವೇ ನೀಡಿಲ್ಲ. ನಾವು ಈ ಕೆಲಸವನ್ನೇ ನಂಬಿ ಕುಟುಂಬವನ್ನು ಸಾಕಬೇಕಾಗಿದೆ. ಅಲ್ಲದೆ ಮೂರು ತಿಂಗಳಿನಿಂದ ಪಿಎಫ್ ಹಣವನ್ನು ಕೂಡ ಕಟ್ ಮಾಡಿ ಪಿಎಫ್‌ಗೆ ಹಾಕಿಲ್ಲ. ಈ ಬಗ್ಗೆ ಅಧಿಕಾರಿಗಳ ಬಳಿ ಹೇಳಿದರೆ ಯಾವುದೇ ಪ್ರಯೋಜನ ಆಗುತ್ತಿಲ್ಲ ಎಂದು ಪ್ರತಿಭಟನಾಕಾರರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.


ಕೊಯನಾಡು, ಸುಳ್ಯ, ಪುತ್ತೂರು ಹಾಗೂ ಮಡಿಕೇರಿ ಭಾಗದ ಬಸ್‌ಗಳ ಪ್ರಯಾಣದಲ್ಲಿ ವ್ಯತ್ಯಯ ಕಂಡು ಬಂದಿದ್ದು, ಹಠಾತ್ ಪ್ರತಿಭಟನೆ ನಿರ್ಧಾರದಿಂದ ಪ್ರಯಾಣಿಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.