ಮಲಯಾಳಿ ತೀಯ ಸಮಾಜ ಬಾಂಧವರ ದೊಡ್ಡ ಹಬ್ಬ ಓಣಂ.ಸಮಾಜ ಬಾಂಧವರು ಸಂಘಟಿತರಾಗಬೇಕು. ಯುವ ಪ್ರತಿಭೆಗಳಿಗೆ ವೇದಿಕೆ ಒದಗಿಸುವ ಕಾರ್ಯ ಶ್ಲಾಘನೀಯ- ಅರವಿಂದ ಬೋಳಾರ್
ಭಾರತೀಯ ತೀಯ ಸಮಾಜ ಸುಳ್ಯ ವಲಯ ಸಮಿತಿ, ನಗರ ಸಮಿತಿ ಮತ್ತು ಗ್ರಾಮ ಸಮಿತಿಗಳ ಆಶ್ರಯದಲ್ಲಿ 3 ನೇ ವರ್ಷದ ಓಣಂ ಆಚರಣೆಯು ಸೆ.16 ರಂದು ಅಂಬಟೆಡ್ಕದ ಗಿರಿದರ್ಶಿನಿ ಸಭಾಭವನದಲ್ಲಿ ನಡೆಯಿತು.
ಬೆಳಗ್ಗೆ ಕುಂಞರಾಮನ್ ಶ್ರೀ ಶೈಲಂ ಅರಂಬೂರು ರವರು ದೀಪ ಪ್ರಜ್ವಲಿಸಿ ಚಾಲನೆ ನೀಡಿದರು.
ವಲಯ ಸಮಿತಿ ಅಧ್ಯಕ್ಷ ಸುರೇಶ್ ಕುತ್ತಮೊಟ್ಟೆ ಅಧ್ಯಕ್ಷತೆ ವಹಿಸಿದ್ದರು. ವಲಯ ಸಮಿತಿ ಅಧ್ಯಕ್ಷ ಪವಿತ್ರನ್ ಗುಂಡ್ಯ, ಕಾರ್ಯದರ್ಶಿ ರಾಜೇಶ್,ಕೋಶಾಧಿಕಾರಿ ಸುನಿಲ್ ಕುಮಾರ್ ಕೆ.ಸಿ ಪರಿವಾರಕಾನ ಉಪಸ್ಥಿತರಿದ್ದರು. ಆರಂಭದಲ್ಲಿ ಪೂಕಳಂ ರಚನೆಯ ಸ್ಪರ್ಧೆಯು ಏರ್ಪಡಿಸಲಾಯಿತು. ಮಕ್ಕಳಿಗೆ, ಪುರುಷರಿಗೆ,ಮಹಿಳೆಯರಿಗೆ ಮಡಕೆ ಒಡೆಯುವುದು, ಭಕ್ತಿ ಗೀತೆ ಸ್ಪರ್ಧೆ, ಹಗ್ಗ ಜಗ್ಗಾಟ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಸಮಾರೋಪ ಸಮಾರಂಭ-ಬಹುಮಾನ ವಿತರಣೆ:
ಅಪರಾಹ್ನ ವಲಯ ಸಮಿತಿ ಅಧ್ಯಕ್ಷ ಪವಿತ್ರನ್ ಗುಂಡ್ಯ ರವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಖ್ಯಾತ ರಂಗ ಕಲಾವಿದ ಚಿತ್ರ ನಟ ಅರವಿಂದ ಬೋಳಾರ್ ರವರು ಭಾಗವಹಿಸಿದರು. ಮುಖ್ಯ ಅಭ್ಯಾಗತರಾಗಿ ಮಂಗಳೂರಿನ ಕೇಂದ್ರೀಯ ಸಮಿತಿ ಅಧ್ಯಕ್ಷ ಸದಾಶಿವ ಉಳ್ಳಾಲ್,ವಲಯ ಸಮಿತಿ ಕಾರ್ಯದರ್ಶಿ ರಾಜೇಶ್,ಕೋಶಾಧಿಕಾರಿ ಸುನಿಲ್ ಕುಮಾರ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅರವಿಂದ ಬೋಳಾರ್ ಮತ್ತು ಸದಾಶಿವ ಉಳ್ಳಾಲ್ ರವರನ್ನು ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಮಾಜದ ಬಾಂಧವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡಿತು.
ವಿಶೇಷವಾಗಿ ಮಧ್ಯಾಹ್ನ ಓಣಂ ಸದ್ಯ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ತೀಯ ಸಮಾಜದ ವಲಯ ,ನಗರ ಹಾಗೂ ಗ್ರಾಮ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಸಹಕರಿಸಿದರು.