ಶ್ರೀ ವೆಂಕಟರಮಣ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಮಹಾಸಭೆ

0

2.01 ಕೋಟಿ ನಿವ್ವಳ ಲಾಭ ಸದಸ್ಯರಿಗೆ ಶೇ.15 ಡಿವಿಡೆಂಡ್ ವಿತರಣೆ

ಸುಳ್ಯದಲ್ಲಿ ಪ್ರಧಾನ ಕಛೇರಿಯನ್ನು ಹೊಂದಿರುವ ಶ್ರೀ ವೆಂಕಟರಮಣ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ 2023 – 24ನೇ ಸಾಲಿನ ವಾರ್ಷಿಕ ಮಹಾಸಭೆಯು ಸುಳ್ಯದ ಕೊಡಿಯಾಲಬೈಲು ಗೌಡ ಸಮುದಾಯಭವನದಲ್ಲಿ ಸೆ.22ರಂದು ಜರುಗಿತು.

ಸಂಘದ ಅಧ್ಯಕ್ಷ ಪಿ.ಸಿ. ಜಯರಾಮ ಅವರು ಅಧ್ಯಕ್ಷತೆ ವಹಿಸಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ. ವಿಶ್ವನಾಥ ಅವರು 2022 – 23ನೇ ಸಾಲಿನ ವಾರ್ಷಿಕ ಮಹಾಸಭೆಯ ನಡವಳಿಕೆಗಳನ್ನು ಹಾಗೂ ವರದಿಯನ್ನು ಮಂಡಿಸಿದರು.

ಅಧ್ಯಕ್ಷ ಪಿ.ಸಿ. ಜಯರಾಮ ಅವರು ಮಾತನಾಡಿ ಸಹಕಾರಿ ಸಂಘವು ರೂ.194.82 ಕೋಟಿ ಠೇವಣಿ ಹೊಂದಿದ್ದು, ರೂ. 185.42 ಕೋಟಿ ಸಾಲಗಳನ್ನು ಸದಸ್ಯರುಗಳಿಗೆ ವಿತರಿಸಿದೆ. ದುಡಿಯುವ ಬಂಡವಾಳ ರೂ.210.20 ಕೋಟಿ ಇದ್ದು ಒಟ್ಟು ರೂ. 1,060 ಕೋಟಿಗೂ ಮಿಕ್ಕಿ ವಾರ್ಷಿಕ ವ್ಯವಹಾರ ನಡೆಸಿದೆ. ಸಂಘದಲ್ಲಿ ಒಟ್ಟು ರೂ. 3,11,74,230.46 ಕ್ಷೇಮನಿಧಿ ಹಾಗೂ ರೂ. 6,81,23,743.36 ಇತರ ನಿಧಿ ಇದೆ. ಪ್ರಸ್ತುತ ಸಂಘದಲ್ಲಿ ರೂ.4,05,63,571.37 ಮೌಲ್ಯದ ಚರಾಸ್ತಿ ಹಾಗೂ ರೂ.2,18,08,469.32 ಸ್ಥಿರಾಸ್ಥಿ ಇದೆ. ಈ ವರ್ಷದಲ್ಲಿ ಸಂಘವು 2,01,35,415.65 ನಿವ್ವಳ ಲಾಭ ಗಳಿಸಿದ್ದು, ಸದಸ್ಯರುಗಳಿಗೆ ಶೇ.15 ಪರ್ಸೆಂಟ್ ಡಿವಿಡೆಂಡ್ ವಿತರಿಸಲಾಗುವುದು ಎಂದು ತಿಳಿಸಿದರು.

ಸಹಕಾರಿ ಸಂಘದ ಸದಸ್ಯ ರತ್ನಾಕರ ಗೌಡ ಬಳ್ಳಡ್ಕ ಅವರು ಮಾತನಾಡಿ ಸಂಘದ ವತಿಯಿಂದ ಆಡಳಿತ ಮಂಡಳಿಯವರು ನಡೆಸುವ ಅಧ್ಯಯನ ಪ್ರವಾಸದ ಪ್ರಯೋಜನದ ವಿವರವನ್ನು ವಾರ್ಷಿಕ ವರದಿಯಲ್ಲಿ ನಮೂದಿಸಬೇಕು ಎಂದು ಸಲಹೆ ನೀಡಿದರು.
ಇನ್ನೋರ್ವ ಸದಸ್ಯ ಶರತ್ ಅಡ್ಕಾರು ಅವರು ಮಾತನಾಡಿ ಅಧ್ಯಯನ ಪ್ರವಾಸದಲ್ಲಿ ಸದಸ್ಯರಿಗೆ ಏನು ಲಾಭ ಇದೆ ಎಂದು ಪ್ರಶ್ನಿಸಿದರು. ಆಗ ಅಧ್ಯಕ್ಷ ಪಿ.ಸಿ. ಜಯರಾಮರು ಮಾತನಾಡಿ ಆಡಳಿತ ಮಂಡಳಿಯ ವತಿಯಿಂದ ಅಧ್ಯಯನ ಪ್ರವಾಸ ಮಾಡಿ ವಿವಿಧ ಕ್ಷೇತ್ರದಲ್ಲಿ ಅಧ್ಯಯನ ನಡೆಸಿ ಅವುಗಳನ್ನು ಸಹಕಾರಿ ಸಂಘದಲ್ಲಿ ಅನುಷ್ಠಾನ ಮಾಡಿದಾಗ ಸದಸ್ಯರಿಗೂ ಅದರ ಪ್ರಯೋಜನ ಆಗಲಿದೆ ಎಂದು ಹೇಳಿದರು.

ಸದಸ್ಯರಾದ ಸೋಮಶೇಖರ ಕೊಯಿಂಗಾಜೆ ಅವರು ಮಾತನಾಡಿ ಸಂಘದ ಲಾಭಾಂಶ ಕಳೆದ ಬಾರಿ ಈ ಬಾರಿಗಿಂತ ಕಡಿಮೆ ಇತ್ತು. ಆದರೂ ಕಳೆದ ಬಾರಿ ಶೇ.20 ಪರ್ಸೆಂಟ್ ಡಿವಿಡೆಂಡ್ ನೀಡಿದ್ದರು. ಈ ಬಾರಿ ಲಾಭಾಂಶ ಕಳೆದ ಬಾರಿಗಿಂತ ಹೆಚ್ಚು ಇದೆ. ಆದರೆ ಡಿವಿಡೆಂಡ್ ಮಾತ್ರ ಶೇ.15ಕ್ಕೆ ಬಂದಿದೆ ಅದನ್ನು ಹೆಚ್ಚು ಮಾಡುವಂತೆ ಸಲಹೆ ನೀಡಿದರು.
ಆಗ ಅಧ್ಯಕ್ಷ ಪಿ.ಸಿ. ಜಯರಾಮ ಅವರು ಮಾತನಾಡಿ ಕಟ್ಟಡದ ಭದ್ರತೆಗಾಗಿ ರಿಸರ್ವ್ ಫಂಡ್ ಇಡುವ ಉದ್ಧೇಶದಿಂದ ಈ ಬಾರಿ ಡಿವಿಡೆಂಡ್ 15 ಪರ್ಸೆಂಟ್ ಗೆ ವಿಂಗಡಿಸಿದ್ದೇವೆ ಎಂದು ಹೇಳಿದರು.

ಸಭೆಯಲ್ಲಿ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.95ಕ್ಕಿಂತ ಅಧಿಕ ಅಂಕ ಪಡೆದ ಸಂಘದ ಸದಸ್ಯರುಗಳ ಮಕ್ಕಳಿಗೆ ವಿದ್ಯಾನಿಧಿ ಪ್ರತಿಭಾ ಪುರಸ್ಕಾರ ನೀಡಿ ಪುರಸ್ಕರಿಸಲಾಯಿತು.

ವೇದಿಕೆಯಲ್ಲಿ ಸಹಕಾರಿ ಸಂಘದ ಉಪಾಧ್ಯಕ್ಷ ಮೋಹನ್ ರಾಂ ಸುಳ್ಳಿ, ನಿರ್ದೇಶಕರುಗಳಾದ ಜಾಕೆ ಸದಾನಂದ, ನಿತ್ಯಾನಂದ ಮುಂಡೋಡಿ, ಎ.ವಿ. ತೀರ್ಥರಾಮ, ಚಂದ್ರ ಕೋಲ್ಚಾರ್, ಕೆ.ಸಿ. ನಾರಾಯಣ ಗೌಡ, ಕೆ.ಸಿ. ಸದಾನಂದ, ಪಿ.ಎಸ್. ಗಂಗಾಧರ, ದಿನೇಶ್ ಮಡಪ್ಪಾಡಿ, ದಾಮೋದರ ನಾರ್ಕೋಡು, ಹೇಮಚಂದ್ರ ಐ.ಕೆ., ನವೀನ್ ಕುಮಾರ್ ಜೆ.ವಿ., ಶೈಲೇಶ್ ಅಂಬೆಕಲ್ಲು, ಶ್ರೀಮತಿ ಜಯಲಲಿತಾ ಕೆ.ಎಸ್., ಶ್ರೀಮತಿ ಲತಾ ಎಸ್. ಮಾವಾಜಿ, ಶ್ರೀಮತಿ ನಳಿನಿ ಸೂರಯ್ಯ, ಪ್ರಧಾನ ವ್ಯವಸ್ಥಾಪಕ ಚಂದ್ರಶೇಖರ ಎಂ., ಸಹಾಯಕ ಪ್ರಧಾನ ವ್ಯವಸ್ಥಾಪಕ ಮನೋಜ್ ಕುಮಾರ್ ಪಿ. ಉಪಸ್ಥಿತರಿದ್ದರು.


ಸಹಕಾರಿ ಸಂಘದ ಆಡಳಿತ ಮಂಡಳಿಯ ಉಪಸ್ಥಿತಿಯಲ್ಲಿ ಪತ್ರಿಕಾಗೋಷ್ಠಿ

ಶ್ರೀ ವೆಂಕಟ್ರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮಹಾಸಭೆಯ ಬಳಿಕ ಸಂಘದ ಆಡಳಿತ ಮಂಡಳಿಯವರ ಉಪಸ್ಥಿತಿಯಲ್ಲಿ ಪತ್ರಿಕಾಗೋಷ್ಠಿ ನಡೆಯಿತು.

ಅಧ್ಯಕ್ಷ ಪಿ.ಸಿ. ಜಯರಾಮ ಅವರು ಮಾತನಾಡಿ ಪ್ರಾರಂಭದಲ್ಲಿ 435 ಸದಸ್ಯರಿಂದ ಪ್ರಾರಂಭವಾದ ಸಂಘದಲ್ಲಿ ಪ್ರಸ್ತುತ 19,462 ವಿವಿಧ ವರ್ಗದ ಸದಸ್ಯರಿದ್ದು ರೂ.477 ಕೋಟಿ ಪಾಲು ಬಂಡವಾಳ ಸಂಗ್ರಹಿಸಿದೆ.
ಸದಸ್ಯರ ಅನುಕೂಲಕ್ಕಾಗಿ ವಾಹನ ಸಾಲ, ಚಿನ್ನಾಭರಣ ಈಡಿನ ಸಾಲ, ಭದ್ರತಾ ಸಾಲ, ಗೃಹಸಾಲ, ವಾಣಿಜ್ಯ ಕಟ್ಟಡ ಸಾಲ, ಜಮೀನು ಖರೀದಿ ಸಾಲ, ಜಮೀನು ಅಡವು ಸಾಲ, ವೇತನ ಸಾಲ, ವ್ಯಾಪಾರ ಸಾಲ ಹಾಗೂ ಜಾಮೀನು ಸಾಲಗಳನ್ನು ನೀಡುತ್ತಿದ್ದು, ಇ-ಸ್ಟಾಂಪಿಂಗ್ ವಿತರಣೆ, RTGS/NEFT ಸೌಲಭ್ಯವನ್ನು ನೀಡುತ್ತಿದ್ದೇವೆ. ಸಂಸ್ಥೆಯ ಕಾರ್ಯವ್ಯಾಪ್ತಿಯು ರಾಜ್ಯಮಟ್ಟದಾಗಿದ್ದು, ಸಂಘವು ಈಗಾಗಲೇ ದಕ್ಷಿಣ ಕನ್ನಡ, ಕೊಡಗು , ಮೈಸೂರು ಹಾಗೂ ಹಾಸನ ಜಿಲ್ಲೆ ಸೇರಿದಂತೆ 23 ಶಾಖೆಗಳನ್ನು ಆರಂಭಿಸಿ ವ್ಯವಹಾರ ನಡೆಸುತ್ತಿದೆ ಎಂದು ಹೇಳಿದರು.