ಶಿಕ್ಷಕಿ ಶ್ರೀಮತಿ ಜಲಜಾಕ್ಷಿ ಮತ್ತು ಶ್ರೀಮತಿ ವಲ್ಸರವರಿಗೆ ಪ್ರಶಸ್ತಿ
ಸಮಾಜಮುಖಿ ಕೆಲಸ ಮಾಡುವ ಶಿಕ್ಷಕರನ್ನು ಗುರುತಿಸುವ ಕೆಲಸ ಆಗಬೇಕಾಗಿದೆ: ಎಂ.ಬಿ.ಎಸ್
ಎಂ.ಬಿ.ಫೌಂಡೇಶನ್ ಸುಳ್ಯ ಇದರ ವತಿಯಿಂದ ನೀಡುವ ಪ್ರಥಮ ವರ್ಷದ ‘ದೇವಕಿ ಬಾಲಕೃಷ್ಣ ಎಕ್ಸಲೆನ್ಸ್ ಅವಾರ್ಡ್’ಗೆ ಇಬ್ಬರು ಶಿಕ್ಷಿಕಿಯರು ಆಯ್ಕೆಯಾಗಿದ್ದಾರೆ.
ಸುಳ್ಯ ಕೋಲ್ಚಾರ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಜಲಜಾಕ್ಷಿ ಕುಕ್ಕುಜೆ ಹಾಗೂ ಸೈಂಟ್ ಬ್ರಿಜಿಡ್ಸ್ ಶಾಲೆಯ ಶಿಕ್ಷಕಿ ವಲ್ಸ ಅವರನ್ನು ಈ ವರ್ಷದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಎಂ.ಬಿ.ಫೌಂಡೇಶನ್ ಅಧ್ಯಕ್ಷ ಎಂ.ಬಿ.ಸದಾಶಿವ ತಿಳಿಸಿದ್ದಾರೆ.
ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಮ್ಮ ತಂದೆ ಎಂ.ಬಾಲಕೃಷ್ಣ ಗೌಡ ಹಾಗೂ ತಾಯಿ ದೇವಕಿ ಅವರ ಸ್ಮರಣಾರ್ಥ ಪ್ರತಿ ವರ್ಷ ಒಂದು ಸರಕಾರಿ ಹಾಗೂ ಖಾಸಗಿ ಶಾಲೆಯ ಒಬ್ಬೊಬ್ಬರು ಶಿಕ್ಷಕರನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡಲಾಗುವುದು. ಪ್ರಶಸ್ತಿ ನಗದು ಹಾಗೂ ಫಲಕ ಒಳಗೊಂಡಿದೆ. ಪ್ರಶಸ್ತಿಗೆ ಆಯ್ಕೆಗೆ ಆಯ್ಕೆ ಸಮಿತಿಯನ್ನು ರಚಿಸಲಾಗಿದ್ದು ಪ್ರಶಸ್ತಿ ವಿಜೇತರನ್ನು ಆಯ್ಕೆ ಮಾಡಲಾಗಿದೆ ಎಂದರು.
ಎಂ.ಬಿ.ಫೌಂಡೇಶನ್ ವತಿಯಿಂದ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಒಂಟಿ ಜೀವನವನ್ನು ನಡೆಸುವವರಿಗೆ ಜೀವನೋತ್ಸಾವ ಹೆಚ್ಚಿಸುವ ದೃಷ್ಠಿಯಿಂದ ಒಂದು ದಿನ ಸಾಂದೀಪ ಶಾಲೆಯ ಪರಿಸರದಲ್ಲಿ ವಿವಿಧ ರಿಕ್ರೀಯೇಷನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.
ದಿನಪೂರ್ತಿ ವಿವಿಧ ಕಲಾ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಬಿಪಿಎಲ್ ಪಟ್ಟಿಯಲ್ಲಿರುವ ಪಾರ್ಶ್ವವಾಯು ಪೀಡಿತರಿಗೆ ಫಿಸಿಯೋಥೆರಪಿ ಕ್ಯಾಂಪ್ಗಳನ್ನು ಹಮ್ಮಿಕೊಳ್ಳಲಾಗುವುದು.
ಎಂ ಬಿ ಫೌಂಡೇಶನ್ ವತಿಯಿಂದ ನಡೆಸುತ್ತಿರುವ ಸಾಂದೀಪ್ ಶಾಲೆಯ ವಿದ್ಯಾರ್ಥಿಗಳು ಬಟ್ಟೆಯ ಬ್ಯಾಗ್ಗಳನ್ನು ತಯಾರಿಸುತ್ತಿದ್ದು. ಈ ಬ್ಯಾಗ್ಗಳಿಗೆ ಉತ್ತಮ ಬೇಡಿಕೆ ಬರುತ್ತಿದೆ. ಇದರಿಂದ ಬರುವ ಆದಾಯವನ್ನು ಮಕ್ಕಳ ಮುಂದಿನ ಜೀವನಕ್ಕೆ ನೆರವಾಗಲೆಂದು ಅವರ ಖಾತೆಗೆ ಜಮಾ ಮಾಡಲಾಗುವುದು ಎಂದು ಎಂ.ಬಿ.ಸದಾಶಿವ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಎಂ.ಬಿ.ಫೌಂಡೇಶನ್ನ ಸಲಹೆಗಾರರಾದ ನೇತ್ರಾವತಿ ಪಡ್ಡಂಬೈಲು,ರಾಧಾಕೃಷ್ಣ ಮಾಣಿಬೆಟ್ಟು, ಖಜಾಂಜಿ ಪುಷ್ಪಾವತಿ ರಾಧಾಕೃಷ್ಣ, ಟ್ರಸ್ಟಿಗಳಾದ ಶರೀಫ್ ಜಟ್ಟಿಪಳ್ಳ ಉಪಸ್ಥಿತರಿದ್ದರು.