ನಾಳೆ (ಅ.4) ಯಿಂದ ಗ್ರಾ.ಪಂ.ಅಧಿಕಾರಿ, ನೌಕರರಿಂದಲೂ ಮುಷ್ಕರ
ಗ್ರಾಮಾಂತರ ಪ್ರದೇಶದಲ್ಲಿ ಅಗತ್ಯ ಸೇವೆಗಳು ಸ್ಥಗಿತ ಸಾಧ್ಯತೆ
ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೆ.26ರಿಂದ ನಡೆಯುತ್ತಿರುವ ಗ್ರಾಮ ಆಡಳಿತಾಧಿಕಾರಿಗಳ ಅನಿರ್ಧಿಷ್ಟಾವಧಿ ಈ ಮುಷ್ಕರ ಮುಂದುವರಿದಿದೆ. ಈ ಮಧ್ಯೆ ಅ.4ರಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖಾಧಿಕಾರಿಗಳು, ನೌಕರರು ಹಾಗೂ ಸದಸ್ಯರ ಒಕ್ಕೂಟ ಕೂಡಾ ರಾಜ್ಯದಾದ್ಯಂತ ಅನಿರ್ಧಿಷ್ಟ ಮುಷ್ಕರ ನಡೆಸಲಿದ್ದಾರೆ. ಇದರಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಅಗತ್ಯ ಸೇವೆಗಳು ಸಂಪೂರ್ಣ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಸರಕಾರದ ಯೋಜನೆಗಳನ್ನು ಕಟ್ಟ ಕಡೆಯ ಜನರಿಗೆ ತಲುಪಿಸುವ ಗ್ರಾಮ ಆಡಳಿತಾಧಿಕಾರಿಗಳ ಕಚೇರಿ ಹಾಗೂ ಗ್ರಾಮ ಪಂಚಾಯತ್ಗಳು, ಸಿಬ್ಬಂದಿಗಳ ಮುಷ್ಕರದಿಂದ ಬಂದ್ ಆಗಲಿದ್ದು ಗ್ರಾಮೀಣ ಪ್ರದೇಶದ ನಾಗರಿಕರಿಗೆ ದೊರೆಯಬೇಕಾದ ಎಲ್ಲಾ ಸೇವೆಗಳು ಸ್ಥಗಿತಗೊಳ್ಳಲಿದೆ.
ರಾಜ್ಯದ ಶೇ.68ರಿಂದ 70ರಷ್ಟು ಜನರಿಗೆ ಸ್ಥಳೀಯ ಸಂಸ್ಥೆಯಾದ ಗ್ರಾಮ ಪಂಚಾಯತ್ ಗಳಿಂದ ಶೇ.70ರಷ್ಟು ಸೇವೆಗಳನ್ನು ನೀಡಲಾಗುತ್ತಿದೆ. ಈ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ದ್ವಿತೀಯ ದರ್ಜೆ ಲೆಕ್ಕ ಸಹಾಯಕರುಗಳು, ಗ್ರಾಮ ಪಂಚಾಯತಿ ಪಂಚ ನೌಕರರಾದ ಪಿ.ಡಿ.ಒ, ಕರವಸೂಲಿಗಾರರು, ಜಲಗಾರರು, ಕಛೇರಿ ಸಹಾಯಕರು, ಸ್ವಚ್ಛತಾಗಾರರು ಕಾರ್ಯನಿರ್ವಹಣೆಯಲ್ಲಿ ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ಪರಿಹರಿಸುವಂತೆ ಹಾಗೂ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಸರ್ಕಾರ ಮತ್ತು ಇಲಾಖೆಗೆ ಹಲವಾರು ವರ್ಷಗಳಿಂದ ಮನವಿ ಸಲ್ಲಿಸಲಾಗಿದೆ. ಆದರೆ ಯಾವುದೇ ಮನವಿಗಳಿಗೂ ಸ್ಪಂದಿಸದೆ ಕೇವಲ ಎಲ್ಲಾ ಸಮಸ್ಯೆಗಳಿಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು, ನೌಕರರನ್ನು ಹಾಗೂ ಸಿಬ್ಬಂದಿಗಳನ್ನು ನೇರ ಹೊಣೆಗಾರ ಮಾಡಲಾಗುತ್ತಿರುವ ಸರ್ಕಾರ ಮತ್ತು ಇಲಾಖೆಯ ಧೋರಣೆಯನ್ನು ಖಂಡಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅ.4ರಿಂದ ರಾಜ್ಯಾದ್ಯಂತ ಗ್ರಾಮ ಪಂಚಾಯತ್ ಗಳಲ್ಲಿ ಸಿಬ್ಬಂದಿಗಳು ಮುಷ್ಕರ ಕೈಗೊಳ್ಳಲಿದ್ದಾರೆ.
ವಿವಿಧ ಬೇಡಿಕೆ ಮುಂದಿರಿಸಿಕೊಂಡು ರಾಜ್ಯಮಟ್ಟದಲ್ಲಿ ನಮ್ಮ ಮುಷ್ಕರ ನಡೆಯುತ್ತಿದೆ. ನಾವೆಲ್ಲ ಪಿಡಿಒಗಳು ಇಂದು ಬೆಂಗಳೂರಿಗೆ ತೆರಳಲಿದ್ದೇವೆ ಎಂದು ತಾಲೂಕು ಸಂಘದ ಅಧ್ಯಕ್ಷ ರವಿಚಂದ್ರ ತಿಳಿಸಿದ್ದಾರೆ.