ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯ ಕೆ.ಯಶವಂತ ರೈ ಸೆ.30 ರಂದು ಸೇವಾ ನಿವೃತ್ತಿ ಹೊಂದಿದ್ದರು.
ಅವರ ಶಿಷ್ಯ ವೃಂದದ ಆಶ್ರಯದಲ್ಲಿ ಗುರು ವಂದನಾ ಮತ್ತು ಗೌರವಾರ್ಪಣಾ ಕಾರ್ಯಕ್ರಮವು ಸೆ.2 ರಂದು ಕಾಲೇಜಿನ ಬೆಳ್ಳಿ ಹಬ್ಬ ಸಭಾಂಗಣದಲ್ಲಿ ನಡೆಯಿತು. ನೂರಾರು ವಿದ್ಯಾರ್ಥಿಗಳು ಭಾಗವಹಿಸಿ ಗುರುವಂದನೆ ಸಲ್ಲಿಸಿದರು.ಅಲ್ಲದೆ ಗುರುಗಳ ಪಾದ ಮುಟ್ಟಿ ಆಶೀರ್ವಾದ ಪಡೆದರು. ಕಾಲೇಜಿನಲ್ಲಿ ನಡೆದ
ಕಾರ್ಯಕ್ರಮದಲ್ಲಿ ಗುರುಗಳಾದ ಯಶವಂತ ರೈ ಅವರಿಗೆ ತನ್ನ ಸೇವಾವಧಿಯ 37 ವರ್ಷದ ಶಿಷ್ಯರ ವತಿಯಿಂದ ಗೌರವಾರ್ಪಣೆ ನೆರವೇರಿತು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಸರ್ವ ಶಿಷ್ಯರ ಪರವಾಗಿ ಯಶವಂತ ರೈ ಅವರನ್ನು ಸನ್ಮಾನಿಸಿ ಗೌರವಿಸಿದರು. ಇದರೊಂದಿಗೆ ಗುರುಗಳ ಪತ್ನಿ ಸುಜಾತಾ ಯಶವಂತ ರೈ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ಕಾಲೇಜಿನ ಪ್ರಾಚಾರ್ಯ ಸೋಮಶೇಖರ ನಾಯಕ್, ಹಿರಿಯ ವಿದ್ಯಾರ್ಥಿ ಸಂಘದ ರಾಜೇಶ್ ಎನ್.ಎಸ್ ವೇದಿಕೆಯಲ್ಲಿದ್ದರು. ಎಲ್ಲಾ ಶಿಷ್ಯರು ಗುರುಗಳ ಪಾದ ಸ್ಪರ್ಶಿಸಿ ಆಶೀರ್ವಾದ ಪಡೆದರು. ಗುರು ವಂದನಾ ಕಾರ್ಯಕ್ರಮದಲ್ಲಿ ಅವಳಿ ವೇದಿಕೆ ನಿರ್ಮಿಸಲಾಗಿತ್ತು. ಪ್ರಧಾನ ವೇದಿಕೆಯಲ್ಲಿ ಸರ್ವ ಶಿಷ್ಯರಿಂದ ಮತ್ತು ಅಭಿಮಾನಿಗಳಿಂದ ಗೌರವಾರ್ಪಣೆ ನಡೆಯಿತು.
ಇನ್ನೊಂದು ವೇದಿಕೆಯಲ್ಲಿ ಹಿರಿಯ ವಿದ್ಯಾರ್ಥಿಗಳು, ಅಭಿಮಾನಿಗಳು ಭಾಗವಹಿಸಿದ್ದರು. ಪ್ರತ್ಯೇಕವಾಗಿ ಎರಡನೇ ವೇದಿಕೆಯಲ್ಲಿ ಗುರುಗಳನ್ನು ಸನ್ಮಾನಿಸಿ ಸ್ಮರಣಿಕೆ ನೀಡಿ ಆಶೀರ್ವಾದ ಪಡೆದರು. ಪ್ರಧಾನ ವೇದಿಕೆಯಲ್ಲಿ ಯಶವಂತ ರೈಗಳ ಶಿಷ್ಯರಾದ ವಿದ್ವಾನ್ ಜಯಂತಿ ಭಟ್ ಆನೆಗುಡ್ಡಿ ಇವರಿಂದ ಶಾಸ್ರ್ತೀಯ ಸಂಗೀತ, ಭರತನಾಟ್ಯ ಗುರು ವಿದುಷಿ ಮಂಜುಳಾ ಸುಬ್ರಹ್ಮಣ್ಯ ಅವರಿಂದ ಅರ್ಧನಾರೀಶ್ವರಿ ಭರತನಾಟ್ಯ ರೂಪಕ ನಡೆಯಿತು. ಅಂಕಿತಾ, ದಿಲೀಶ್, ಲಿಖಿತಾ, ಬಾಲಮುರಳಿ ಅವರಿಂದ ಸ್ಯಾಕ್ಸೋಪೋನ್ ಮತ್ತು ನಾಗಸ್ವರ ವಾದನ ನಡೆಯಿತು.ಇವರಿಗೆ ಶಿಷ್ಯರಾದ ಶ್ರುತನ್ ಸುಬ್ರಹ್ಮಣ್ಯ, ಹರೀಶ್ ನಾಯಕ್, ಕಾರ್ತಿಕ್ ಸುಬ್ರಹ್ಮಣ್ಯ ಹಿಮ್ಮೇಳ ಸಹಕಾರ ನೀಡಿದರು.ಬಳಿಕ ಗುರುಗಳ ಶಿಷ್ಯ ವೃಂದ ದಿಂದ ಸುದರ್ಶನ ವಿಜಯ ಯಕ್ಷಗಾನ ನಡೆಯಿತು.ಉಪನ್ಯಾಸಕಿ ಭವ್ಯಶ್ರೀ ಕುಲ್ಕುಂದ ಭಾಗವತಿಕೆಯಲ್ಲಿ ಸಹಕರಿಸಿದರು.