ಬಸ್‌ನಲ್ಲಿ ಯುವತಿಗೆ ಕಿರುಕುಳ : ಸುಳ್ಯದಲ್ಲಿ ಯುವಕನ ಮೇಲೆ ಹಲ್ಲೆ ಪ್ರಕರಣದ ಆರೋಪಿಗಳಿಗೆ ಜಾಮೀನು

0

ಬಸ್‌ನಲ್ಲಿ ಯುವತಿಗೆ ಕಿರುಕುಳ – ಸುಳ್ಯದಲ್ಲಿ ಯುವಕನ ಮೇಲೆ ಹಲ್ಲೆ ಪ್ರಕರಣದಲ್ಲಿ ಅಬ್ದುಲ್ ನಿಯಾಝ್ ಎಂಬ ಯುವಕನ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೊಳಗಾಗಿ ಪೊಲೀಸರಿಂದ ಬಂಧಿಸಲ್ಪಟ್ಟು ನ್ಯಾಯಾಂಗ ಬಂಧನದಲ್ಲಿದ್ದ ವರ್ಷಿತ್ ಚೊಕ್ಕಾಡಿ, ಮಿಥುನ್ ಮತ್ತು ಸುಶ್ಮಿತ್‌ರವರಿಗೆ ಪುತ್ತೂರಿನಲ್ಲಿರುವ ೫ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯವು ಜಾಮೀನು ನೀಡಿದೆ.
ಸೆ. ೨೩ರಂದು ಮುಂಜಾನೆ ಬೆಂಗಳೂರಿನಿಂದ ಸುಬ್ರಹ್ಮಣ್ಯ ಮಾರ್ಗವಾಗಿ ಸುಳ್ಯಕ್ಕೆ ಬರುತ್ತಿದ್ದ ಸರಕಾರಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಸುಳ್ಯದ ಕಾಲೇಜೊಂದರ ಯುವತಿಯೊಡನೆ ಅದೇ ಬಸ್‌ನಲ್ಲಿ ಬರುತ್ತಿದ್ದ ಪಳ್ಳಂಗೋಡಿನ ಅಬ್ದುಲ್ ನಿಯಾಝ್ ಎಂಬ ಯುವಕ ಅನುಚಿತವಾಗಿ ವರ್ತಿಸಿದನೆಂಬ ಕಾರಣಕ್ಕಾಗಿ ಸುಳ್ಯದಲ್ಲಿ ಕೆಲವು ಯುವಕರು ಆತನ ಮೇಲೆ ಹಲ್ಲೆ ನಡೆಸಿದ್ದರು. ಈ ಪ್ರಕರಣಕ್ಕೆ ಸಂಬಂಧಪಟ್ಟು ವರ್ಷಿತ್ ಚೊಕ್ಕಾಡಿ, ಮಿಥುನ್, ಸುಶ್ಮಿತ್, ಹರ್ಷಿತ್ ಮತ್ತು ವಿಜೇತ್ ಮತ್ತು ಇತರ ಯುವಕರ ಮೇಲೆ ಸೆಕ್ಷನ ೩೦೭ರ ಪ್ರಕಾರ ಸುಳ್ಯ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ವರ್ಷಿತ್ ಮತ್ತು ಮಿಥುನ್‌ರನ್ನು ಸೆ. ೨೩ರಂದೇ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಸುಷ್ಮಿತ್ ಎಂಬ ವಿದ್ಯಾರ್ಥಿಯನ್ನು ಸೆ. ೨೬ರಂದು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು. ನಿನ್ನೆ ಈ ಮೂವರಿಗೂ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ವರ್ಷಿತ್ ಮತ್ತು ಮಿಥುನ್‌ರ ಪರವಾಗಿ ಪುತ್ತೂರಿನ ಖ್ಯಾತ ನ್ಯಾಯವಾದಿ ಮಹೇಶ್‌ಕುಮಾರ್ ಕಜೆ ಹಾಗೂ ಸುಶ್ಮಿತ್ ಪರವಾಗಿ ನ್ಯಾಯವಾದಿ ನರಸಿಂಹ ಪ್ರಸಾದ್ ವಾದಿಸಿದ್ದರು.
ನಿರೀಕ್ಷಣಾ ಜಾಮೀನಿಗೆ ಪ್ರಯತ್ನ
ಹಲ್ಲೆ ಪ್ರಕರಣದ ಇನ್ನಿಬ್ಬರು ಆರೋಪಿಗಳಾದ ಹರ್ಷಿತ್ ಮತ್ತು ವಿಜೇತ್‌ರವರು ನಿರೀಕ್ಷಣಾ ಜಾಮೀನಿಗಾಗಿ ನ್ಯಾಯವಾದಿ ಮಹೇಶ್ ಕಜೆಯವರ ಮೂಲಕ ನ್ಯಾಯಾಲಯದ ಮೆಟ್ಟಿಲೇರಿದ್ದಾರೆಂದು ತಿಳಿದುಬಂದಿದೆ.