ದೇವಿ ಹಾಗೂ ದೈವದ ದರ್ಶನ ಪಾತ್ರಿಯವರಿಂದ ಸೇರಿದ ಭಕ್ತಾದಿಗಳಿಗೆ ಅಭಯ
ಉಬರಡ್ಕಮಿತ್ತೂರು ಗ್ರಾಮದ ಉದಯಗಿರಿ ಕಮಿಲಡ್ಕಶ್ರೀದುರ್ಗಾದೇವಿ ಮಂದಿರ, ಶ್ರೀ ಮಹಾ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ವರ್ಪ್ರಂಪ್ರತಿ ಜರಗುವ ಮಹಾನವರಾತ್ರಿ ಉತ್ಸವವು ಅ. 11 ರಂದು ಶ್ರೀ ದೇವಿಯ ಪಾತ್ರಿ ರವಿ ಪ್ರಸಾದ್ ಕಮಿಲಡ್ಕ ಮತ್ತು ವಿಷ್ಣುಮೂರ್ತಿ ದೈವದ ಪಾತ್ರಿ ರಾಮ ಮಣಿಯಾಣಿ ಆಲೆಟ್ಟಿ ಯವರ ನೇತೃತ್ವದಲ್ಲಿ ಭಕ್ತಿ ಶ್ರದ್ಧೆಯಿಂದ ಜರುಗಿತು.
ಕ್ಷೇತ್ರದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಅ.1 ರಂದು ಬೆಳಗ್ಗೆ ಗಣಪತಿ ಹವನವಾಗಿ, ಅ.3 ರಂದು ಪ್ರಾತ:ಕಾಲದಲ್ಲಿ ಶ್ರೀ ದೇವಿಯು ಗದ್ದಿಗೇರುವ ಕಾರ್ಯಕ್ರಮ ನಡೆಯಿತು.
ಅ. 10 ರಂದು ಬೆಳಗ್ಗೆ ಸಾನಿಧ್ಯದಲ್ಲಿ ಹೊಸ ಅಕ್ಕಿ ನವನ್ನ (ಕದಿರು ಕಟ್ಟುವ ವಿಶೇಷ ಕಾರ್ಯಕ್ರಮವು ನಡೆಯಿತು.
ಅ.11ರಂದು ಬೆಳಗ್ಗೆ ಸ್ಥಳೀಯ ಭಜಕ ವೃಂದದವರಿಂದ ಭಜನಾ ಕಾರ್ಯಕ್ರಮವಾಗಿ ನಂತರಶ್ರೀ ದುರ್ಗಾದೇವಿ ಮತ್ತುಶ್ರೀಮಹಾವಿಷ್ಣುಮೂರ್ತಿ ದೈವದ ದರ್ಶನ ಸೇವೆಯಾಗಿ ಬಳಿಕ ಮಾರಿಕಳ ಪ್ರವೇಶವಾಯಿತು.
ಈ ಸಂದರ್ಭದಲ್ಲಿ ಭಕ್ತಾದಿಗಳಿಂದ ಹರಕೆಯ ತುಲಾ ಭಾರ ಸೇವೆಯು ನಡೆದು ಪ್ರೇತ ಉಚ್ಚಾಟನೆ ಮತ್ತು ಭಕ್ತರಿಂದ ಹರಕೆ ಒಪ್ಪಿಸುವ ಕಾರ್ಯಕ್ರಮವು ಜರುಗಿತು. ಆಗಮಿಸಿದ ಭಕ್ತಾದಿಗಳಿಗೆ ಪ್ರಸಾದ ವಿತರಣೆಯಾಗಿ ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆಯಾಯಿತು. ಅಪರಾಹ್ನ ಮಂಗಳ ಸ್ನಾನವಾಗಿ ವಿಶೇಷವಾಗಿ ಸಾಮೂಹಿಕ ಆಯುಧ ಪೂಜೆಯು ನಡೆಯಿತು.
ಸಹಸ್ರಾರು ಸಂಖ್ಯೆಯಲ್ಲಿ ಊರಿನ ಮತ್ತು ಪರ ಊರಿನ ಭಕ್ತಾದಿಗಳು ಆಗಮಿಸಿ ಪ್ರಸಾದ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ವಿಶ್ವನಾಥ ಪೂಜಾರಿ ಕಮಿಲಡ್ಕ, ಲೋಕೇಶ್ ಕೋಟ್ಯಾನ್ ಕಮಿಲಡ್ಕ, ಗುಳಿಗ ದೈವದ ಪೂಜಾರಿ ಶಶಿಧರ ಕಮಿಲಡ್ಕ ಹಾಗೂ ಕುಟುಂಬದ ಸದಸ್ಯರು ಸಹಕರಿಸಿದರು.