ಕಾಯರ್ತೋಡಿ: ಕಾಡಾನೆ ದಾಳಿಗೆ ಅಪಾರ ಪ್ರಮಾಣದ ಅಡಿಕೆ – ಬಾಳೆ ಕೃಷಿಗೆ ಹಾನಿ

0

ಒಂದು ತಿಂಗಳ ಬಳಿಕ ಮತ್ತೆ ಸುಳ್ಯ ನಗರದ ಆಸುಪಾಸಿಗೆ ಬಂದ ಕಾಡಾನೆಗಳು

ಕಳೆದ ಒಂದು ತಿಂಗಳ ಹಿಂದೆ ಸುಳ್ಯ ನಗರದ ಆಸುಪಾಸಿನಲ್ಲಿ ಕೃಷಿಕರ ತೋಟಗಳಿಗೆ ನುಗ್ಗಿ ಕೃಷಿ ಹಾನಿಗೊಳಿಸಿದ್ದ ಕಾಡಾನೆಗಳು ಅ.19ರಂದು ರಾತ್ರಿ ಮತ್ತೆ ಕಾಯರ್ತೋಡಿಯಲ್ಲಿ ಕೃಷಿ ಹಾನಿ ಪಡಿಸಿದೆ.

ಕಾಯರ್ತೋಡಿಯ ದೇವರಗುಂಡ ಡಿ.ಎಸ್‌ ‌. ಗಿರೀಶ್ ಅವರ ಕೃಷಿ ತೋಟಕ್ಕೆ ದಾಳಿ ನಡೆಸಿದ ಎರಡು ಕಾಡಾನೆಗಳು ಸುಮಾರು ಮೂವತ್ತು ಅಡಿಕೆ ಮರ, ಹಲವು ಬಾಳೆಗಿಡಗಳು, ಜೀಗುಜ್ಜೆ ಮರ ಸೇರಿದಂತೆ ಅಪಾರ ಪ್ರಮಾಣದಲ್ಲಿ ಕೃಷಿ ನಾಶಪಡಿಸಿದೆ.

ಪಕ್ಕದ ಜಯಂತಿ ಸೋಮಪ್ಪ ಡಿ.ಎಸ್. ಅವರ ಕೃಷಿ ತೋಟದಲ್ಲಿ ಬಾಳೆ ಮತ್ತು ಅಡಿಕೆ ಗಿಡಗಳಿಗೆ ಹಾನಿ ಪಡಿಸಿರುವುದಾಗಿ ತಿಳಿದುಬಂದಿದೆ.
ಕಳೆದ ಒಂದು ತಿಂಗಳ ಹಿಂದೆ ಪರಿವಾರಕಾನ ಪರಿಸರದಲ್ಲಿ ಕೃಷಿಕರ ನಿದ್ದೆಗೆಡಿಸಿದ್ದ ಕಾಡಾನೆಗಳು ಬಳಿಕ ಪೂಮಲೆ ಗುಡ್ಡೆಗೆ ಹೋಗಿದ್ದವು. ಇದೀಗ ಮತ್ತೆ ಕೃಷಿ ತೋಟಕ್ಕೆ ದಾಳಿ ನಡೆಸಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆಯ ಯಶೋಧರ ಸೇರಿದಂತೆ ಸಿಬ್ಬಂದಿಗಳು ಬಂದು ಪರಿಶೀಲನೆ ನಡೆಸಿರುವುದಾಗಿ ತಿಳಿದುಬಂದಿದೆ.