ಕತ್ತಲ ಬಾಳಿಗೆ ಹಣತೆ ಹಚ್ಚಿ ಜೀವನ ಬೆಳಗಿಸಲು ಮುಂದಾದ ಶೇಣಿಯ ನಾಗರಿಕರು
ದಿಕ್ಕು ದೆಸೆಯಿಲ್ಲದೆ, ಮಳೆ, ಬಿಸಿಲಿನ ಅರಿವಿಲ್ಲದೆ, ಆರೋಗ್ಯದ ಕಾಳಜಿಯಿಲ್ಲದೆ ಸಹೃದಯಿಗಳು ಕೊಟ್ಟ ಆಹಾರವನ್ನು ಸೇವಿಸಿ ಬಸ್ ನಿಲ್ದಾಣ, ಮರದಡಿಯಲ್ಲಿ ಆಶ್ರಯ ಪಡೆಯುತ್ತಿದ್ದ ಮಾನಸಿಕ ಅಸ್ವಸ್ಥರಂತಿದ್ದ ಕಜೆಮೂಲೆಯ ಆನಂದ ಎಂಬವರನ್ನು ಊರವರ ಸಹಕಾರದಿಂದ ಮಂಜೇಶ್ವರದ ದೈಗೋಳಿ ಶ್ರೀ ಸಾಯಿ ಸೇವಾ ಪ್ರತಿಷ್ಠಾನದ ಸೇವಾಶ್ರಮಕ್ಕೆ ದಾಖಲಿಸಲಾಗಿದೆ.
ಮೂಲತಃ ಅಮರಪಡ್ನೂರು ಗ್ರಾಮದ ದಿ. ಮಹಾಲಿಂಗ ಬೈರ ಎಂಬವರ 5 ಗಂಡು ಮಕ್ಕಳಲ್ಲಿ ಆನಂದರು ಕೊನೆಯವರು. ಹಲವಾರು ವರ್ಷಗಳಿಂದ ಮಾನಸಿಕ ಅಸ್ವಸ್ಥರಾಗಿ ಶೇಣಿ, ಕಜೆಮೂಲೆ, ಮುಂಡುಗಾರು ಭಾಗಗಳಲ್ಲಿ ತಿರುಗಾಡುತ್ತಾ ಯಾರಾದರೂ ಏನಾದರೂ ತಿನಿಸು ಕೊಟ್ಟರೆ ತಿಂದು ಬದುಕು ಸಾಗಿಸುತ್ತಿದ್ದರು. ಯಾರಿಗೂ ತೊಂದರೆ ಮಾಡದೆ ಕೇವಲ ಆಹಾರವನ್ನು ಮಾತ್ರ ಕೇಳುತ್ತಿದ್ದರು. ಕೆಲವು ವರ್ಷಗಳಿಂದ ಶೇಣಿ ಪರಿಸರದ ಅಮರಪಡ್ನೂರು ಗ್ರಾ.ಪಂ. ಸದಸ್ಯ ಅಶೋಕ್ ಚೂಂತಾರು ಸೇರಿದಂತೆ ಕೆಲವರು ಉಡುಪಿ ಇನ್ನಿತರ ಆಶ್ರಮಗಳನ್ನು ಸಂಪರ್ಕಿಸಿದರೂ ಅದರಲ್ಲಿ ಯಶಸ್ಸು ಕಂಡಿರಲಿಲ್ಲ.
ಇದೀಗ ವಾಲ್ತಾಜೆ ಗಣಪ್ಪಯ್ಯ ಭಟ್ ರವರು ಮೇಘಶ್ಯಾಮ ಅಂಗ್ರಿಯವರೊಂದಿಗೆ ಮಾತನಾಡಿ ಮಂಜೇಶ್ವರ ತಾಲೂಕಿನ ದೈಗೋಳಿಯ ಶ್ರೀ ಸಾಯಿ ಸೇವಾ ಪ್ರತಿಷ್ಠಾನ ದವರನ್ನು ಸಂಪರ್ಕಿಸಿ ಅಲ್ಲಿನ ಆಶ್ರಮಕ್ಕೆ ಸೇರಿಸಿಕೊಳ್ಳುವ ಬಗ್ಗೆ ಮಾತನಾಡಿದರು. ಅದರಂತೆ ಆನಂದರನ್ನು ಸ್ಥಳಿಯ ಗ್ರಾ.ಪಂ. ಒಪ್ಪಿಗೆಯಂತೆ ಸಾಯಿ ನಿಕೇತನ ಮಾನಸಿಕ ಪುನರ್ವಸತಿ ಕೇಂದ್ರಕ್ಕೆ ಸೇರಿಸಿಕೊಳ್ಳಲು ನಿರ್ಧರಿಸಿ ಆಶ್ರಮಕ್ಕೆ ಕೊಂಡೊಯ್ದಿದ್ದಾರೆ. ಈ ಹಿಂದೆ ಕೇಶವ ಭಟ್ ರವರು ಕಟಪಾಡಿ ಆಶ್ರಮಕ್ಕೆ ಸೇರಿಸುವ ಸಂದರ್ಭದಲ್ಲಿ ಸಿದ್ದಿವಿನಾಯಕ ಭಟ್ ಚೂಂತಾರು, ಮಹೇಶ ಭಟ್ ಚೂಂತಾರು, ಸತ್ಯ ವೆಂಕಟೇಶ್ ಹೆಬ್ಬಾರ್, ರಾಮಯ್ಯ ರೈ ಕಜೆಮೂಲೆ, ಗುರು ಪ್ರಸಾದ್ ರೈ ಶೇಣಿ, ಹರಿಪ್ರಸಾದ್ ರೈ ಶೇಣಿ ಮತ್ತಿತರರು ಪ್ರಯತ್ನ ಪಟ್ಟಿದ್ದರು. ಆದರೆ ಅವರು ಮತ್ತೆ ಊರಿಗೆ ಹಿಂತಿರುಗಿದ್ದರು.
ಇದೀಗ ಡಾ. ಉದಯಕುಮಾರ್- ಡಾ. ಶಾರದಾ ದಂಪತಿಗಳ ನೇತೃತ್ವದ ಶ್ರೀ ಸಾಯಿ ನಿಕೇತನ ಸೇವಾಶ್ರಮ ದೈಗೋಳಿ ಯವರ ತಂಡ ಶೇಣಿಗೆ ಆಗಮಿಸಿ ತಮ್ಮದೇ ಅಂಬುಲೆನ್ಸ್ ನಲ್ಲಿ ಆನಂದ ರವರನ್ನು ತಮ್ಮ ಆಶ್ರಮಕ್ಕೆ ಸೇರಿಸಿಕೊಳ್ಳಲು ಕರೆದು ಕೊಂಡು ಹೋಗಿರುತ್ತಾರೆ. ಈ ಬಗ್ಗೆ ಶ್ರಮವಹಿಸಿದ ಅಮರಮುಡ್ನೂರು ಗ್ರಾ. ಪಂ. ಸದಸ್ಯ ಅಶೋಕ್ ಚೂಂತಾರುರವರು ಸುದ್ದಿಗೆ ಮಾಹಿತಿ ನೀಡಿ, ಮುಂದಿನ ವಾರ ಇವರ ತಂಡ ಆಶ್ರಮಕ್ಕೆ ತೆರಳಿ ಸಾಧ್ಯವಾದಷ್ಟು ಧನ ಸಹಾಯ ನೀಡುವ ಆಲೋಚನೆಯಲ್ಲಿದ್ದು, ಧನ ಸಹಾಯ ನೀಡುವ ಸಹೃದಯಿಗಳು ಅಶೋಕ್ ಚೂಂತಾರುರವರನ್ನು (9008179329) ಸಂಪರ್ಕಿಸುವಂತೆ ವಿನಂತಿಸಿಕೊಂಡಿದ್ದಾರೆ.
ನಮ್ಮ ಹಾಗೆ ಬದುಕುವ ಹಕ್ಕನ್ನು ಹೊಂದಿರುವ ಇಂತ ಹತ್ತಾರು ಮಂದಿ ನಮಗೆ ಕಾಣಸಿಗುತ್ತಾರೆ. ಅಶೋಕ್ ಚೂಂತಾರು, ಗಣಪಯ್ಯ ವಾಲ್ತಾಜೆ ಮತ್ತು ಶೇಣಿ ಪರಿಸರದ ಸಹೃದಯಿ ನಾಗಿರಿಕರು ಮಾಡಿದ ಈ ಪುಣ್ಯದ ಕಾರ್ಯ ಸಮಾಜಕ್ಕೆ ಮಾದರಿಯಾಗಲಿ ಎಂಬುದು ನಮ್ಮ ಆಶಯ.