ಶಾಸಕರ ಸೂಚನೆ ಬಳಿಕವೂ ಸುಳ್ಯ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ಖಾಲಿ ಖಾಲಿ

0

ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳಿಗೆ ಬಸ್ಸಿಗಾಗಿ ಮುಗಿಯದ ಪರದಾಟ

ಕಳೆದ ಕೆಲವು ದಿನಗಳಿಂದ ಸುಳ್ಯ ಕೆ ಎಸ್ ಅರ್ ಟಿ ಸಿ ಬಸ್ಸು ನಿಲ್ದಾಣದಲ್ಲಿ ಬಸುಗಳ ಕೊರತೆ ಕಂಡುಬರುತ್ತಿದ್ದು ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳು ಬಿತ್ತರಗೊಂಡಿತು.

ವರದಿ ಮತ್ತು ವಿದ್ಯಾರ್ಥಿಗಳ ವಿನಂತಿ ಮೇರೆಗೆ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು. ಭಾಗೀರಥಿ ಮುರುಳ್ಯ ರವರು ನ.6ರಂದು ಬಸ್ಸು ನಿಲ್ದಾಣ ಮತ್ತು ಡಿಪೋಗೆ ತೆರಳಿ ಬಸ್ಸುಗಳ ಕೊರತೆಯ ಬಗ್ಗೆ ಮಾಹಿತಿ ಪಡೆದು ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಸೂಚನೆಯನ್ನು ನೀಡಿ ಬಂದಿದ್ದರು.

ಆದರೆ ಶಾಸಕರ ಸೂಚನೆಯ ಬಳಿಕವೂ ನವಂಬರ್ 7ರಂದು ಸಂಜೆ ಮತ್ತೆ ಬಸ್ಸುಗಳ ಕೊರತೆ ನಿಲ್ದಾಣದಲ್ಲಿ ಕಂಡುಬಂದಿದ್ದು ಶಾಲಾ ವಿದ್ಯಾರ್ಥಿಗಳು ಮತ್ತು ವಿವಿಧ ಭಾಗಗಳಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಸಮಯಕ್ಕೆ ಸರಿಯಾಗಿ ಬಸ್ಸುಗಳು ಬಾರದೆ ಮತ್ತೆ ಸಮಸ್ಯೆಗಳು ಉಂಟಾಯಿತು.

ವಿಶೇಷವಾಗಿ ಗ್ರಾಮೀಣ ಭಾಗಗಳಿಗೆ ತೆರಳುವ ಬಸ್ಸುಗಳ ಸಂಖ್ಯೆ ಅತಿ ವಿರಳವಾದ ಹಿನ್ನೆಲೆಯಲ್ಲಿ ಬೆಳ್ಳಾರೆ,ಕಡಬ ಮಂಡೆಕೋಲು, ಕೊಯನಾಡು ಮುಂತಾದ ಕಡೆಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಇನ್ನು ಹೆಚ್ಚಿನ ಸಮಸ್ಯೆ ಉಂಟಾಯಿತು.
ಈ ಸಮಸ್ಯೆ ಬೆಳಿಗ್ಗೆ ಶಾಲೆಗಳಿಗೆ ಬರುವ ಸಂಧರ್ಭವೂ ಕೂಡ ಉಂಟಾಗಿತ್ತು.

ಈ ಬಗ್ಗೆ ಕೆಎಸ್ಆರ್ಟಿಸಿ ಬಸ್ಸು ನಿಲ್ದಾಣದಲ್ಲಿ ಅಧಿಕಾರಿಗಳಲ್ಲಿ ವಿಚಾರಿಸಿದಾಗ ದೀಪಾವಳಿ ಹಬ್ಬಕ್ಕೆ ಕೆಲವು ಸಿಬ್ಬಂದಿಗಳು ರಜೆಯ ಕಾರಣದಿಂದ ತೆರಳಿರುವ ಹಿನ್ನೆಲೆಯಲ್ಲಿ ಬಸ್ಸುಗಳ ಕೊರತೆ ಉಂಟಾಗಿದೆ ಎಂದು ಹೇಳಿದ್ದಾರೆ. ಆದರೆ ನಾಳೆಗೆ ಈ ಸಮಸ್ಯೆಗಳು ಇರುವುದಿಲ್ಲ ಎಂದು ಅವರು ಭರವಸೆಯನ್ನು ನೀಡಿದರು.
ಒಟ್ಟಿನಲ್ಲಿ ಯಾವ ದಿನಗಳಲ್ಲಿ ಬಸ್ಸುಗಳ ಅವಶ್ಯಕತೆ ಪ್ರಯಾಣಿಕರಿಗೆ ಅತಿ ಹೆಚ್ಚಾಗಿ ಬೇಕಾಗಿತ್ತೋ ಅದೇ ದಿನಗಳಲ್ಲಿ ಬಸ್ಸುಗಳ ಕೊರತೆ ನಿಲ್ದಾಣದಲ್ಲಿ ಕಂಡು ಬಂದದ್ದು ಪ್ರಯಾಣಿಕರಿಗೆ ಸಂಕಷ್ಟಕ್ಕೆ ಕಾರಣವಾಯಿತು.