ನ. 10: ಮೂಡಬಿದಿರೆಯ ಆಳ್ವಾಸ್ ನಲ್ಲಿ ಕರಾವಳಿ ಮರಾಟಿ ಸಮಾವೇಶ – 2024, ಗದ್ದಿಗೆ

0

ಮೂಡಬಿದಿರೆಯ ಆಳ್ವಾಸ್ ವಿದ್ಯಾಸಂಸ್ಥೆಯ ನುಡಿಸಿರಿ ಸಭಾಂಗಣ ವಿದ್ಯಾಗಿರಿಯಲ್ಲಿ ಕರಾವಳಿ ಮರಾಟಿ ಸಮಾವೇಶ 2024, ಗದ್ದಿಗೆ ನ. 10ರಂದು ವಿಜೃಂಭಣೆಯಿಂದ ನಡೆಯಲಿದೆ.


ನ. 10ರಂದು ಬೆಳಿಗ್ಗೆ 10 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಕರ್ನಾಟಕ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾರಂಭ ಉದ್ಘಾಟಿಸಲಿದ್ದಾರೆ.


ಮುಖ್ಯ ಅತಿಥಿಗಳಾಗಿ ವಿಧಾನಸಭಾ ಅಧ್ಯಕ್ಷ ಯು.ಟಿ ಖಾದರ್, ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ ಮಹದೇವಪ್ಪ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಭಾಗವಹಿಸಲಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಸರಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ಸಮಾವೇಶದ ಅಧ್ಯಕ್ಷ ಹೆಚ್ ರಾಜೇಶ್ ಪ್ರಸಾದ್ ಐಎಎಸ್ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯೋಪಾಧ್ಯಾ ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಅಳ್ವ ಸ್ಮರಣಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಇವರೊಂದಿಗೆ ಅನೇಕ ಗಣ್ಯರು ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಭಾಗವಹಿಸಲಿದ್ದಾರೆ. ಸಮಾವೇಶದ ಗೌರವಾಧ್ಯಕ್ಷ ಡಾ. ಕೆ. ಸುಂದರ ನಾಯ್ಕ್ ಮರಾಟಿಗರ ಮನವಿ ಮಂಡನೆ ಮಾಡಲಿದ್ದಾರೆ. ಪದ್ಮಶ್ರೀ ಪುರಸ್ಕೃತ ಮಹಾಲಿಂಗ ನಾಯ್ಕ್ ಅಮೈಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ಅಪರಾಹ್ನ 4ರಿಂದ ಸಮಾರೋಪ ಸಮಾರಂಭ ನಡೆಯಲಿದ್ದು, ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ, ಸಂಸದ ಕ್ಯಾ. ಬ್ರಿಜೇಶ್ ಚೌಟ, ಮಾಜಿ ಸಚಿವ ವಿ. ಸುನಿಲ್ ಕುಮಾರ್, ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಮಾವೇಶದ ಅಧ್ಯಕ್ಷ ಹೆಚ್. ರಾಜೇಶ್ ಪ್ರಸಾದ್ ಐಎಎಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಅಬಕಾರಿ ಇಲಾಖೆಯ ಜಂಟಿ ಆಯುಕ್ತರಾದ ಡಾ. ಬಾಲಕೃಷ್ಣ ಸಿ.ಎಚ್ ಸಮಾರೋಪ ಭಾಷಣ ಮಾಡಲಿದ್ದಾರೆ. ಅನೇಕ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿರಲಿದ್ದಾರೆ.


ಇದರೊಂದಿಗೆ ಹಲವು ಗೋಷ್ಠಿಗಳು ನಡೆಯಲಿದ್ದು, ಬೆಳಿಗ್ಗೆ 11.15ರಿಂದ ಶಿಕ್ಷಣ ಮತ್ತು ಯುವ ಜನತೆ ವಿಚಾರವಾಗಿ ಗೋಷ್ಠಿ ನಡೆಯಲಿದ್ದು, ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ ಅಳ್ವ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ. ಅಪರಾಹ್ನ 12.15 ರಿಂದ ಮರಾಟಿಗರ ಆಚಾರ ವಿಚಾರ ಮತ್ತು ಸಂಸ್ಕಾರ ವಿಚಾರವಾಗಿ ನ್ಯಾಯವಾದಿ ಏನ್.ಎಸ್ ಮಂಜುನಾಥ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ. ಮರಾಟಿ ಭಾಷೆ ಉಳಿಸುವುದು ಮತ್ತು ಬೆಳೆಸುವುದು ವಿಚಾರವಾಗಿ ಶ್ರೀಮತಿ ರತಿ ಪ್ರಭಾಕರ್ ನಾಯ್ಕ್ ಗೋಷ್ಠಿ ನಡೆಸಿಕೊಡಲಿದ್ದಾರೆ. ಅಪರಾಹ್ನ 2.30 ರಿಂದ ಮರಾಟಿಗರ ಸಮಸ್ಯೆ ಮತ್ತು ಸವಾಲುಗಳು ವಿಚಾರವಾಗಿ ಉಚ್ಚ ನ್ಯಾಯಾಲಯದ ನ್ಯಾಯವಾದಿ ಪ್ರವೀಣ್ ಕುಮಾರ್ ಮುಗುಳಿ ವಿಚಾರಗೋಷ್ಠಿ ನಡೆಸಲಿದ್ದಾರೆ. ವಿಚಾರಗೋಷ್ಠಿಯಲ್ಲಿ ಹಲವು ಗಣ್ಯರು ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಲಿದ್ದಾರೆ. ಇದರೊಂದಿಗೆ ವಿವಿಧ ಸಂಸ್ಕೃತಿಕ ತಂಡಗಳಿಂದ, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಪರಿಣತರ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ವಿವಿಧ ವೇದಿಕೆಗಳಲ್ಲಿ ನಡೆಯಲಿದೆ. ಮಂಗಳೂರು, ಉಡುಪಿ, ಕಾಸರಗೋಡು, ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಮರಾಟಿ ಸಮಾಜ ಬಾಂಧವರು ಸಮಾವೇಶಕ್ಕೆ ಆಗಮಿಸಲಿದ್ದು, ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಲಾಗುವುದೆಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.