ಗುಂಡ್ಯ: ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ-ಶಾಸಕರಾದ ಭಾಗೀರಥಿ, ಗುರುರಾಜ್, ಸಂಘಟಕ ಕಿಶೋರ್ ಶಿರಾಡಿ ಸಹಿತ 15 ಮಂದಿ ವಿರುದ್ಧ ಕೇಸು ದಾಖಲು

0

ನೆಲ್ಯಾಡಿ: ಕಸ್ತೂರಿ ರಂಗನ್ ವರದಿ ವಿರೋಧಿಸಿ ನ.15ರಂದು ಮಧ್ಯಾಹ್ನ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಗುಂಡ್ಯದಲ್ಲಿ ರಸ್ತೆ ತಡೆ ನಡೆಸಿದ ಆರೋಪದಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳಿ, ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ, ಸಯ್ಯದ್ ಮೀರಾನ್ ಸಾಹೇಬ್ ಸಹಿತ 15 ಮಂದಿಯ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಉಪ್ಪಿನಂಗಡಿ ಠಾಣಾ ಎಸ್.ಐ.ಅವಿನಾಶ್ ಅವರ ದೂರಿನಂತೆ ಈ ಕೇಸು ದಾಖಲಾಗಿದೆ. ನ.15ರಂದು ಸಿರಿಬಾಗಿಲು ಗ್ರಾಮದ ಲಕ್ಷ್ಮೀ ವೆಂಕಟೇಶ್ ದೇವಸ್ಥಾನದ ಮಾಡ ಮೈದಾನದಲ್ಲಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ವತಿಯಿಂದ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಅವರ ನೇತೃತ್ವದಲ್ಲಿ ಪ್ರತಿಭಟನಾ ಸಭೆ ನಡೆದಿದ್ದು ಪ್ರತಿಭಟನಾ ಸಭೆಯಲ್ಲಿದ್ದವರು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯರವರ ನೇತೃತ್ವದಲ್ಲಿ ಪ್ರತಿಭಟನಾ ಸಭೆಯ ಸ್ಥಳದಿಂದ ಸುಮಾರು 1 ಕಿ.ಮೀ ದೂರದ ರಾಷ್ಟ್ರೀಯ ಹೆದ್ದಾರಿ 75ರ ಕಡಬ ತಾಲೂಕು ಶಿರಾಡಿ ಗ್ರಾಮದ ಗುಂಡ್ಯಪೇಟೆಗೆ ಬಂದು ಮಧ್ಯಾಹ್ನ 2.30 ಗಂಟೆಗೆ ರಸ್ತೆತಡೆಯನ್ನು ಪ್ರಾರಂಭಿಸಿದ್ದು ರಸ್ತೆಯ ಮಧ್ಯದಲ್ಲಿಯೇ ಶಾಸಕರಾದ ಭಾಗೀರಥಿ ಮುರುಳ್ಯ, ಗುರುರಾಜ್ ಗಂಟಿಹೊಳೆ, ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ, ಪ್ರತಿಭಟನಾಕಾರರಾದ ಸುಧೀರ್ ಶೆಟ್ಟಿ, ನವೀನ್ ನೆರಿಯಾ, ಸತೀಶ್ ಶೆಟ್ಟಿ ಬಲ್ಯ, ಉಮೇಶ್ ಸಾಯಿರಾಮ್, ವೆಂಕಟ ವಳಲಂಬೆ, ಪ್ರಕಾಶ್ ಗುಂಡ್ಯ, ಪ್ರಸಾದ್ ನೆಟ್ಟಣ, ಸೈಯದ್ ಮೀರಾನ್ ಸಾಹೇಬ್, ಉಮೇಶ್ ಬಲ್ಯ, ನವೀನ್ ರೆಖ್ಯಾ, ಯತೀಶ್ ಗುಂಡ್ಯ, ಗಣೇಶ್ ಮತ್ತು ಇತರರು ಅಕ್ರಮಕೂಟ ಸೇರಿಕೊಂಡು ಅಕ್ರಮ ರಸ್ತೆ ತಡೆ ಮಾಡಿ ಪ್ರತಿಭಟನೆಯನ್ನು ಮಾಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ ಮಾಡದಂತೆ ಹಾಗೂ ಸಾರ್ವಜನಿಕ ರಸ್ತೆಗೆ ಅಡ್ಡಿಪಡಿಸದಂತೆ ತಿಳಿಸಿದರೂ ಇವರುಗಳು ಕೇಳದೆ ಪ್ರತಿಭಟನೆಯನ್ನು ಮುಂದುವರಿಸಿ ಕಸ್ತೂರಿರಂಗನ್ ವರದಿ ವಿರೋಧಿಸಿ ಸರ್ಕಾರ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳ ವಿರುದ್ದ ಘೋಷಣೆ ಕೂಗಿದ್ದಾರೆ. ಈ ರೀತಿ ಅಕ್ರಮ ಕೂಟ ಸೇರಿಕೊಂಡು ರಸ್ತೆ ತಡೆಮಾಡಿ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಡಿಸುತ್ತಿರುವುದು ಕಾನೂನು ಬಾಹಿರ ಎಂದು ತಿಳಿಸಿದರೂ ಗಣನೆಗೆ ತೆಗೆದುಕೊಳ್ಳದೆ ಮಧ್ಯಾಹ್ನ 3.30 ಗಂಟೆಯ ತನಕ ರಸ್ತೆ ತಡೆಮಾಡಿ ಸಾರ್ಜಜನಿಕರ ಮತ್ತು ವಾಹನ ಸಂಚಾರಕ್ಕೆ ಅಡಚಣೆ ಉಂಟು ಮಾಡಿರುತ್ತಾರೆ ಎಂದು ಪಿಎಸ್‌ಐ ಅವಿನಾಶ್ ಅವರು ನೀಡಿದ ದೂರಿನಂತೆ ಉಪ್ಪಿನಂಗಡಿ ಠಾಣೆಯಲ್ಲಿ ಅಪರಾಧ ಸಂಖ್ಯೆ: ಅ.ಕ್ರ: 121/2024 ಕಲಂ: 189(2)126(2),285, ಜೊತೆಗೆ 190 BNS 2023ಯಂತೆ ಪ್ರಕರಣ ದಾಖಲಾಗಿದೆ.