ವಿನೋಬನಗರ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ವಾರ್ಷಿಕ ಹಬ್ಬ ಉದ್ಘಾಟನೆ

0

ಭವಿಷ್ಯದ ಭಾರತ ಕಟ್ಟಲು ವಿದ್ಯಾರ್ಥಿಗಳೇ ಮುಂದಿನ ಪೀಳಿಗೆ: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ

ಶಿಶುಮಂದಿರದ ಶಿಕ್ಷಣ ಸಮಾಜಕ್ಕೆ ಆಧಾರಸ್ತಂಭ: ಶಾಸಕ ಕಿಶೋರ್ ಕುಮಾರ್

ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಭಾರತದ ಸಂಸ್ಕಾರ – ಸಂಸ್ಕೃತಿಯುತ ಮೌಲ್ಯಾಧಾರಿತ ಶಿಕ್ಷಣ ನೀಡಲಾಗುತ್ತಿದ್ದು, ಭವಿಷ್ಯದ ಭಾರತದ ಅಮೃತಕಾಲದ ಕಾಲಘಟ್ಟದಲ್ಲಿ ನಾವಿದ್ದೇವೆ. ಭಾರತದ ಮಾದರಿಯನ್ನು ಇಡೀ ವಿಶ್ವವೇ ಅನುಸರಿಸಲು ಎದುರುನೋಡುತ್ತಿದ್ದು, ವಿಶ್ವಕ್ಕೆ ಭಾರತವೇ ಮಾದರಿಯಾಗುತ್ತಿದೆ. ಬದಲಾಗುತ್ತಿರುವ ಭವಿಷ್ಯದ ಭಾರತ ಕಟ್ಟಲು ಇಂದಿನ ವಿದ್ಯಾರ್ಥಿಗಳೇ ಸಮಾಜಕ್ಕೆ ಮುಂದಿನ ಪೀಳಿಗೆಯಾಗಲಿದ್ದಾರೆ ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಹೇಳಿದರು.

ಅವರು ನ.16ರಂದು ಜಾಲ್ಸೂರು ಗ್ರಾಮದ ವಿನೋಬನಗರದ ವಿವೇಕಾನಂದ ವಿದ್ಯಾಸಂಸ್ಥೆ, ರಾಷ್ಟ್ರೋತ್ಥಾನ ಶಿಶುಮಂದಿರ ಟ್ರಸ್ಟ್ ಆಶ್ರಯದಲ್ಲಿ ವಾರ್ಷಿಕ ಹಬ್ಬದ ಪ್ರಯುಕ್ತ ನೂತನ ಕಂಪ್ಯೂಟರ್ ವಿಭಾಗವನ್ನು ಲೋಕಾರ್ಪಣೆಗೊಳಿಸಿ, ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.

ವಿಧಾನಪರಿಷತ್ ಶಾಸಕ ಕಿಶೋರ್ ಕುಮಾರ್ ಪುತ್ತೂರು ಅವರು ಧ್ವಜಾರೋಹಣ ನೆರವೇರಿಸಿ, ಮಾತನಾಡಿ ಶಿಶುಮಂದಿರದಲ್ಲಿ ಮಕ್ಕಳು ಪಡೆಯುವ ಶಿಕ್ಷಣ ಅವರಲ್ಲಿ ಸದಾ ಉಳಿಯುವಂತದ್ದಾಗಿದೆ. ಶಿಶುಮಂದಿರದ ಶಿಕ್ಷಣ ಸಮಾಜಕ್ಕೆ ಆಧಾರಸ್ತಂಭವಾಗಲಿದೆ ಎಂದು ಶುಭಹಾರೈಸಿದರು.

ಶಾಸಕಿ ಭಾಗೀರಥಿ ಮುರುಳ್ಯ ಅವರು ಅಧ್ಯಕ್ಷತೆ ವಹಿಸಿ, ಮಾತನಾಡಿ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪುಸ್ತಕದಲ್ಲಿ ಸಿಗುವ ಪಾಠದ ಜೊತೆಗೆ ಇಲ್ಲಿ ಸಿಗುವ ದೇಶದ ಸಂಸ್ಕಾರ, ಸಂಸ್ಕೃತಿ, ಹಿರಿಯರಿಗೆ ಗೌರವ ಕೊಡುವ ಸಂಪ್ರದಾಯಗಳಿಂದ ತಮ್ಮ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ. ಇಲ್ಲಿ ಪಡೆದ ಶಿಕ್ಷಣವನ್ನು ಕಾಲೇಜು ಜೀವನದಲ್ಲಿಯೂ ಅಳವಡಿಸಿಕೊಂಡರೆ ವಿದ್ಯಾಸಂಸ್ಥೆಯ ಹೆಸರು ಉಳಿಯಲು ಸಾಧ್ಯ ಎಂದರಲ್ಲದೇ, ಪ್ರೌಢಶಿಕ್ಷಣ ಸಿಗುವ ವಿವೇಕಾನಂದ ವಿದ್ಯಾಸಂಸ್ಥೆ ಮುಂದಿನ ದಿನಗಳಲ್ಲಿ ಪಿಯುಸಿ ಹಂತಕ್ಕೆ ಬೆಳೆಯಲಿ ಎಂದು ಶುಭಹಾರೈಸಿದರು.

ಮೂವರಿಗೆ ಸನ್ಮಾನ – ಗೌರವ
ಈ ಸಂದರ್ಭದಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ವಿಧಾನಪರಿಷತ್ ಶಾಸಕರುಗಳಾದ ಪ್ರತಾಪ್ ಸಿಂಹ ನಾಯಕ್ ಹಾಗೂ ಕಿಶೋರ್ ಕುಮಾರ್ ಪುತ್ತೂರು ಅವರನ್ನು ವಿದ್ಯಾಸಂಸ್ಥೆಯ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.

ಪುತ್ತೂರು ಕೆನರಾ ಬ್ಯಾಂಕಿನ ಡಿ‌.ಎಂ. ಆರ್.ಒ. ಅಜಿತ್ ಕುಮಾರ್ ಅವರು ನೂತನ ಧ್ವನಿವರ್ಧಕವನ್ನು ಲೋಕಾರ್ಪಣೆಗೊಳಿಸಿ , ಶುಭಹಾರೈಸಿದರು.

ವಿಧಾನಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ಕೃಷ್ಣಶೆಟ್ಟಿ ಕಡಬ , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಮಾದವ ಗೌಡ ಅವರು ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ವೇದಿಕೆಯಲ್ಲಿ ಜಾಲ್ಸೂರು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ತಿರುಮಲೇಶ್ವರಿ ಮರಸಂಕ, ಸುಳ್ಯ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷೆ ಶ್ರೀಮತಿ ಧನಲಕ್ಷ್ಮಿ ಕುದ್ಪಾಜೆ, ವಿದ್ಯಾಸಂಸ್ಥೆಯ ಸಂಚಾಲಕ ಡಾ. ಗೋಪಾಲಕೃಷ್ಣ ಭಟ್ ಕಾಟೂರು, ಕೋಶಾಧಿಕಾರಿ ಸುಧಾಕರ ಕಾಮತ್, ಆಡಳಿತಾಧಿಕಾರಿ ಎನ್. ಗೋಪಾಲರಾವ್, ಆಡಳಿತ ಮಂಡಳಿಯ ಉಪಾಧ್ಯಕ್ಷ ಹೇಮಂತ್ ಕಾಮತ್, ಸದಸ್ಯರಾದ ಶಿವಪ್ರಸಾದ್ ಉಗ್ರಾಣಿಮನೆ, ಹೇಮಂತ್ ಮಠ ಕನಕಮಜಲು, ಶ್ಯಾಮ್ ಪ್ರಸಾದ್ ಅಡ್ಡಂತಡ್ಕ, ಪುರುಷೋತ್ತಮ ಕಿರ್ಲಾಯ, ಶ್ರೀಮತಿ ಲತಾ ಮಧುಸೂದನ್, ಪ್ರೌಢಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಅಶೋಕ ಅಡ್ಕಾರು, ಪ್ರಾಥಮಿಕ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷೆ ಶ್ರೀಮತಿ ಸೌಮ್ಯ ಕದಿಕಡ್ಕ, ರಾಷ್ಟ್ರೋತ್ಥಾನ ಶಿಶುಮಂದಿರದ ಅಧ್ಯಕ್ಷ ಯಶ್ವಿತ್ ಕಾಳಂಮನೆ, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಗಿರೀಶ್ ಕುಮಾರ್, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಜಯಪ್ರಸಾದ್ ಕಾರಿಂಜ, ಜಲಜ ಆಚಾರ್ಯ, ಶಾಲಾ ವಿದ್ಯಾರ್ಥಿ ನಾಯಕಿ ಕು. ಯಜ್ಞಾ ಕಾಳಮನೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ರಾಷ್ಟ್ರೋತ್ಥಾನ ಶಿಶುಮಂದಿರದಿಂದ ಎಸ್.ಎಸ್.ಎಲ್.ಸಿ. ತನಕ ವಿದ್ಯಾಸಂಸ್ಥೆಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿ – ವಿದ್ಯಾರ್ಥಿನಿಯರನ್ನು ಪುರಸ್ಕರಿಸಲಾಯಿತು‌. ಜೊತೆಗೆ ಏಳನೇ ತನಗತಿ ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ದತ್ತಿನಿಧಿ ನೀಡಿ, ಪುರಸ್ಕರಿಸಲಾಯಿತು. ಕಳೆದ ಶೈಕ್ಷಣಿಕ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ, ದ್ವಿತೀಯ ಸ್ಥಾನ ಪಡೆದ ವಿವೇಕಾನಂದ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಸ್ವಸ್ತಿಕ್ ಅವರನ್ನು ಈ ವೇಳೆ ಪುರಸ್ಕರಿಸಲಾಯಿತು.


ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ನ. ಸೀತಾರಾಮ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಜಯಪ್ರಸಾದ್ ಕಾರಿಂಜ ವಂದಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಶಿಶುಮಂದಿರದ ಪುಟಾಣಿಗಳಿಂದ ಸಾಂಸ್ಕೃತಿಕ ಕಲರವ ಜರುಗುತ್ತಿದ್ದು, ಮಧ್ಯಾಹ್ನ ಭೋಜನದ ಬಳಿಕ ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಹಿರಿಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಮೆರಗು ಜರುಗಲಿದೆ.