ಪೊಲೀಸರಿಗಾಗದ್ದನ್ನು ಯುವಕರೇ ಮಾಡಿದರು

0

ಪೈಚಾರು ಯುವಕರ ತಂಡದ ಛಲ ಬಿಡದ ಹುಡುಕಾಟ

ಪೈಚಾರಿನಲ್ಲಿ ಕದ್ದ ಕಳ್ಳನನ್ನು ಪುತ್ತೂರಿನಲ್ಲಿ ಹಿಡಿದ ಯುವಕರು

ಕಳೆದ ಎರಡು ದಿನಗಳ ಹಿಂದೆ ಪೈಚಾರು ಫುಡ್ ಪಾಯಿಂಟ್ ಹೊಟೇಲಿಗೆ ರಾತ್ರಿ ವೇಳೆ ನುಗ್ಗಿ ಕಳ್ಳತನ ಮಾಡಿದ್ದ ಚಾಲಾಕಿ ಕಳ್ಳನನ್ನು ಪೈಚಾರಿನ ಯುವಕರೇ ಛಲ ಬಿಡದೆ ಹಗಲಿರುಳು ಹುಡುಕಾಟ ನಡೆಸಿ ಕೊನೆಗೂ ಕಳ್ಳನನ್ನು ಹಿಡಿದು ತಂದು ಸುಳ್ಯ ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.


ನ ೩೦ ರಂದು ನಡೆದಿದ್ದ ಹೊಟೇಲ್ ಕಳ್ಳತನದ ಬಳಿಕ ಸ್ಥಳೀಯ ಯುವಕರು ಈತನಕ ಪತ್ತೆಗಾಗಿ ಹಗಲು ರಾತ್ರಿ ಎನ್ನದೇ ಗುಂಡ್ಯ, ಸುಬ್ರಹ್ಮಣ್ಯ, ಬೆಳ್ಳಾರೆ, ಪುತ್ತೂರು, ಕಲ್ಲುಗುಂಡಿ ಮುಂತಾದ ಕಡೆಗಳಿಗೆ ಇಬ್ಬರು, ಮೂವರ ತಂಡವನ್ನು ಮಾಡಿ ಕಳ್ಳನ ಹುಡುಕಾಟಕ್ಕೆ ಮುಂದಾಗಿದ್ದರು.
ಕಳ್ಳನ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಭಿತ್ತರಿಸಿ ಈತನನನ್ನು ಕಂಡಲ್ಲಿ ಮಾಹಿತಿ ನೀಡುವಂತೆ ಪ್ರಸಾರ ಪಡಿಸಿದ್ದರು.

ಈ ಎಲ್ಲಾ ಶ್ರಮಗಳ ಫಲದಿಂದ ಡಿ. ೨ ರಂದು ಮಧ್ಯಾಹ್ನ ಪೈಚಾರಿನ ಆರ್ ಬಿ ಬಶೀರ್, ನಝಿರ್ ಶಾಂತಿನಗರ, ಅಶ್ರಫ್ ಅಚ್ಚಪ್ಪು,ರಿಫಾಯಿ, ಕರೀಂ ಫುಡ್ ಪಾಯಿಂಟ್ ಇವರುಗಳು ಪುತ್ತೂರು ಭಾಗದಲ್ಲಿ ಹುಡುಕಾಟ ನಡೆಸುತಿದ್ದ ವೇಳೆ ಸೋಶಿಯಲ್ ಮೀಡಿಯಾದಲ್ಲಿ ನೋಡಿದ್ದ ಓರ್ವರಿಗೆ ಈ ಕಳ್ಳನನ್ನು ಪುತ್ತೂರು ರೈಲ್ವೆ ನಿಲ್ದಾಣದ ಬಳಿ ಕಂಡಿದ್ದು ಕೂಡಲೇ ಅಲ್ಲಿ ಹುಡುಕಾಟ ನಡೆಸುತ್ತಿದ್ದ ತಂಡಕ್ಕೆ ಮಾಹಿತಿ ಬಂದು ತಕ್ಷಣ ಅಲ್ಲಿಗೆ ತೆರಳಿ ಕಳ್ಳನನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಬಳಿಕ ಆತನನ್ನು ಸುಳ್ಯಕ್ಕೆ ತಂದು ಸುಳ್ಯ ಪೊಲೀಸರಿಗೆ ಒಪ್ಪಿಸಿದ್ದಾರೆ. ಆತನ ಹೆಸರು ಮತ್ತು ಊರಿನ ಬಗ್ಗೆ ಸ್ಪಷ್ಟವಾಗಿ ಆತ ಹೇಳುತ್ತಿಲ್ಲ ಎಂದು ಕೂಡ ತಿಳಿದು ಬಂದಿದೆ.
ಒಟ್ಟಿನಲ್ಲಿ ಪೈಚಾರ್ ನ ಈ ಯುವಕರ ತಂಡ ಪ್ರತೀ ಬಾರಿಯೂ ತಮ್ಮವರಿಗೆ ಏನಾದರೂ ಸಮಸ್ಯೆ ಬಂದರೆ ಒಟ್ಟಾಗಿ ನಿಂತು ಅದನ್ನು ಎದುರಿಸುವ ಮನಸ್ಥಿತಿಯನ್ನು ಅನುಸರಿಸಿಕೊಂಡು ಬಂದವರಾಗಿದ್ದು, ಈ ಬಾರಿ ತಮ್ಮ ಸ್ನೇಹಿತನ ಹೊಟೇಲ್ ಗೆ ನುಗ್ಗಿ ಲೂಟಿ ಮಾಡಿದ್ದ ಕಳ್ಳನನ್ನು ತಾವೇ ಒಗ್ಗಟ್ಟಾಗಿ ನಿಂತು ಆತನನ್ನು ಹಿಡಿದು ತರುವಲ್ಲಿ ಯಶಸ್ವಿಯಾಗಿದ್ದಾರೆ.