ನಿಂತಿಕಲ್ಲು ವರ್ಷನಗರ ಕೆ.ಎಸ್ ಗೌಡ ಪದವಿ ಪೂರ್ವ ಕಾಲೇಜಿನಲ್ಲಿ ಭಾರತೀಯ ಸಂಸ್ಕೃತಿ ಹಾಗೂ ಸಂಪ್ರದಾಯವನ್ನು ಬಿಂಬಿಸುವ ನಮ್ಮ ಸಂಪ್ರದಾಯ, ನಮ್ಮ ದಿನ ಕಾರ್ಯಕ್ರಮ ನ. 28ರಂದು ನಡೆಯಿತು. ಬೆಳಿಗ್ಗೆ ಸಂಸ್ಥೆಯ ಮಹಿಳಾ ಉದ್ಯೋಗಿಗಳು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಭಾರತೀಯ ಸಂಸ್ಕೃತಿ ಆಧಾರಿತ ಉಡುಗೆಗಳನ್ನು ಧರಿಸಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸಾಂಪ್ರದಾಯಿಕ ನಡಿಗೆ ಯನ್ನು ಪ್ರದರ್ಶಿಸಿದರು. ನಂತರ ಭಾರತೀಯ ಸಂಸ್ಕೃತಿ ಆಚರಣೆ ವಿಷಯದಲ್ಲಿ ಸ್ಪರ್ಧೆ ನಡೆಯಿತು.
ವಿದ್ಯಾರ್ಥಿಗಳು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗಿನ ವಿವಿಧ ಸಂಸ್ಕೃತಿ, ಸಂಪ್ರದಾಯ, ಹಬ್ಬಗಳು ಸರ್ವಧರ್ಮಗಳ ವಿವಿಧ ಆಚರಣೆಗಳ ಬಗ್ಗೆ ಕಾರ್ಯಕ್ರಮ ನೀಡಿದರು. ಮಧ್ಯಾಹ್ನ ಸಾಂಪ್ರದಾಯಿಕ ಸಹ ಭೋಜನವನ್ನು ಬಾಳೆ
ಎಲೆ ಊಟ, ನೆಲದಲ್ಲಿ ಕುಳಿತು ವಿದ್ಯಾರ್ಥಿಗಳು ಸವಿದರು.
ಅಪರಾಹ್ನ ನಡೆದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ವಿಜೇತ ಶಿಕ್ಷಕ ಸಂಪನ್ಮೂಲ ವ್ಯಕ್ತಿ ಹಾಗೂ ಚಿಂತಕ, ಮಧುಪ್ರಪಂಚ ಪತ್ರಿಕೆಯ ಸಂಪಾದಕ ರಾದ ನಾರಾಯಣ ರೈ ಕುಕ್ಕುವಳ್ಳಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ನಮ್ಮ ಸಂಪ್ರದಾಯದ ಬಗ್ಗೆ ಮಾಹಿತಿ ನೀಡಿದರು. ಅತಿಥಿಗಳಾಗಿ ಕುಮಾರಸ್ವಾಮಿ ಕೆ.ಎಸ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಸುದರ್ಶನ್ ಪಟ್ಟಾಜೆ, ಉಪಾಧ್ಯಕ್ಷೆ ಶ್ರೀಮತಿ ಯಮುನಾ ಕಾರ್ಜ ಉಪಸ್ಥಿತರಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಆಡಳಿತ ಮಂಡಳಿ ಅಧ್ಯಕ್ಷರಾದ ಅಶೋಕ್ ಕುಮಾರ್ ಕೆ.ಎಸ್ ವಹಿಸಿ ವಹಿಸಿದ್ದರು. ಪ್ರಾಚಾರ್ಯ ಸದಾನಂದ ರೈ ಕೂವೆಂಜ ಪ್ರಾಸ್ತಾವಿಕವಾಗಿ ಮಾತನಾಡಿದರು. ರಸಾಯನ ಶಾಸ್ತ್ರ ಉಪನ್ಯಾಸಕಿ ಜ್ಯೋತ್ಸ್ನಾ ನಿರೂಪಿಸಿದ ಕಾರ್ಯಕ್ರಮದಲ್ಲಿ ಉಪನ್ಯಾಸಕಿ ಸೌಮ್ಯ ಸ್ವಾಗತಿಸಿ, ಉಪನ್ಯಾಸಕಿ ಸಂಧ್ಯಾ ವಂದಿಸಿದರು. ಉಪನ್ಯಾಸಕ ಜೀವನ್ ವಿಜೇತರ ವಿವರ ನೀಡಿದರು. ಉಪನ್ಯಾಸಕ ಉಜ್ವಲ್ ಮತ್ತು ವೇದಾವತಿ ಅತಿಥಿಗಳನ್ನು ಗೌರವಿಸಿದರು.
ಕೆ.ಎಸ್ ಗೌಡ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಶಿಕ್ಷಕಿಯರಾದ ವೇದಾವತಿ, ವಿಶಾಲಾಕ್ಷಿ ಹಾಗೂ ಶಿಕ್ಷಕ ಅಜಿತ್ ಐವರ್ನಾಡು ತೀರ್ಪುಗಾರರಾಗಿ ಸಹಕರಿಸಿದರು. ಪ್ರಮೀಳಾ ಮತ್ತು ವಿಮಲಾ ಸಹಕರಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಾರತೀಯ ಶೈಲಿಯ ಪಂಚೆ ಮತ್ತು ಅಂಗಿ ವಿದ್ಯಾರ್ಥಿನಿಯರು ಸೀರೆ ಉಟ್ಟು ಸಂಭ್ರಮಿಸಿದರು.