ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ ಬೆಂಗಳೂರು ವತಿಯಿಂದ ಸ್ನೇಹಮಿಲನ ಷಷ್ಟ್ಯಾಬ್ಧಿ ಸಂಭ್ರಮ, ಪ್ರತಿಭಾ ಪುರಸ್ಕಾರ, ಸನ್ಮಾನ ಕಾರ್ಯಕ್ರಮ

0

ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ (ರಿ) ಬೆಂಗಳೂರು ಇವರ ವತಿಯಿಂದ ಡಿ.೦1 ರಂದು ನಮ್ಮನೆ ಸಾಂಸ್ಕೃತಿಕ ಕಲಾ ಕೇಂದ್ರ ಲಗ್ಗೆರೆ ಬೆಂಗಳೂರಿನಲ್ಲಿ ಸ್ನೇಹಮಿಲನ ಷಷ್ಟ್ಯಾಬ್ಧಿ ಸಂಭ್ರಮ, ಪ್ರತಿಭಾ ಪುರಸ್ಕಾರ, ಸಮಾಜದ ಮಾಜಿ ಅಧ್ಯಕ್ಷರು, ಮಹಿಳಾ ಹಾಗೂ ಯುವ ಘಟಕದ ಮಾಜಿ ಅಧ್ಯಕ್ಷರು ಗಳಿಗೆ, ಕಾರ್ಯದರ್ಶಿಗಳಿಗೆ ಸನ್ಮಾನ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು.


ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವ ಡಿ ವಿ ಸದಾನಂದ ಗೌಡರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ನಮ್ಮವರು ಸಂಘಟಿತರಾಗಬೇಕು, ಅರೆಭಾಷೆ ಮಾತಾಡುತ್ತಾ ಭಾಷೆಯನ್ನು ಬೆಳೆಸಬೇಕು. ಭಾಷೆ ಬೆಳೆದರೆ ಸಂಸ್ಕೃತಿ ಬೆಳೆದಂತೆ, ಭಾಷೆ ನಶಿಸಿದರೆ
ಸಂಸ್ಕೃತಿ ನಶಿಸಿದಂತೆ, ಭಾಷಾ ಸಂಸ್ಕೃತಿ, ಆಚಾರ ವಿಚಾರಗಳಲ್ಲಿ ಎಲ್ಲರೂ ಸಮಾಜದೊಂದಿಗೆ ಕೈಜೋಡಿಸಿ ಉತ್ತಮ ಕಾರ್ಯಗಳನ್ನು ನಡೆಸಲು ಕಾರ್ಯ ಪ್ರವರ್ತ ರಾಗಬೇಕೆಂದು ಕರೆ ನೀಡಿದರು.


ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ರಾಜ್ಯ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾl ಪುರುಷೋತ್ತಮ ಬಿಳಿಮಲೆ ಯವರು ಸಮಾಜದ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸುತ್ತಾ ನಮ್ಮ ಮಾತೃ ಭಾಷೆಯನ್ನು ಸಮಾಜದಲ್ಲಿ ಬೆಳೆಸಬೇಕು, ಅರೆ ಭಾಷೆ ಅರ್ಧ ಭಾಷೆಯಲ್ಲ ನಮಗೆ ಅದು ಪೂರ್ಣ ಭಾಷೆ.ಅರೆ ಭಾಷೆ ನಮಗೆ ಐಡೆಂಟಿಟಿ.ಮುಂದಿನ ಪೀಳಿಗೆಗೆ ಅರೆಭಾಷೆಯನ್ನು ಮುಂದುವರಿಸುವಂತೆ ಮಾಡುವ ಜವಾಬ್ದಾರಿ ಸಮಾಜ ಮತ್ತು ನಮ್ಮೆಲ್ಲರ ಮೇಲಿದೆ. ದಕ್ಷಿಣ ಕನ್ನಡ ಮತ್ತು ಕೊಡಗಿನಲ್ಲಿ ಅರೆ ಭಾಷೆ ಮಾತನಾಡುವವರ ಅಂಕಿ ಅಂಶಗಳು ಸರಕಾರ ಸರ್ವೆ ಮಾಡಬೇಕು ಮತ್ತು ಅರೆ ಭಾಷೆಯನ್ನು ಪಠ್ಯಪುಸ್ತಕದಲ್ಲಿ ಅಳವಡಿಸಲು ನಾವು ಸರಕಾರದ ಮೇಲೆ ಒತ್ತಡವನ್ನು ಹಾಕಬೇಕು. ಆಗ ಅರೆ ಭಾಷೆ ಮಾತನಾಡುವವರ ಸಂಖ್ಯೆ ಜಾಸ್ತಿ ಆಗುತ್ತದೆ. ಹಾಗೂ ಭಾಷೆ ಉಳಿಯುತ್ತದೆ. ಭಾಷೆ ಉಳಿದರೆ ಸಂಸ್ಕೃತಿ ಉಳಿದಂತೆ ಎಂಬ ಸಂದೇಶ ನೀಡಿದರು.


ಸಮಾರಂಭದ ಸಭಾಧ್ಯಕ್ಷರಾದ ಪಾಣತ್ತಲೆ ಪಳಂಗಪ್ಪ ನವರು ಸಮಾಜ ನಿರ್ಮಾಣದಲ್ಲಿ ನಮ್ಮ ಸಮಾಜವು ಯುವ ಶಕ್ತಿಯ ಮೂಲಕ ಎಲ್ಲಾ ಕಾರ್ಯಕ್ರಮಗಳನ್ನು ಸುಸೂತ್ರವಾಗಿ ನಡೆಸಿಕೊಂಡು ಬರುತ್ತಿದೆ ಎಂದರು.
ಉಪಾಧ್ಯಕ್ಷರಾದ ನಾಗೇಶ್ ಕುಮಾರ್ ಕಲ್ಲುಮುಟ್ಲು ರವರು ವಂದನಾರ್ಪಣೆ ಗೈದರು.


ವೇದಿಕೆಯಲ್ಲಿ ಗೌ.ಕಾರ್ಯ ದರ್ಶಿಗಳಾದ ಕುಂಭಗೌಡನ ಸೋಮಣ್ಣ, ಜಂಟಿ ಕಾರ್ಯದರ್ಶಿ ಗಳಾದ ನಾಗೇಶ್ ಉಳುವಾರ್ ಬಂಟೋಡಿ ಮತ್ತು ಶ್ರೀಮತಿ ನೇಹಾ ರೋಶನ್ ಪೊರೆಯನ, ಖಜಾಂಚಿಗಳಾದ ರಾಧಾಕೃಷ್ಣ ಗುತ್ತಿಗಾರುಮೂಲೆ, ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಶಶಿಪ್ರಭಾ ಮಡ್ತಿಲ ಹಾಗೂ ಯುವ ಘಟಕದ ಅಧ್ಯಕ್ಷ ರಾದ ದಯಾನಂದ ಕುಂಬ್ಲಾಡಿ ಉಪಸ್ಥಿತರಿದ್ದರು. ಶ್ರೀಮತಿ ಭಾಗ್ಯಶ್ರೀ ಮತ್ತು ತಂಡದವರ ಪ್ರಾರ್ಥನೆ ಯನ್ನು ನೆರವೇರಿಸಿದರು. ಶ್ರೀಮತಿ ಲೀಲಾ ಸೋಮಣ್ಣ ಕುಂಭಗೌಡನ ನಿರೂಪಿಸಿದರು. ಸಮಾಜದ ಬಾಂಧವರಿಗೆ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಶೈಲಿಯಲ್ಲಿ ರುಚಿಕರವಾದ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನದ ನಂತರ ನಡೆದ ಮನೋರಂಜನಾ ಕಾರ್ಯಕ್ರಮದಲ್ಲಿ ಮಕ್ಕಳು, ಯುವ ಘಟಕ ಹಾಗೂ ಮಹಿಳಾ ಘಟಕದ ಸದಸ್ಯರು ಭಾಗವಹಿಸಿದ್ದರು.