ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಅವಭೃಥೋತ್ಸವ

0

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಪ್ರಯುಕ್ತ ಡಿ.೮ ಕುಮಾರಾಧಾರಾ ನದಿಯಲ್ಲಿ ದೇವರ ನೌಕಾವಿಹಾರ ಮತ್ತು ಅವಭೃಥೋತ್ಸವ ಜರಗಿತು. ಪ್ರಧಾನ ಅರ್ಚಕ ವೇ. ಮೂ. ಸೀತಾರಾಮ ಎಡಪಡಿತ್ತಾಯರು ವಿಧಿವಿಧಾನ ನೆರವೇರಿಸಿದರು.


ಬೆಳಗ್ಗೆ ದ್ವಾದಶಿ ಮಂಟಪದಲ್ಲಿ ಓಕುಳಿ ಪೂಜೆ ಮತ್ತು ಓಕುಳಿ ಚೆಲ್ಲಾಟ ನೆರವೇರಿತು. ಬಳಿಕ ದೇವರಿಗೆ ಓಕುಳಿ ಸಮರ್ಪಣೆಯಾಗಿ ಭಕ್ತರಿಗೆ ಓಕುಳಿ ಪ್ರೋಕ್ಷಣೆ ಮತ್ತು ಓಕುಳಿ ಆಟ ನಡೆಯಿತು. ಅವಭೃಥೋತ್ಸವ ಸವಾರಿ ದೇವಳದಿಂದ ಹೊರಟು, ಬಿಲದ್ವಾರದ ಕಟ್ಟೆಯಲ್ಲಿ ಕಟ್ಟೆಪೂಜೆ ನೆರವೇರಿತು.ಕುಮಾರಧಾರಾ ನದಿಯ ಮತ್ಯತೀರ್ಥದಲ್ಲಿ ದೇವರ ನೌಕಾವಿಹಾರ ನಡೆದು ಜಳಕದಗುಂಡಿಯಲ್ಲಿ ಅವಭೃಥೋತ್ಸವ ನಡೆಯಿತು. ಜಳಕದ ಬಳಿಕ ಕುಮಾರಧಾರಾ ನದಿ ತೀರದ ಅವಭೃಥಕಟ್ಟೆಯಲ್ಲಿ ಕಟ್ಟೆಪೂಜೆ ನಡೆಯಿತು.

ಅವಭೃಥೋತ್ಸವದ ಸಂದರ್ಭದಲ್ಲಿ ಕ್ಷೇತ್ರದ ಆನೆ ಯಶಸ್ವಿಯು ಎಲ್ಲರಂತೆ ತಾನೂ ಕೂಡಾ ಸ್ನಾನ ಮಾಡಿ ನೀರಾಟವಾಡಿತು. ದೇವರ ಅವಭೃಥದ ಸಮಯದಲ್ಲಿ ದೇವರೊಂದಿಗೆ ಸಹಸ್ರಾರು ಭಕ್ತರೂ ಪುಣ್ಯ ಸ್ನಾನ ನೆರವೇರಿಸಿದರು.
ಕಾರ್ಯಕ್ರಮದುದ್ದಕ್ಕೂ ಕಾರ್ಯನಿರ್ವಾಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ಯೇಸುರಾಜ್, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರು, ದೇವಸ್ಥಾನ ಅಧಿಕಾರಿಗಳು, ಸಾವಿರಕ್ಕೂ ಮಿಕ್ಕಿ ಭಕ್ತರು ಉಪಸ್ಥಿತರಿದ್ದರು.