ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃ ಸಂಘದಿಂದ ದಿ.ಎಸ್.ಎಂ.ಕೃಷ್ಣರಿಗೆ ಶ್ರದ್ಧಾಂಜಲಿ

0

ದ.10 ರಂದು ನಿಧನರಾದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರಿಗೆ ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃಸಂಘದ ವತಿಯಿಂದ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮವು ಮಂಗಳೂರಿನ ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃ ಸಂಘದ ಕೇಂದ್ರ ಕಚೇರಿ ಒಕ್ಕಲಿಗರ ಭವನ ಮಂಗಳೂರು ಇಲ್ಲಿ ದ.12 ರಂದು ಸಂಘದ ಅಧ್ಯಕ್ಷರಾದ ಲೋಕಯ್ಯ ಗೌಡರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಂಘದ ಕಾರ್ಯದರ್ಶಿ ಕೆ. ರಾಮಣ್ಣಗೌಡರು ಪ್ರಾಸ್ತಾವಿಕ ನುಡಿಯೊಂದಿಗೆ ಸ್ವಾಗತಿಸಿದರು. ಸಂಘದ ಅಧ್ಯಕ್ಷರಾದ ಲೋಕಯ್ಯ ಗೌಡರು ದಿವಂಗತ ಎಸ್ಎಂ ಕೃಷ್ಣರವರ ಆಡಳಿತ ಅವಧಿಯಲ್ಲಿ ನಡೆದ ಬೆಂಗಳೂರು ಅಭಿವೃದ್ದಿ ಜೊತೆಗೆ ಐಟಿಬಿಟಿ ಕಂಪನಿಗಳ ಅನುಷ್ಠಾನದ ಬಗ್ಗೆ ಮತ್ತು ಅವರ ಬಹುಮುಖ ವ್ಯಕ್ತಿತ್ವದ ಗುಣಗಾನ ಮಾಡಿ ಅವರ ಅಗಲ್ವಿಕೆಗೆ ಸಂತಾಪ ವ್ಯಕ್ತಪಡಿಸಿದರು. ಮಾತೃ ಸಂಘದ ಪ್ರಧಾನ ಕಾರ್ಯದರ್ಶಿ ದಿನೇಶ್ ಮಡಪ್ಪಾಡಿಯವರು ಮಾತನಾಡಿ ” ಎಸ್.ಎಂ.ಕೃಷ್ಣ ರವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಬಡ ವಿದ್ಯಾರ್ಥಿಗಳಿಗಾಗಿ ಅವರು ಜಾರಿಗೆ ತಂದ ಮಧ್ಯಾಹ್ನದ ಬಿಸಿ ಊಟದ ಕಾರ್ಯಕ್ರಮದಿಂದಾಗಿ ಅನೇಕ ಬಡ ಮಕ್ಕಳು ವಿದ್ಯಾಭ್ಯಾಸ ಪಡೆದು ತಮ್ಮ ಕಾಲ ಮೇಲೆ ತಾವು ನಿಲ್ಲುವಂತಾಯಿತು. ಬೆಂಗಳೂರು ನಗರ ಅಭಿವೃದ್ಧಿ ಮತ್ತು ನಗರದಲ್ಲಿ ಐಟಿಬಿಟಿ ಸಂಸ್ಥೆಗಳನ್ನು ಸ್ಥಾಪನೆ ಮಾಡುವಲ್ಲಿ ಕೂಡ ಇವರು ವಹಿಸಿದ ಪಾತ್ರ ಬಹಳ ದೊಡ್ಡದು. ಉಪಮುಖ್ಯಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ, ವಿಧಾನಸಭಾಧ್ಯಕ್ಷರಾಗಿ, ಕೇಂದ್ರ ಸಚಿವರಾಗಿ, ಮಹಾರಾಷ್ಟ್ರದ ಗವರ್ನರ್ ಆಗಿ ಕೆಲಸ ನಿಭಾಯಿಸಿದ ಇವರ ನಡೆ ಮತ್ತು ಜೀವನ ಶೈಲಿ ದೇಶದ ರಾಜ್ಯದ ಪ್ರತಿಯೊಬ್ಬರಿಗೂ ಅನುಕರಣೀಯ” ಎಂದರು.
ಸಂಘದ ಉಪಾಧ್ಯಕ್ಷರಾದ ಲಿಂಗಪ್ಪಗೌಡ ವಿಟ್ಲ ಇವರು ಮಾತನಾಡಿ ” 2003ರಲ್ಲಿ ಮಂಗಳೂರಿನಲ್ಲಿ ಜಿಲ್ಲೆಯ ಸಮಸ್ತ ಒಕ್ಕಲಿಗ ಗೌಡ ಬಾಂಧವರು ಸೇರಿ ಆದಿಚುಂಚನಗಿರಿ ಪೀಠಾಧ್ಯಕ್ಷ ಬಾಲ ಗಂಗಾಧರನಾಥ ಸ್ವಾಮೀಜಿ ಅವರ ಹುಟ್ಟು ಹಬ್ಬವನ್ನು ಆಚರಿಸಿದ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಆಹ್ವಾನಿತರಾಗಿ ಬಂದಿದ್ದ ಎಸ್ ಎಂ ಕೃಷ್ಣ ರವರು ಸೇರಿದ್ದ ಸುಮಾರು ಮೂವತ್ತು ಸಾವಿರಕ್ಕೂ ಹೆಚ್ಚಿನ ಸಮಾಜ ಬಾಂಧವರನ್ನು ಕಂಡು ಆಶ್ಚರ್ಯ ಚಕಿತರಾಗಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾ ದಕ್ಷಿಣ ಕನ್ನಡದಲ್ಲಿ ಇಷ್ಟೊಂದು ಒಕ್ಕಲಿಗ ಗೌಡ ಸಮಾಜದ ಬಂಧುಗಳಿದ್ದಾರೆ ಎಂದು ನನ್ನ ಗಮನಕ್ಕೆ ಇದೇ ಮೊದಲ ಬಾರಿಗೆ ಬಂದಿರುವುದು ಎಂದು ಹೇಳಿದ್ದರು. ಒಕ್ಕಲಿಗ ಸಮಾಜದ ಮೇಲಿನ ತನ್ನ ಪ್ರೀತಿಯನ್ನು ಅವರು ಒಳಮನಸ್ಸಿನಿಂದಲೇ ತೋರಿಸುತ್ತಿದ್ದರು ” ಎಂದರು.

ಮಾತೃ ಸಂಘದ ಉಪಾಧ್ಯಕ್ಷರಾದ ರಾಮದಾಸ್ ಗೌಡ ಪುತ್ತೂರುರವರು ಮಾತನಾಡಿ ” ಎಸ್ಎಂ ಕೃಷ್ಣರವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ವೀರಪ್ಪನ್, ಡಾ. ರಾಜಕುಮಾರ್ ರನ್ನು ಅಪಹರಿಸಿ ಬಂಧನದಲ್ಲಿಟ್ಟ ಸಮಯದಲ್ಲಿ ಅವರನ್ನು ಬಿಡಿಸಿಕೊಳ್ಳುವಲ್ಲಿ ಪೊಲೀಸ್ ಅಧಿಕಾರಿಗಳಿಗೆ ಧೈರ್ಯ ತುಂಬಿ, ಯಾವುದೇ ಅನಾಹುತಕ್ಕೆ ಎಡೆಯಾಗದಂತೆ ಸಮರ್ಥವಾಗಿ ನಿಭಾಯಿಸಿದ್ದರು. ಆ ಸಂದರ್ಭದಲ್ಲಿ ನಾನು ಕೂಡ ಪೊಲೀಸ್ ಅಧಿಕಾರಿಯಾಗಿ ಅಲ್ಲಿ ಕರ್ತವ್ಯ ನಿರ್ವಹಿಸಿದ್ದೆ ” ಎಂದು ನೆನಪಿಸಿಕೊಂಡರು.
ಬಂಟ್ವಾಳತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಸಿ. ಕುಶಾಲಪ್ಪ ಗೌಡ , ನಿಕಟ ಪೂರ್ವ ಅಧ್ಯಕ್ಷರಾದ ಮೋಹನ ಗೌಡ ಕೆ. ಕಾಯರ್ಮಾರು, ಗೌರವ ಸಲಹೆ ಗಾರರಾಗಿರುವ ಶ್ರೀಮತಿ ಪೂರ್ಣಿಮ ಕೆ.ಎಂ., ಕುಸುಮಾಧರ ಬೇರ್ಯ, ನಿರ್ದೇಶಕರುಗಳಾದ ಶ್ರೀಮತಿ ಕಲಾವತಿ, ಶ್ರೀಮತಿ ಇಂದ್ರಾವತಿ ಮತ್ತು ಸದಸ್ಯರುಗಳಾದ ಶ್ರೀಮತಿ ದಯಾಮಣಿ, ನಿತ್ಯಾನಂದ ಉಪ್ಪಳಿಗೆ ಉಪಸ್ಥಿತರಿದ್ದರು.