ಮೂರೂವರೆ ದಶಕದಿಂದ ಪಂಜದಲ್ಲಿ ರಿಕ್ಷಾ ಬಾಡಿಗೆ ನಡೆಸುತ್ತಿದ್ದ ದೇವಪ್ಪಣ್ಣ ಇನ್ನು ನೆನಪು ಮಾತ್ರ

0

ಜನಾನುರಾಗಿಯಾಗಿದ್ದ ರಿಕ್ಷಾ ಚಾಲಕನಿಗೆ ಕಣ್ಣೀರ ವಿದಾಯ

ಪಾರ್ಥಿವ ಶರೀರದೊಂದಿಗೆ ಪಂಜದಿಂದ ಏನೆಕಲ್ಲಿಗೆ ರಿಕ್ಷಾ ಮೆರವಣಿಗೆ

ಇಂದು ರಿಕ್ಷಾ ಓಡಾಟ ಸ್ಥಗಿತಗೊಳಿಸಿ ದೇವಪ್ಪ ಗೌಡ ಏನೆಕಲ್ ಅವರಿಗೆ ಗೌರವ

ಪಂಜದಲ್ಲಿ ಸುಮಾರು 34 ವರ್ಷಗಳಿಂದ ಆಟೋ ಚಾಲಕರಾಗಿದ್ದ, ಪಂಜ ಆಟೋರಿಕ್ಷಾ ಚಾಲಕರ ಸಂಘದ ಸ್ಥಾಪಕಾಧ್ಯಕ್ಷ, ಅಜಾತ ಶತ್ರು ದೇವಪ್ಪ ಗೌಡ ಏನೆಕಲ್ ಹೃದಯಾಘಾತದಿಂದ ನಿಧನರಾಗಿದ್ದು, ಊರಿನಲ್ಲಿ ದಿಗ್ಭ್ರಮೆ ಮೂಡಿಸಿದೆ.

ಏನೆಕಲ್ಲು ಗ್ರಾಮದ ಹೊಸಮನೆ ದಿವಂಗತ ಮೊಂಟಣ್ಣ ಗೌಡ ಮತ್ತು ಶ್ರೀಮತಿ ದುಗ್ಗಮ್ಮ ದಂಪತಿಗಳ ಪುತ್ರ ದೇವಪ್ಪಗೌಡ ರವರು ಹೃದಯಾಘಾತದಿಂದ ಡಿ.20 ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಇಂದು ಬೆಳಗ್ಗೆ ಅವರ ಪಾರ್ಥಿವ ಶರೀರವನ್ನು ಅವರ ಮನೆಗೆ ತರಲಾಯಿತು. ಪಂಜದಿಂದ ಅಂಬ್ಯುಲೆನ್ಸ್ ನೊಂದಿಗೆ ಪಂಜದ ರಿಕ್ಷಾಗಳ ಮೆರವಣಿಗೆ ನಡೆಯಿತು. ಏನೆಕಲ್ಲು ಪುಂಡಿಗದ್ದೆಯ ಅವರ ಸ್ವಗೃಹಕ್ಕೆ ಮೃತದೇಹ ತರಲಾಯಿತು. ಬಳಿಕ ಅಲ್ಲಿಂದ ಮೃತ ದೇಹವನ್ನು ಮೆರವಣಿಗೆಯಲ್ಲಿ ಅವರ ಆದಿ ಮನೆ ಹೊಸಮನೆಗೆ ಸಾಗಿಸಿ ಅಲ್ಲಿ ಅಂತ್ಯ ಸಂಸ್ಕಾರದ ವಿಧಿ ವಿಧಾನಗಳನ್ನು ನಡೆಯಿತು. ನೂರಾರು ಜನ ಅಂತಿಮ ದರ್ಶನ ಪಡೆದರು.

ಕುಟುಂಬಸ್ಥರ, ಚಾಲಕರು , ಮಿತ್ರರು ಕಣ್ಣಿರ ವಿದಾಯ ಹೇಳಿದರು.

ಐದು ದಿನಗಳ ಹಿಂದಷ್ಟೇ ಅವರು ರಿಕ್ಷಾ ನಿಲ್ದಾಣದಲ್ಲಿ ಇದ್ದಾಗ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಈ ವೇಳೆ ವೈದ್ಯರ ಸಲಹೆ ಮೇರೆಗೆ ಹೃದಯದ ಪರೀಕ್ಷೆಗೆ ಒಳಪಡಿಸಿದಾಗ, ಬ್ಲಾಕ್ ಇರುವುದಾಗಿ ತಿಳಿದು
ಬಂತು. ಇನ್ನು ಕೆಲವೇ ದಿನಗಳಲ್ಲಿ ಅವರಿಗೆ ಶಸ್ತ್ರ ಚಿಕಿತ್ಸೆ ನಡೆಯಲಿತ್ತು. ಎರಡು ದಿನಗಳ ಹಿಂದಷ್ಟೇ ರಿಕ್ಷಾ ಚಾಲಕರ ಸಂಘದ ಹಲವು ಸದಸ್ಯರು ಭೇಟಿ ಮಾಡಿ ಬಂದಿದ್ದರು. ಆಗ ಅವರು ಲವಲವಿಕೆಯಿಂದ ಮಾತನಾಡಿ ಹುಷಾರಾಗಿ ಬರುತ್ತೇನೆ ಎಂದು ತಿಳಿಸಿದ್ದರು.

ಪತ್ನಿ ಶ್ರೀಮತಿ ಭವಾನಿ, ಸಹೋದರರು, ಸಹೋದರಿ, ಕುಟುಂಬಸ್ಥರು, ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಮೃತರ ಗೌರವಾರ್ಥ ಇಂದು ಪಂಜದಲ್ಲಿ ರಿಕ್ಷಾಗಳು ಬಾಡಿಗೆ ನಡೆಸುವುದಿಲ್ಲ ಎಂದು ಸಂಘದವರು ತಿಳಿಸಿದ್ದಾರೆ.

ಅಟೋ ಚಾಲನೆ ಜತೆಗೆ ಪಂಜದ ಹಲವು ಸಾಮಾಜಿಕ, ಧಾರ್ಮಿಕ ಸಂಘಟನೆಗಳಲ್ಲೂ ಸಕ್ರಿಯರಾಗಿದ್ದ ಅವರು ಸಾರ್ವಜನಿಕ ಗಣೇಶೋತ್ಸವ, ಶಾರದೋತ್ಸವಗಳಲ್ಲೂ ಸಕ್ರಿಯರಾಗಿದ್ದರು.