ಸ್ನೇಹ ಶಿಕ್ಷಣ ಸಂಸ್ಥೆಯ ಶಾಲಾ ವಾರ್ಷಿಕೋತ್ಸವವು ಡಿ.22ರಂದು ನಡೆಯಿತು. ಈ ಸಂದರ್ಭದಲ್ಲಿ
ಅತ್ಯುತ್ತಮ ಸಾಧನೆಗೈದ 11 ಮಂದಿ ಹಿರಿಯ ವಿದ್ಯಾರ್ಥಿಗಳನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ಸನ್ಮಾನಿತರು ಮಾತನಾಡಿ ಬುನಾದಿ ಶಿಕ್ಷಣದ ಸವಿನೆನಪುಗಳನ್ನು ಹಂಚಿಕೊಂಡರು. ತಮ್ಮ ಸಾಧನೆಯ ಹಿಂದೆ ಈ ಶಾಲೆಯಲ್ಲಿ ಕಲಿತ ಕೌಶಲ್ಯಗಳು ಉಪಯುಕ್ತವಾಗಿವೆ ಎಂಬುದಾಗಿ ಹಿರಿಯ ವಿದ್ಯಾರ್ಥಿಗಳು ಹೇಳಿದರು. ಇದೇ ವೇದಿಕೆಯಲ್ಲಿ ಈ ವರ್ಷ ಪ್ರಾಯೋಗಿಕವಾಗಿ ಮಾಡಿದ ಭತ್ತ
ಬೇಸಾಯದ ಪಾಠ ಮಾಡಿದ ಶ್ರೀ.ನಿತ್ಯಾನಂದ ಗುಂಡ್ಯ ರವರನ್ನು ಅಭಿನಂದಿಸಲಾಯಿತು. ಇದಲ್ಲದೆ 2023 -24ನೇ ಸಾಲಿನ ಎಸ್.ಎಸ್. ಎಲ್. ಸಿ ಯಲ್ಲಿ ಉತ್ತಮ ಸಾಧನೆ ಮಾಡಿದ ಹಿರಿಯ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸ್ನೇಹ ಸಂಸ್ಥೆಯ ಅಧ್ಯಕ್ಷರಾದ ಡಾ. ಚಂದ್ರಶೇಖರ ದಾಮ್ಲೆ ಅವರು ಮಾತನಾಡಿ “ಒಂದು ಶಾಲೆಯು ಅಭಿವೃದ್ಧಿ ಹೊಂದಬೇಕಾದರೆ ಪೋಷಕರ ಬೆಂಬಲವು ಬಹಳ ಮುಖ್ಯ. ಸ್ನೇಹ ಶಾಲೆಯ ಕಲಿಕೆಯ ವಾತಾವರಣ ವಿದ್ಯಾರ್ಥಿಗಳಲ್ಲಿ ಧೈರ್ಯ, ಸ್ಥೈರ್ಯ, ವೈವಿಧ್ಯತೆ, ಸ್ವಂತಿಕೆ ಮೊದಲಾದವುಗಳನ್ನು ಬೆಳೆಸಿ ಅವರಲ್ಲಿ ಉತ್ತಮ ವ್ಯಕ್ತಿತ್ವ ರೂಪೀಕರಣಕ್ಕೆ ಸಹಕಾರಿಯಾಗಿದೆ. ಈ ರೀತಿ ಇಲ್ಲಿ ಕಲಿತ ಹಲವಾರು ವಿದ್ಯಾರ್ಥಿಗಳು ವಿಭಿನ್ನ ಸ್ಥಾನಗಳಲ್ಲಿ ವಿಶ್ವದಲ್ಲೆಡೆ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಸಾಧನೆ ನಿಮಗೆ ಸ್ಫೂರ್ತಿಯಾಗಬೇಕು” ಎಂದು ಹೇಳಿದರು.
ನಂತರ ಶಾಲಾ ಆಡಳಿತ ಮಂಡಳಿಯ ಸಂಚಾಲಕರಾದ ಡಾ. ವಿದ್ಯಾ ಶಾಂಭವ ಪಾರೆ ಅವರು ಮಾತನಾಡಿ “ಪ್ರಸ್ತುತ ದಿನಗಳಲ್ಲಿ ಇಂಗ್ಲಿಷ್ ಶಿಕ್ಷಣದ ಮೋಹವು ಅಧಿಕವಾಗಿ ಕನ್ನಡ ಮಾಧ್ಯಮ ಶಿಕ್ಷಣದ ಮಹತ್ವವನ್ನೇ ಮರೆತು ಹೋಗುತ್ತಿದ್ದಾರೆ. ಆದಷ್ಟು ನಾವು ಕನ್ನಡ ಮಾಧ್ಯಮಕ್ಕೆ ಹೆಚ್ಚು ಒತ್ತನ್ನು ನೀಡಬೇಕು. ಮಾತೃಭಾಷೆಯನ್ನು ನಾವು ಕಡೆಗಣಿಸಬಾರದು. ಎಷ್ಟೇ ಸಾಧನೆಯನ್ನು ಮಾಡಿ ಉತ್ತುಂಗಕ್ಕೇರಿದರೂ ಮೊದಲು ಮಾನವನಾಗಬೇಕು” ಎಂದು ಹೇಳಿದರು.
ಆರಂಭದಲ್ಲಿ ವಿದ್ಯಾರ್ಥಿನಿಯರಿಂದ ಪ್ರಾರ್ಥನೆಯಾದ ಬಳಿಕ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಅವರು ಶಾಲಾ ವಾರ್ಷಿಕ ವರದಿಯನ್ನು ವಾಚಿಸಿದರು. ವೇದಿಕೆಯಲ್ಲಿ ಸುರಕ್ಷಾ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಪ್ರತಿಮಾ ಅವರು ಉಪಸ್ಥಿತರಿದ್ದರು.
ಶಿಕ್ಷಕಿ ಶ್ರೀಮತಿ ಜಯಂತಿ.ಕೆ.ಇವರು ಸ್ವಾಗತಿಸಿ, ಶಿಕ್ಷಕ ದೇವಿಪ್ರಸಾದ ಜಿ.ಸಿ. ವಂದಿಸಿದ ಈ ಕಾರ್ಯಕ್ರಮವನ್ನು ಶಿಕ್ಷಕಿ ಶ್ರೀಮತಿ ಸವಿತಾ. ಕೆ ಅವರು ನಿರೂಪಿಸಿದರು.