ನಂಬಿಕೆ ಜಾಗ್ರತಗೊಂಡಾಗ ನಮ್ಮ ಸಂಸ್ಕೃತಿ, ಧರ್ಮ ಉಳಿಯುತ್ತದೆ : ಎಡನೀರು ಸ್ವಾಮೀಜಿ
ಎಡಮಂಗಲ ಗ್ರಾಮದ ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವವು ಜ. 1 ರಂದು ಆರಂಭಗೊಂಡಿದ್ದು, ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.
ಕಾಸರಗೋಡಿನ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಉಪಸ್ಥಿತರಿದ್ದು ಆಶೀರ್ವಚನ ನೀಡಿ ” ದೇವಾಲಯದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಧರ್ಮದ ಅರಿವು ಜಾಸ್ತಿಯಾಗಬಲ್ಲದು. ನಮ್ಮ ನಂಬಿಕೆಗಳೇ ಧರ್ಮವನ್ನು ಕಾಪಾಡುತ್ತದೆ. ನಂಬಿಕೆ ಜಾಗ್ರತಗೊಂಡಾಗ ನಮ್ಮ ಸಂಸ್ಕೃತಿ, ಧರ್ಮ ಉಳಿಯುತ್ತದೆ., ಧಾರ್ಮಿಕ ಶ್ರದ್ದೆ ಕುಂಠಿತವಾಗುತ್ತಿರುವ ಸಂದರ್ಭದಲ್ಲಿ ಕೇರ್ಪಡ ದೇವಸ್ಥಾನದಲ್ಲಿ ಧಾರ್ಮಿಕ ಶಿಕ್ಷಣ ಬೋಧನೆ ಶ್ಲಾಘನೀಯ ಕಾರ್ಯ” ಎಂದರು.
ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ” ದೇವಸ್ಥಾನ ಕೇಂದ್ರೀತವಾಗಿಟ್ಟುಕೊಂಡು ಮುಂದಿನ ಪೀಳಿಗೆಗೆ ನಮ್ಮ ಆಚಾರ, ವಿಚಾರ, ಹಬ್ಬಹರಿದಿನ, ವ್ಯವಸ್ಥೆಗಳನ್ನು ತಿಳಿಸಿಕೊಡುವ ಕಾರ್ಯ ಮಾಡಬೇಕಾಗಿದೆ” ಎಂದರು.
ಕುಂಟಾರಿನ ಬ್ರಹ್ಮಶ್ರೀ ರವೀಶ ತಂತ್ರಿಗಳು ದೇವಾಲಯಗಳು ಹಿಂದೂ ಸಂಸ್ಕೃತಿಯ ಕೈಗನ್ನಡಿ ಎಂಬ ವಿಷಯ ಕುರಿತು ಉಪನ್ಯಾಸ ನೀಡಿ, ” ದೇವಾಲಯಗಳು ಹಿಂದೂ ಸಂಸ್ಕೃತಿಯ ಕೈಗನ್ನಡಿ. ನಾವು ಸ್ವಾರ್ಥಕ್ಕೋಸ್ಕರ ಜೀವನ ನಡೆಸಿಲ್ಲ. ಎಲ್ಲರ ಒಳಿತಿಗಾಗಿ ಜೀವನ ನಡೆಸುವ” ಎಂದರು.
ಶಾಸಕಿ ಕು. ಭಾಗೀರಥಿ ಮುರುಳ್ಯ ಅವರು ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ದೇವಸ್ಥಾನದ ಅಭಿವೃದ್ಧಿಯಲ್ಲಿ ಊರವರ ಶ್ರಮ, ಕೆಲಸಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಜೀರ್ಣೋದ್ದಾರ, ಬ್ರಹ್ಮಕಲಶ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದರು.
ಎಡಮಂಗಲ ಗ್ರಾಮ ಪಂಚಾಯತ್ ಅಧ್ಯಕ್ಷ ರಾಮಣ್ಣ ಚಾಲ್ತಾರು,
ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ
ಎನ್ ಸೀತಾರಾಮಯ್ಯ ಕೇಂಜೂರು, ದೆಹಲಿ ತುಳುಸಿರಿ ಅಧ್ಯಕ್ಷ ವಸಂತ ಶೆಟ್ಟಿ ಉಪಸ್ಥಿತರಿದ್ದರು.
ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಸಂತ ನಡುಬೈಲು ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು.
ವ್ಯವಸ್ಥಾಪನ ಸಮಿತಿ ಸದಸ್ಯ ವೆಂಕಪ್ಪ ಗೌಡ ಆಲಾಜೆ ವಂದಿಸಿದರು. ಪ್ರದೀಪ್ ರೈ ಎಣ್ಮುರು ಕಾರ್ಯಕ್ರಮ ನಿರೂಪಿಸಿದರು.
ಇದೇ ಸಂದರ್ಭ ದೀಕ್ಷಿತ್ ಎಡಮಂಗಲ ನಿರ್ಮಿಸಿದ
ತುಳು ಭಕ್ತಿಗೀತೆಯನ್ನು ಸ್ವಾಮೀಜಿ ಬಿಡುಗಡೆಗೊಳಿಸಿದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ಶ್ರೀ ಮಹಿಷಮರ್ದಿನೀ ಭಜನಾ ಮಂಡಳಿ ಕೇರ್ಪಡ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಿತು.
ಸಭಾ ಕಾರ್ಯಕ್ರಮದ ಬಳಿಕ ಗಾನ ಮಾಧುರ್ಯ ಕಲಾ ಕೇಂದ್ರ ಕಾಣಿಯೂರು ಇವರಿಂದ ಗಾನ ನೃತ್ಯ ವೈಭವ, ವಿದುಷಿ ಪೃಥ್ವಿ ಪಿ. ಶೆಟ್ಟಿ ಮತ್ತು ತಂಡದವರಿಂದ ನೃತ್ಯಾರ್ಪಣಂ ಕಾರ್ಯಕ್ರಮ ನಡೆಯಿತು.
ಸಂಜೆ ದೇವಸ್ಥಾನದಲ್ಲಿ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, ಆಚಾರ್ಯಾದಿ ಖುತ್ವಿಗ್ವರಣ, ಪ್ರಾಸಾದಶುದ್ಧಿ, ಅಂಕುರಾರೋಪಣ,
ರಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜಾಬಲಿ, ಮಹಾಪೂಜೆ ಪ್ರಸಾದ ವಿತರಣೆ ನಡೆಯಿತು.