ಗಂಗಾಪೂಜೆ, ಗಂಗಾರತಿ, ದೀಪೋತ್ಸವದೊಂದಿಗೆ ಭಕ್ತಿ ಭಾವುಕ ಕ್ಷಣ
ಹರಿದ್ವಾರದ ಗಂಗಾರತಿಯನ್ನು ನೆನಪಿಸುತ್ತಿದೆ ಎಂದ ಮಾತಾನಂದಮಯಿ
ಅಷ್ಟಬಂಧ ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿರುವ ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಪರಿಸರದಲ್ಲಿ ನಿರ್ಮಾಣಗೊಂಡಿರುವ ಪವಿತ್ರ ತೀರ್ಥಕೆರೆ ಮತ್ತು ತೀರ್ಥ ಬಾವಿ ಜ. ೩ರಂದು ಲೋಕಾರ್ಪಣೆಗೊಂಡಿತು.
ದೇವಸ್ಥಾನದ ಪ್ರಶಾಂತ ಪರಿಸರದಲ್ಲಿಯೇ ಅತ್ಯಂತ ಸುಂದರವಾಗಿ ನಿರ್ಮಾಣಗೊಂಡ ಈ ಪುಷ್ಕರಣಿಯ ಲೋಕಾರ್ಪಣೆ ಕೂಡಾ ಭಕ್ತಿ ಭಾವದ ಸನ್ನಿವೇಶದಲ್ಲಿ ನಡೆಯಿತು. ತೀರ್ಥಕೆರೆಯ ಸುತ್ತ ಮೆಟ್ಟಿಲುಗಳಲ್ಲಿ ಇರಿಸಲಾಗಿದ್ದ ಸಾವಿರಾರು ದೀಪಗಳನ್ನು ಬೆಳಗಿಸಲಾಯಿತು. ಆ ಬಳಿಕ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವೈದಿಕರು ಪೂಜೆ ನೆರವೇರಿಸಿದರು. ಗಂಗಾಪೂಜೆಯ ಬಳಿಕ ಗಂಗಾರತಿ ಬೆಳಗಿಸಲಾಯಿತು. ಉಪಸ್ಥಿತರಿದ್ದ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಸಾದ್ವಿ ಶ್ರೀ ಮಾತಾನಂದಮಯಿ, ಶಾಸಕಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷೆ ಭಾಗೀರಥಿ ಮುರುಳ್ಯ, ಸುಳ್ಯ ತಹಶೀಲ್ದಾರ್ ಮಂಜುಳಾ ತೀರ್ಥಕೆರೆಗೆ ಬಾಗಿನ ಅರ್ಪಿಸಿದರು. ಸೇರಿದ ಸಾವಿರಾರು ಮಂದಿ ಈ ನಯನ ಮನೋಹರ ದೃಶ್ಯಗಳನ್ನು ಕಣ್ತುಂಬಿಕೊಂಡರು.
ಇದಾದ ಬಳಿಕ ಗೋಪೂಜೆ ನಡೆಯಿತು.
ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನಗೈದ ಮಾತಾನಂದಮಯಿಯವರು ಈ ತೀರ್ಥಕೆರೆಯ ಲೋಕಾರ್ಪಣೆಯ ಕ್ಷಣ ಹರಿದ್ವಾರದ ಗಂಗಾರತಿಯನ್ನು ನೆನಪಿಸುತ್ತಿದೆ ಎಂದು ನುಡಿದರು.
ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಸಂತ ನಡುಬೈಲು, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಅನೂಪ್ ಕುಮಾರ್ ಆಳ್ವ ಕಟ್ಟಬೀಡು, ಕೋಶಾಧಿಕಾರಿ ವೆಂಕಪ್ಪ ಗೌಡ ಆಲಾಜೆ ಸೇರಿದಂತೆ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.