ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಡೆದ ವಿಜೃಂಭಣೆಯ
ಕುಕ್ಕುಜಡ್ಕ ಒತ್ತೆಕೋಲ
ಅಮರಮುಡ್ನೂರಿನ ಕುಕ್ಕುಜಡ್ಕ ವಿಷ್ಣುನಗರದ ಶ್ರೀ ವಿಷ್ಣುಮೂರ್ತಿ ಶ್ರೀ ರಕ್ತೇಶ್ವರಿ ಮತ್ತು ಪರಿವಾರ ದೈವಗಳ ದೈವಸ್ಥಾನದಲ್ಲಿ 71 ನೇ ವರ್ಷದ ವಾರ್ಷಿಕೋತ್ಸವವು ಕ್ಷೇತ್ರದ ಆಚಾರ್ಯ ರಾಗಿರುವ ಬ್ರಹ್ಮಶ್ರೀ ವೇ.ಮೂ. ನೀಲೇಶ್ವರ ಪದ್ಮನಾಭ ತಂತ್ರಿಯವರ ನಿರ್ದೇಶನದಂತೆ
ಜ.1 ರಿಂದ 3 ರ ತನಕ ಅತ್ಯಂತ ವಿಜೃಂಭಣೆಯಿಂದ ಜರುಗಿತು.
ಜ.1 ರಂದು ಬೆಳಗ್ಗೆ ಶ್ರೀ ಮಹಾವಿಷ್ಣು ಭಜನಾ ಮಂಡಳಿ ಕುಕ್ಕುಜಡ್ಕ ಇದರ ಆಯೋಜನೆಯಲ್ಲಿ ಭಜನೋತ್ಸವ ಸ್ಥಳೀಯ
ವಿವಿಧ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಸಂಕೀರ್ತನೆಯು ನಡೆಯಿತು. ಸಂಜೆ ಮಹಾವಿಷ್ಣು ಮಕ್ಕಳ ತಂಡದ ಆಕರ್ಷಕ ಕುಣಿತ ಭಜನೆಯಾಗಿ ಮಹಾ ಮಂಗಳಾರತಿಯೊಂದಿಗೆ ಭಜನೋತ್ಸವ ಸಂಪನ್ನಗೊಂಡಿತು.
ಈ ಸಂದರ್ಭದಲ್ಲಿ ಬೆಳಗ್ಗೆ ಅರ್ಚಕರಿಂದ ಶ್ರೀ ದೈವಗಳಿಗೆ ಹೊರೆ ಕಾಣಿಕೆ ಸಮರ್ಪಣೆಯಾಗಿ ಗಣಹೋಮ ನಡೆಯಿತು. ಬಳಿಕ ಸಾಮೂಹಿಕ ಸತ್ಯನಾರಾಯಣ ದೇವರ ಪೂಜೆಯಾಗಿ ಮಧ್ಯಾಹ್ನ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನ ಸಂತರ್ಪಣೆಯಾಯಿತು. ಅಪರಾಹ್ನ ಶ್ರೀ ರಕ್ತೇಶ್ವರಿ ಮತ್ತು ಪರಿವಾರ ದೈವಗಳ ಭಂಡಾರ ಇಳಿದು ರಕ್ತೇಶ್ವರಿ, ಧರ್ಮಸ್ಥಳ ಪಂಜುರ್ಲಿ ,ಜಾವತೆ, ಮಂತ್ರವಾದಿ ಗುಳಿಗ, ರಕ್ತೇಶ್ವರಿ ಗುಳಿಗ,ಕಲ್ಕುಡ ಕಲ್ಲುರ್ಟಿ ಮತ್ತು ಅಂಗಾರ ಬಾಕುಡ ದೈವಗಳ ನರ್ತನ ಸೇವೆಯು ನಡೆದು ಪ್ರಸಾದ ವಿತರಣೆಯಾಗಿ ರಾತ್ರಿ ಸಾರ್ವಜನಿಕ ಅನ್ನ ಸಂತರ್ಪಣೆಯಾಯಿತು.
ಜ.2 ರಂದು ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲದ ಪ್ರಯುಕ್ತ ಭಾರತೀಯ ತೀಯ ಸಮಾಜ ಬಾಂಧವರಿಂದ ಬೆಳಗ್ಗೆ ಅಗ್ನಿ ಕುಂಡ ಜೋಡಣೆಯಾಯಿತು. ಸಂಜೆ ವಿಷ್ಣುಮೂರ್ತಿ ದೈವದ ಭಂಡಾರ ಇಳಿದು ಮೇಲೇರಿಗೆ ಅಗ್ನಿ ಸ್ಪರ್ಶವಾಗಿ ಶ್ರೀ ವಿಷ್ಣುಮೂರ್ತಿ ದೈವದ ಕುಳ್ಚಾಟ ನಡೆಯಿತು.
ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ಅಂಗನವಾಡಿ ಮಕ್ಕಳ ಚಿಣ್ಣರ ಹೆಜ್ಜೆ ,ವಿದುಷಿ ಜಯಶ್ರೀ ಕುಳ್ಳಂಪಾಡಿ ನಿರ್ದೇಶನದ ಭ್ರಾಮರಿ ನಾಟ್ಯಾಲಯದವರಿಂದ ನೃತ್ಯ ವೈಭವ, ಯೋಗೇನ ಚಿತ್ತಸ್ಯ ಯೋಗ ಕೇಂದ್ರದ ವಿದ್ಯಾರ್ಥಿಗಳಿಂದ ಯೋಗ ನೃತ್ಯ, ಶ್ರೀ ಮಹಾವಿಷ್ಣು ಮಕ್ಕಳ ಕುಣಿತ ಭಜನಾ ತಂಡದವರಿಂದ ಸಾಂಸ್ಕೃತಿಕ ವೈಭವ, ಮಯೂರಿ ಯುವತಿ ಮಂಡಲ ಚೊಕ್ಕಾಡಿಯವರಿಂದ ನಾಟ್ಯ ವೈಭವ, ಅರ್ಪಿತಾ ಕೇನಡ್ಕ, ಮಧುಶ್ರೀ ಕೇನಡ್ಕ ,ವಿನೀತ್ ಕಾಟೂರು ರವರ ಅಭಿನಯದ ಕಿರು ನಾಟಕ,ಸುಳ್ಯ ರಾಮಾಂಜನೇಯ ಯಕ್ಷ ಕಲಾ ವೃಂದದ ಮಕ್ಕಳ ಯಕ್ಷಗಾನ ಶ್ರೀ ಕೃಷ್ಣ ಲೀಲಾಮೃತ ಎಂಬ ಪ್ರಸಂಗ ಪ್ರದರ್ಶನವಾಯಿತು.
ಮರುದಿನ ಪ್ರಾತ:ಕಾಲ ಶ್ರೀ ವಿಷ್ಣುಮೂರ್ತಿ ದೈವದ ಅಗ್ನಿ ಸೇವೆಯಾಗಿ ದೈವದ ಬಾರಣೆ ನಡೆದ ಬಳಿಕ ಯಂ.ಪಿ.ಜಿ.ಕೆ ಯವರ ಅಶ್ವತ ವೃಕ್ಷ ಪೂಜೆಯು ನೆರವೇರಿತು. ದೈವದ ಕ್ಷೀರ ಸೇವನೆಯು ಮಾಯ್ಪಡ್ಕ ಮನೆಯಲ್ಲಿ ನಡೆದು ಪ್ರಸಾದ ವಿತರಣೆಯಾಗಿ ಹರಕೆಯ ತುಲಾಭಾರ ಸೇವೆಯು ಸಮರ್ಪಣೆಯಾಯಿತು. ಆಗಮಿಸಿದ ಭಕ್ತಾದಿಗಳಿಗೆ ರಾತ್ರಿಅನ್ನಸಂತರ್ಪಣೆಯಾಯಿತು.
ಮಹೋತ್ಸವದ ಪ್ರಯುಕ್ತ ಕುಕ್ಕುಜಡ್ಕ ಪೇಟೆಯನ್ನು ಕೇಸರಿ ಬಂಟಿಂಗ್ಸ್ ಅಳವಡಿಸಿ ವಿದ್ದುದೀಪಗಳಿಂದ ಅಲಂಕರಿಸಲಾಗಿತ್ತು. ರಾತ್ರಿ ಕುಳ್ಚಾಟದ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ದರು. ದೈವದ ನರ್ತನ ಸೇವೆ ವೀಕ್ಷಿಸಲು ಎಲ್.ಇ.ಡಿ.ಪರದೆ ಹಾಕಲಾಗಿತ್ತು.
ಆಡಳಿತ ಮಂಡಳಿಯ ವ್ಯವಸ್ಥಾಪಕರಾದ ಯಂ.ಜಿ.ಸತ್ಯನಾರಾಯಣ ರವರು ಹಾಗೂ ಮನೆಯವರು ಸರ್ವರನ್ನೂ ಸ್ವಾಗತಿಸಿದರು.
ಶ್ರೀ ಮಹಾವಿಷ್ಣು ಭಜನಾ ಸಂಘ ಮತ್ತು ಅನ್ನ ಸಂತರ್ಪಣಾ ಸಮಿತಿ ಸದಸ್ಯರು ನಿರಂತರವಾಗಿ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದರು.