ಅಕ್ರಮ ಜಮೀನು ಮಂಜೂರು ಆರೋಪ; ದಲಿತ ಕುಟುಂಬದಿಂದ ತಾಲೂಕು ಕಚೇರಿಯಲ್ಲಿ ಮುಂದುವರಿದ ಪ್ರತಿಭಟನೆ

0

ಪ್ರಾಣ ಹೋದರೂ ಇಲ್ಲಿಂದ ಕದಲುವುದಿಲ್ಲ:ಪಟ್ಟು ಹಿಡಿದು ಕುಳಿತಿರುವ ದಲಿತ ಸಂಘದ ಮುಖಂಡರು

ಪಂಬೆತ್ತಾಡಿ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಚಂರ್ಬ ಮೇರ ಎಂಬವರ ಜಮೀನನ್ನು ಸ್ಥಳೀಯ ನಿವಾಸಿ ಮೋನಪ್ಪ ಗೌಡ ಮತ್ತು ಇತರರು ಅಕ್ರಮವಾಗಿ ಮಂಜೂರುಗೊಳಿಸಿದ್ದಾರೆ ಎಂಬ ಆರೋಪದಡಿಯಲ್ಲಿ ಗುರುವಾರ ರಾತ್ರಿ ಸುಳ್ಯ ತಾಲೂಕು ಕಚೇರಿ ಆವರಣದಲ್ಲಿ ದಲಿತ ಕುಟುಂಬದ ಸದಸ್ಯರು ಮತ್ತು ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಯ ಮುಖಂಡರು ಪ್ರತಿಭಟನೆಗೆ ಮುಂದಾಗಿ ರಾತ್ರಿ 9 ಗಂಟೆತನಕ ಮುಂದುವರಿದಿತ್ತು.

ಬಳಿಕ ಸ್ಥಳಕ್ಕೆ ಬಂದ ಸುಳ್ಯ ಎಸೈ ಸಂತೋಷ್ ಅವರು ಗಿರಿಧರ ನಾಯ್ಕ ಅವರ ಬಳಿ ಮನವಿ ಮಾಡಿ ರಾತ್ರಿ ವೇಳೆ ವೃದ್ಧ ಮಹಿಳೆಯರನ್ನು ಈ ಚಳಿಯ ಸಮಯ ಇಲ್ಲಿ ಕೂರಿಸುವುದು ಸರಿಯಲ್ಲ. ಅಲ್ಲದೆ ಇದು ಕಚೇರಿಯ ಪರಿಸರ ಆದ ಕಾರಣ ಇಲ್ಲಿಂದ ತೆರಳಬೇಕು ಮತ್ತು ಏನಾದರೂ ಮಾತಾಡಲು ಇದ್ದರೆ ಬೆಳಿಗ್ಗೆ ಬಂದು ಕಚೇರಿ ವೇಳೆ ಅಧಿಕಾರಿಗಳೊಂದಿಗೆ ಮಾತನಾಡಿಕೊಳ್ಳಿ ಎಂದು ಮನವಿ ಮಾಡಿಕೊಂಡ ಹಿನ್ನಲೆಯಲ್ಲಿ ಎಲ್ಲಾದರೂ ನಾಳೆ ನಮಗೆ ನ್ಯಾಯ ಸಿಗದೇ ಹೋದರೆ ಮತ್ತೆ ನಾವು ಯಾವುದೇ ಅಧಿಕಾರಿಗಳ ಮಾತನ್ನು ಕೇಳುವುದಿಲ್ಲ ಮತ್ತು ಎಷ್ಟೇ ರಾತ್ರಿಯಾದರು ನಾವು ಈ ಜಾಗ ಬಿಟ್ಟು ಹೋಗುವುದೂ ಇಲ್ಲ ಎಂದು ಎಚ್ಚರಿಕೆಯನ್ನು ನೀಡಿ ಅಲ್ಲಿಂದ ತೆರಳಿದ್ದರು.

ಮತ್ತೆ ಶುಕ್ರವಾರ ಬೆಳಿಗ್ಗೆ ತಾಲೂಕು ಕಛೇರಿ ಬಳಿ ಬಂದ ಪ್ರತಿಭಟನಾಕಾರರು ಧರಣಿಗೆ ಮುಂದಾಗಿದ್ದು ರಾತ್ರಿ ವರೆಗೂ ಕಛೇರಿಯಲ್ಲೇ ಇದ್ದು ಪ್ರತಿಭಟನೆ ನಡೆಸುತ್ತೇವೆ.ಪ್ರಾಣ ಹೋದರು ಇಲ್ಲಿಂದ ನಾವು ಕದಲುವುದಿಲ್ಲ ಎಂದು ಏನಾದರೂ ಅನಾಹುತ ಸಂಭವಿಸಿದರೆ ಅಧಿಕಾರಿಗಳೇ ಹೊಣೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಹಶಿಲ್ದಾರ್ ಮಂಜುಳಾ ಅವರು, ಪ್ರಕರಣ ಸಂಬಂಧಿಸಿದಂತೆ ಈಗಾಗಲೇ ಹೈಕೋರ್ಟ್ ನಲ್ಲಿ ಆದೇಶವಾಗಿದೆ. ಅದರಂತೆ ಪಡೆದುಕೊಳ್ಳಲಾಗಿದೆ. ಇನ್ನು ಏನಾದರೂ ಸಮಸ್ಯೆಗಳಿದ್ದಲ್ಲಿ ಅವರು ಕೋರ್ಟ್ ನಲ್ಲೇ ವಾದಿಸಬೇಕಾಗುತ್ತದೆ ಎಂದರು.