ಎಣ್ಣೆಮಜಲು ಗುಂಡಾಜೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವೀಕರಣ, ಪುನರ್ ಪ್ರತಿಷ್ಠಾ ಬ್ರಹ್ಮ ಕಲಶೋತ್ಸವ ಹಾಗೂ ಪರಿವಾರ ದೈವಗಳ ನೇಮೋತ್ಸವ

0

ಬಳ್ಪ ಗ್ರಾಮದ ಗುಂಡಾಜೆ ಎಣ್ಣೆಮಜಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ನವೀಕರಣ, ಪುನರ್ ಪ್ರತಿಷ್ಠಾ ಬ್ರಹ್ಮ ಕಲಶೋತ್ಸವ ಹಾಗೂ ಪರಿವಾರ ದೈವಗಳ ನೇಮೋತ್ಸವವು ಡಿ. 31 ಮತ್ತು ಜ. 1ರಂದು ಕೆಮ್ಮಿಂಜೆ ಬ್ರಹ್ಮಶ್ರೀ ವೇದಮೂರ್ತಿ ತಂತ್ರಿ ಶ್ರೀ ಸುಬ್ರಹ್ಮಣ್ಯ ಬಳ್ಳಕ್ಕುರಾಯರ ನೇತೃತ್ವದಲ್ಲಿ, ಧರ್ಮಸ್ಥಳ ಡಾ. ವೀರೇಂದ್ರ ಹೆಗ್ಗಡೆಯವರ ಪೂರ್ಣಾಶೀರ್ವಾದದೊಂದಿಗೆ ವಾಸ್ತುತಜ್ಞ ಪ್ರಸಾದ ಮುನಿಯಂಗಳರವರ ಮಾರ್ಗದರ್ಶನದಲ್ಲಿ ನಡೆಯಿತು.


ಡಿ. 31ರಂದು ಬೆಳಿಗ್ಗೆ ಹಸಿರು ಹೊರೆಕಾಣಿಕೆ ಸಂಗ್ರಹ, ಸಂಜೆ ಉಗ್ರಾಣ ಮುಹೂರ್ತ ನಡೆದ ಬಳಿಕ ತಂತ್ರಿಗಳ ಆಗಮನ, ಪೂರ್ಣಕುಂಭ ಸ್ವಾಗತ ನಡೆಯಿತು. ಸಂಜೆ ಪ್ರಾರ್ಥನೆ, ವಿವಿಧ ವೈದಿಕ ಕಾರ್ಯಗಳು ನಡೆಯಿತು.
ಜ. 01ರಂದು ಬೆಳಿಗ್ಗೆ ಗಣಪತಿ ಹೋಮ, ಕಲಶ ಪೂಜೆ, ಪೂ. 9.44ರ ಕುಂಭ ಲಗ್ನದಲ್ಲಿ ದೇವರ ಹಾಗೂ ದೈವಗಳ ಪುನರ್ ಪ್ರತಿಷ್ಠೆ, ದುರ್ಗಾಹೋಮ, ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು. ಅಪರಾಹ್ನ ಸುಭಾಷ್ ಬಳ್ಳಕ್ಕರವರ ನೇತೃತ್ವದಲ್ಲಿ ಯಕ್ಷ-ಕಲ್ಯಾಣ-ನಾಟ್ಯ-ಕಥಾ ನಡೆಯಿತು.

ಸಂಜೆ ಭಜನಾ ಕಾರ್ಯಕ್ರಮದ ಬಳಿಕ ದೇವರಿಗೆ ರಂಗ ಪೂಜೆ, ಪ್ರಸಾದ ವಿತರಣೆ, ದೈವಗಳ ಭಂಡಾರ ತೆಗೆದು ಅನ್ನಸಂತರ್ಪಣೆ ನಡೆದ ಬಳಿಕ ರಕ್ತೇಶ್ವರಿ, ಧೂಮಾವತಿ, ಪಂಜುರ್ಲಿ ಮತ್ತು ಗುಳಿಗ ದೈವಗಳ ನೇಮೋತ್ಸವ, ಪ್ರಸಾದ ವಿತರಣೆ ನಡೆಯಿತು.

ಧಾರ್ಮಿಕ ಸಭೆ
ಸಂಘಟನೆಯೇ ಸಮಸ್ಯೆಗಳಿಗೆ ಪರಿಹಾರ – ಸೂರ್ಯನಾರಾಯಣ ಭಟ್ ಕಶೆಕೋಡಿ

ಮನುಷ್ಯನಿಗೆ ಜೀವನದಲ್ಲಿ ಬೇಕಾಗಿರುವುದು ಯೋಗ ಮತ್ತು ಕ್ಷೇಮ. ನಮ್ಮಲ್ಲಿಲ್ಲದ್ದು ಸಿಕ್ಕಿದರೆ ಯೋಗ, ಸಿಕ್ಕಿದ್ದನ್ನು ಉಳಿಸಿಕೊಂಡರೆ ಅದು‌ ಕ್ಷೇಮ. ದೇವರನ್ನು ನಾವು ಹೇಗೆ ನೋಡುತ್ತೇವೆಯೋ ಹಾಗೆ ದೇವರು ನಮ್ಮನ್ನು ನೋಡುತ್ತಾರೆ. ಎಣ್ಣೆಮಜಲು ಕುಟುಂಬಸ್ಥರು ಯೋಗಬಲದಿಂದ ಈ ದೇವಸ್ಥಾನವನ್ನು ನಿರ್ಮಿಸಿ ಬ್ರಹ್ಮ ಕಲಶವನ್ನು ನೆರವೇರಿಸಿದ್ದಾರೆ. ಮುಂದೆ ಎಲ್ಲರೂ ಒಗ್ಗಟ್ಟಾಗಿ ಆರಾಧಿಸುತ್ತಾ ಬಂದೆ ಕ್ಷೇಮ‌ ಲಭಿಸುತ್ತದೆ. ನಾವೆಲ್ಲರೂ ನಮ್ಮ ಮನವನ್ನು ಶೋಧಿಸಬೇಕು. ‌ಸಂಘಟನೆಯೇ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಎಂದು ಸೂರ್ಯನಾರಾಯಣ ಭಟ್ ಕಶೆಕೋಡಿ ಅಭಿಪ್ರಾಯಪಟ್ಟರು. ಅವರು ಜ. 1ರಂದು ಸಂಜೆ ನಡೆದ ಆಧಾರದ ಸಭಾಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷ ರಮಾನಂದ ಎಣ್ಣೆಮಜಲು ವಹಿಸಿದ್ದರು. ಬಳ್ಪ ಗ್ರಾ.ಪಂ. ಅಧ್ಯಕ್ಷ ಹರ್ಷಿತ್ ಕಾರ್ಜ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯ.ಸ. ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಪಂಬೆತ್ತಾಡಿ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಜಾಕೆ ಮಾಧವ ಗೌಡ, ಬಳ್ಪ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನದ ಧಾರ್ಮಿಕ ಉತ್ಸವ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಕುಳ ಅತಿಥಿಗಳಾಗಿ ಭಾಗವಹಿಸಿದ್ದರು. ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಬಾಲಕೃಷ್ಣ ಗೌಡ ಎಣ್ಣೆಮಜಲು, ಅಧ್ಯಕ್ಷ ನಿತ್ಯಾನಂದ ಎಣ್ಣೆಮಜಲು, ಬ್ರಹ್ಮ ಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಗಣಪಯ್ಯ ಗೌಡ ಎಣ್ಣೆಮಜಲು, ಕಾರ್ಯದರ್ಶಿ ಸೀತಾರಾಮ ಗೌಡ ಎ.ಡಿ ಎಣ್ಣೆಮಜಲು, ಹೈಕೋರ್ಟ್ ನ್ಯಾಯವಾದಿ ಧರ್ಮಪಾಲ ಗೌಡ ಎಣ್ಣೆಮಜಲು ಉಪಸ್ಥಿತರಿದ್ದರು. ವೇದಿಕೆಯಲ್ಲಿದ್ದ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಲೋಕೇಶ್ ಎಣ್ಣೆಮಜಲು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕು. ನಮ್ರತಾ ಎಣ್ಣೆಮಜಲು ಪ್ರಾರ್ಥಿಸಿದರು. ಬ್ರಹ್ಮ ಕಲಶೋತ್ಸವ ಸಮಿತಿ ಜತೆ ಕಾರ್ಯದರ್ಶಿ ಪ್ರಕಾಶ್ ಮೂಡ್ನೂರು ಸ್ವಾಗತಿಸಿ, ಶ್ರೀಮತಿ ಚಿತ್ರಕಲಾ‌ ಎಣ್ಣೆಮಜಲು ವಂದಿಸಿದರು. ಪಂಜ ಪ್ರಾ.ಕೃ.ಪ.ಸ.ಸಂಘದ ನಗದು ಗುಮಾಸ್ತರಾದ ಚಂದ್ರಶೇಖರ ಇಟ್ಯಡ್ಕ ಕಾರ್ಯಕ್ರಮ ನಿರೂಪಿಸಿದರು.