ಫೆ.16 ರಂದು ಪ್ರಪ್ರಥಮ ಬಾರಿಗೆ ಸುಳ್ಯದಲ್ಲಿ ನಡೆಯಲಿದೆ ಅರೆಭಾಷೆ ಕಾಮಿಡಿ ಆಡಿಷನ್

0

ಕರ್ನಾಟಕದಾದ್ಯಂತ ಮತ್ತು ಕರಾವಳಿಯಲ್ಲಿ ಸುದ್ದಿ ಮತ್ತು ಮನೋರಂಜನಾ ಕ್ಷೇತ್ರದಲ್ಲಿ ತೊಡಗಿಕೊಂಡಿರುವ V4 ನ್ಯೂಸ್ ಮತ್ತು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಎಂ ಬಿ ಫೌಂಡೇಶನ್‌ನ ಎಂ.ಬಿ. ಸದಾಶಿವರವರ ಸಹಯೋಗದಲ್ಲಿ ಸುಳ್ಯದಲ್ಲಿ ಪ್ರಪ್ರಥಮ ಬಾರಿಗೆ “ಅರೆಭಾಷೆ ಕಾಮಿಡಿ “(ಹಾಸ್ಯ) ಎಬಿಸಿ ಆಡಿಷನ್ ಕಾರ್ಯಕ್ರಮವು ಸುಳ್ಯದ ಲಯನ್ಸ್ ಸೇವಾ ಸದನದಲ್ಲಿ ಫೆ 16 ರಂದು ನಡೆಯಲಿದೆ ಎಂದು ಕಾರ್ಯಕ್ರಮದ ಆಯೋಜಕರು ಜ. 21 ರಂದು ಸುಳ್ಯದ ಪ್ರೆಸ್ ಕ್ಲಬ್ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿರುವ ವಿ 4 ನ್ಯೂಸ್ ನ ನಿರ್ದೇಶಕರಾದ ಲಕ್ಷ್ಮಣ್ ಕುಂದರ್ ‘V4ನ್ಯೂಸ್ ಕಳೆದ 20 ಸಂವತ್ಸರಗಳಿಂದ ಸುದ್ದಿ ಮತ್ತು ಮನೋರಂಜಾ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಬಂದಿದೆ. ಕರಾವಳಿಯ ಪ್ರಮುಖ ಸಂಸ್ಕೃತಿ, ಪರಂಪರೆಗಳ ಬಗ್ಗೆ ಬೆಳಕು ಚೆಲ್ಲುವ ಕಾರ್ಯಕ್ರಮಗಳನ್ನು ನೀಡುತ್ತಾ ಬರುತ್ತಿದೆ. ಜೊತೆಗೆ ಕರಾವಳಿಯ ದೈವ ದೇವರುಗಳ ಮತ್ತು ದೇವಾಲಯಗಳಲ್ಲಿ ನಡೆಯುವ ಉತ್ಸವಗಳು, ವಿಶೇಷ ಕಾರ್ಯಕ್ರಮಗಳ ನೇರಪ್ರಸಾರ. ಕಾರ್ಯಕ್ರಮದ ಚಿತ್ರೀಕರಣವನ್ನು ಮಾಡುತ್ತಾ ಅಲ್ಲಿನ ಇತಿಹಾಸ, ಪರಂಪರೆಯನ್ನು ತಿಳಿಸುವ ಕೆಲಸವನ್ನು ಮಾಡಲಾಗುತ್ತಿದೆ.

ಈಗಾಗಲೇ ಸಿಪಿಎಲ್ ಕಾಮಿಡಿ ಪ್ರಿಮಿಯರ್ ಲೀಗ್ ಸೀಸನ್ 4 ತುಳು ಕಾಮಿಡಿ ರಿಯಾಲಿಟಿ ಶೋ ಯಶಸ್ವಿಯಾಗಿ ನಡೆದು ಜನ ಮೆಚ್ಚುಗೆಯನ್ನು ಪಡೆದಿದೆ.

ಇದೇ ಮಾದರಿಯಲ್ಲಿ ಅರೆಭಾಷೆ ಕಾಮಿಡಿ(ಹಾಸ್ಯ) ರಿಯಾಲಿಟಿ ಶೋವನ್ನು ನಡೆಸಲು ಒಂದು ಹೆಜ್ಜೆ ಮುಂದಿಟ್ಟಿದ್ದೇವೆ. ಅರೆಭಾಷಿಕರಿಗೆ ಅರೆಭಾಷೆ ಕಾಮಿಡಿ(ಹಾಸ್ಯ) ತರಬೇತಿ ಕಾರ್ಯಾಗಾರ ಜರುಗಿಸುವ ಕುರಿತಂತೆ, ಕಾರ್ಯಕ್ರಮದ ಸಂಪೂರ್ಣ ಮಾಹಿತಿ, ವಿವರಗಳನ್ನು ಲಗತ್ತಿಸಿದ್ದೇವೆ. ಕಿರುನಾಟಕಗಳ ರಚನೆ, ನಿರ್ದೇಶನ ಮತ್ತು ನಟನೆಯ ಸಾಮರ್ಥ್ಯಗಳನ್ನು ಅರೆಭಾಷೆ ಕಲಾವಿದರಿಗೆ ಪರಿಚಯ ಮಾಡುವುದು, ಜೊತೆಗೆ ಅರೆಭಾಷೆಯನ್ನು ಅಕಾಡೆಮಿಯ ಮೂಲಕ ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸುವ ಮತ್ತು ಶಾಲಾ, ಕಾಲೇಜುಗಳಲ್ಲಿ ರಂಗಭೂಮಿ ಚಟುವಟಿಕೆಯ ಮೂಲಕ ಪರಿಚಯಿಸುವುದು ನಮ್ಮ ಉದ್ದೇಶ. ಅಕಾಡೆಮಿ ಮತ್ತು ಎಂ.ಬಿ ಫೌಂಡೇಶನ್ ಸಹಯೋಗದೊಂದಿಗೆ ಈ ಕಾರ್ಯಕ್ರಮ ಜರುಗಿಸಲು ನಾವು ಉತ್ಸುಕರಾಗಿದ್ದೇವೆ ಎಂದು ಅವರು ಹೇಳಿದರು.

ಅರೆಭಾಷೆ ಕಾಮಿಡಿ(ಹಾಸ್ಯ) ಕಿರುನಾಟಕ ತರಬೇತಿ ಕಾರ್ಯಾಗಾರ

ಬದಲಾದ ಸನ್ನಿವೇಶಗಳಲ್ಲಿ ಇತ್ತೀಚಿಗೆ ಕಿರುನಾಟಕ ಅಥವಾ ಪ್ರಹಸನಗಳು ಜನ ಮೆಚ್ಚುಗೆ ಪಡೆಯುತ್ತಿದೆ. ಅಲ್ಪ ಸಮಯದ ಅವಧಿಯಲ್ಲಿ ಮುಗಿಯುವ ಈ ಪ್ರದರ್ಶನಗಳು ನವ ರಸಗಳ ಎಲ್ಲಾ ಆಯಾಮಗಳನ್ನು ಒಳಗೊಂಡ ರಂಗ ಭೂಮಿಯ ವಿಶಿಷ್ಠ ಪ್ರಕಾರ.ಹಾಸ್ಯ ಪ್ರಹಸನ ಗಳಂತೂ ಎಲ್ಲಾ ಕಡೆಯೂ ಯಶಸ್ವಿ ಪ್ರದರ್ಶನಗಳನ್ನು ನಡೆಸಲು ಹಾಗಾಗಿ ಅರೆಭಾಷೆಯ ಕಾಮಿಡಿ (ಹಾಸ್ಯ) ಪ್ರಕಾರವನ್ನು ತುಂಬಾ ಇಷ್ಟಪಡುತ್ತಾರೆ ಮಾತ್ರ ವಲ್ಲ ತುಂಬಾ ಆಸಕ್ತಿ ಯಿಂದ ಪಾಲ್ಗೊಳ್ಳುತ್ತಾರೆ ಎನ್ನುವುದು ನಮ್ಮ ಆಶಯವಾಗಿದೆ ಎಂದರು.

ಅರೆಭಾಷಿಕರಿಗೆ ತರಬೇತಿ

ಅರೆಭಾಷಿಗರು ಇರುವ ಪ್ರದೇಶದಲ್ಲಿ ಈ ತರಬೇತಿ ಕಾರ್ಯಾಗಾರ ನಡೆಸುವುದು ಸೂಕ್ತ ಎನ್ನುವುದು ನಮ್ಮ ಅಭಿಪ್ರಾಯವಾಗಿದ್ದು ದಕ್ಷಿಣ ಕನ್ನಡ ಹಾಗೂ ಮಡಿಕೇರಿ ಜಿಲ್ಲೆಯ ಆಯ್ದ 5 ಅರೆಭಾಷೆ ಕಾಮಿಡಿಯ ತಂಡವನ್ನು ಆಯ್ಕೆ ಮಾಡಿ ಒಂದು ಪರಿಸರದಲ್ಲಿ

ಒಟ್ಟು 25 ಕಲಾವಿದರನ್ನು ಆಯ್ಕೆ ಮಾಡಿ ವೇದಿಕೆ ಯಲ್ಲಿ ನಟಿಸಲು ಗರಿಷ್ಠ 5 ಮಂದಿ ಕಲಾವಿದರು ಹಾಗೂ ಸಂಗೀತ, ರಂಗ ಪರಿಕರ, ರಂಗಸಜ್ಜಿಕೆ, ಹಿಮ್ಮೇಳ ಗಳಿಗೆ ಉಳಿದ ಅರೆ ಭಾಷಿಗರನ್ನು ತರಬೇತಿಗೊಳಿಸುವುದು.

ಪ್ರಬುದ್ಧ ನಿರ್ದೇಶಕರಿಂದ ತರಬೇತಿ:

ಈಗಾಗಲೇ ಜಿಲ್ಲೆಯಲ್ಲಿ ತಮ್ಮ ಕಿರುನಾಟಕ ಪ್ರದರ್ಶನಗಳ ಮೂಲಕ ಪ್ರಸಿದ್ಧರಾದ ಹಿರಿಯ ಕಲಾವಿದರುಗಳು ಆಯ್ಕೆಗಾರ ರಿಗೆ ತರಬೇತಿ ನೀಡುತ್ತಾರೆ. ಆಯ್ದ ಆಯ್ಕೆ ಗಾರರಿಗೆ ಅವರು ತೆರಳಿ ನಿರ್ದೇಶನ ನೀಡಲಿದ್ದಾರೆ. ಆಯ್ಕೆ ಗಾರರಿಗೆ ಉಚಿತ ಸಮಯವನ್ನು ಆಯ್ಕೆ ಮಾಡಿ ಸರಿಸುಮಾರು 15 ದಿನಗಳ ಕಾಲ ಒಂದು ಪರಿಪಕ್ವ ಪ್ರದರ್ಶನಕ್ಕೆ ಸಿದ್ಧತೆ ನಡೆಯಲಿದೆ.ಚಾನೆಲ್ ಕಾರ್ಯಕ್ರಮದಲ್ಲಿ ಅರೆಭಾಷೆ ಕಾಮಿಡಿ(ಹಾಸ್ಯ) ಎಬಿಸಿ ಪ್ರದರ್ಶನ : ತರಬೇತುಗೊಂಡ ತಂಡಗಳು ನಿಗದಿ ಪಡಿಸಿದ ದಿನಾಂಕದಂದು ತಮ್ಮ ಅರೆಭಾಷೆ ಕಾಮಿಡಿ(ಹಾಸ್ಯ) ಎಬಿಸಿ ಸಾರ್ವಜನಿಕವಾಗಿ ಪ್ರದರ್ಶಿಸುವರು. ಎಬಿಸಿ ಅರೆಭಾಷೆ ಕಾಮಿಡಿ (ಹಾಸ್ಯ) ಪ್ರದರ್ಶನಗೊಳ್ಳುವ ಚಾನೆಲ್‌ನಲ್ಲಿ ನಂತರ ಪ್ರಸಾರಗೊಳ್ಳುವುದು.

ಎಬಿಸಿ (ಅರೆಭಾಷೆ ಕಾಮಿಡಿ(ಹಾಸ್ಯ)

ಪ್ರಸ್ತುತ ಜರುಗುತ್ತಿರುವ ಅರೆಭಾಷೆ ಕಾಮಿಡಿ(ಹಾಸ್ಯ) ಫೆಬ್ರವರಿ 16ರ ಆದಿತ್ಯವಾರ ಆಡಿಷನ್ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ತಮ್ಮ ಪ್ರದರ್ಶನ ನೀಡುವ ಅವಕಾಶವನ್ನು ಅರೆಭಾಷೆ ಕಾಮಿಡಿ (ಹಾಸ್ಯ) ತಂಡಗಳು ಪಡೆದುಕೊಳ್ಳಲಿವೆ.

ಅರೆಭಾಷೆ ಕಲಿಕೆಗೆ ಪೂರಕ ವೇದಿಕೆ : ಅರೆಭಾಷೆ ಕಾಮಿಡಿ(ಹಾಸ್ಯ) ತರಬೇತಿ ಕಾರ್ಯಾಗಾರ ಮತ್ತು ಭಾಷೆ ಕಲಿಕೆಗೆ ಇನ್ನಷ್ಟು ಪೂರಕ ವಾತಾವರಣ ಸೃಷ್ಟಿಸಬಲ್ಲುದು.ಅರೆಭಾಷೆ ಕಾಮಿಡಿ (ಹಾಸ್ಯ)ಚಟುವಟಿಕೆಗೆ ಅವಕಾಶವನ್ನು ಒದಗಿಸುವ ಈ ಕಾರ್ಯಾಗಾರ ಮುಂದಿನ ದಿನಗಳಲ್ಲಿ ಆರಭಾಷೆ ಕಾಮಿಡಿ(ಹಾಸ್ಯ) ಕಲಾವಿದರು ಎಲ್ಲಾ ರಂಗಗಳಲ್ಲಿಯೂ ರಂಗಭೂಮಿ’ ಚಟುವಟಿಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆಯಾಗಲಿದೆ.

ಸ್ಕ್ರಿಪ್ಟ್ ರೈಟರ್ ತರಬೇತಿ

ಅರೆಭಾಷೆ ಕಾಮಿಡಿ(ಹಾಸ್ಯ), ಎಡಿಸಿಗೆ ಸ್ಕ್ರಿಪ್ಟ್ ರೈಟರ್ ಆಗಿ ಸಾಹಿತಿ, ನಾಟಕ ರಚನೆಕಾರ, ಸಂಭಾಷಣೆಗಾರ, ಚಿತ್ರಕಥೆ, ಬರಹಗಾರ, ನಟ, ಹಾಗೂ ಕಾಂತಾರ ಸಿನಿಮಾ ಖ್ಯಾತಿಯ ಮತ್ತು ವಕೀಲರಾಗಿಯೂ ಸೇವೆ ಸಲ್ಲಿಸುತ್ತಿರುವ ಶಶಿರಾಜ್ ಕಾವೂರು ಅವರು ತರಬೇತಿ ನೀಡಲಿದ್ದಾರೆ.

ಆ್ಯಕ್ಷನ್ ಟೈನರ್

ನಟ, ಸಂಗೀತಗಾರ, ಚಲನಚಿತ್ರ ನಟಿ ಕಾಂತಾರ ಸಿನಿಮಾ ಖ್ಯಾತಿಯ ಮೈಮ್ ರಾಮ್‌ದಾಸ್ ಮತ್ತು ಮಿಮಿಕ್ರಿ ಆರ್ಟಿಸ್ಟ್, ಚಲನಚಿತ್ರ ನಟ ವಿಸ್ಮಯ್ ವಿನಾಯಕ್ ಅವರು ತರಬೇತಿ ನೀಡಲಿದ್ದಾರೆ ಎಂದು ಕಾರ್ಯಕ್ರಮದ ರೂಪರೇಷೆಗಳ ಬಗ್ಗೆ ಮಾಹಿತಿ ನೀಡಿದರು.

ಸುದ್ದಿಗೋಷ್ಟಿಯಲ್ಲಿ V4 ನ್ಯೂಸ್‌ನ ಆಡಳಿತ ನಿರ್ದೇಶಕರಾದ ಲಕ್ಷ್ಮಣ್ ಕುಂದರ್, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಂಜಿ, ಎಂ.ಬಿ. ಫೌಂಡೇಶನ್‌ ಎಂ.ಬಿ. ಸದಾಶಿವ, ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರಾದ ಚಂದ್ರಶೇಖರ ಪೇರಾಲು, V4 ನ್ಯೂಸ್‌ನ ಮಾರ್ಕೇಟಿಂಗ್ ಮ್ಯಾನೇಜರ್ ಮಾಣಿಕ್, V4ನ್ಯೂಸ್‌ನ ಪ್ರಾದೇಶಿಕ ಸುದ್ದಿ ಸಂಪಾದಕ ಪುಷ್ಪರಾಜ್ ಶೆಟ್ಟಿ ಉಪಸ್ಥಿತರಿದ್ದರು.