ಗ್ರಾಮ ವ್ಯಾಪ್ತಿಯ ಗ್ಯಾರಂಟಿ ವಿಲೇವಾರಿ ಶಿಬಿರಗಳಿಂದ ಪ್ರಗತಿ : ಹಮೀದ್ ಕುತ್ತಮೊಟ್ಟೆ
ಗ್ರಾಮ ಗ್ರಾಮಗಳಲ್ಲಿ ಗ್ಯಾರಂಟಿ ವಿಲೇವಾರಿ ಶಿಬಿರ ಆಯೋಜನೆ ಮಾಡಿರುವುದರಿಂದ ಉತ್ತಮ ಪ್ರಗತಿ ಕಂಡು ಬಂದಿದೆ. ಹಲವು ಮಂದಿ ಅರ್ಹ ಫಲಾನುಭವಿಗಳು ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ಹೇಳಿದ್ದಾರೆ.
ಜ.28ರಂದು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇ.ಒ. ರಾಜಣ್ಣ ಕಾರ್ಯಕಲಾಪ ನಡೆಸಿದರು. ಗ್ಯಾರಂಟಿ ಯೋಜನೆ ಸದಸ್ಯರಾದ ಭವಾನಿಶಂಕರ್ ಕಲ್ಮಡ್ಕ, ಲತೀಫ್ ಅಡ್ಕಾರು, ಈಶ್ವರ ಆಳ್ವ, ಇಬ್ರಾಹಿಂ ಶಿಲ್ಪ, ಧನುಷ್ ಕುಕ್ಕೆಟ್ಟಿ, ವಿಜೇಶ್ ಹಿರಿಯಡ್ಕ, ಅಬ್ಬಾಸ್ ಅಡ್ಕ, ಭವಾನಿ, ರವಿ ಗುಂಡ್ಯಡ್ಕ, ರಾಜು ನೆಲ್ಲಿಕುಮೇರಿ, ಕಾಂತಿ ಬಿ.ಎಸ್., ಇಲಾಖಾಧಿಕಾರಿಗಳು ಸಭೆಯಲ್ಲಿ ಇದ್ದರು.
ಸಿ.ಡಿ.ಪಿ.ಒ. ಶೈಲಜಾ ಮಾಹಿತಿ ನೀಡಿ, ಗ್ರಾಮ ವಿಲೇವಾರಿ ಶಿಬಿರ ಆಯೋಜನೆ ಬಳಿಕ 105 ಹೊಸ ಅರ್ಜಿ ಬಂದಿರುವುದಾಗಿ ಮಾಹಿತಿ ನೀಡಿದರು. ಜಿಎಸ್ಟಿ ಪಾವತಿ ದಾರರೆಂದು ಕೆಲವು ಸಮಸ್ಯೆ ಹೊರತು ಪಡಿಸಿ, ಉಳಿದ ಯಾವುದೇ ಸಮಸ್ಯೆ ಇಲ್ಲ ಎಂದು ಅವರು ಮಾಹಿತಿ ನೀಡಿದರು.
ಕೆ.ಎಸ್.ಆರ್.ಟಿ.ಸಿ. ಗೆ ಮೆಚ್ಚುಗೆ : ಕೊಡಿಯಾಲ ಗ್ರಾಮದ ಕಲ್ಪನೆಯ ಬಸ್ ವ್ಯವಸ್ಥೆಯ ಬೇಡಿಕೆ ಹಾಗೂ ಪೇರಾಲು – ಅಡ್ಪಂಗಾಯ ಬಸ್ ವ್ಯವಸ್ಥೆ ಕೆ.ಎಸ್.ಆರ್ ಟಿ.ಸಿ.ಕಲ್ಪಿಸಿದೆ. ಸದಸ್ಯರ ಬೇಡಿಕೆಗೆ ಸ್ಪಂದಿಸಿದ ಇಲಾಖೆಯನ್ನು ಅಭಿನಂಧಿಸುವುದಾಗಿ ಇ.ಒ. ರಾಜಣ್ಣ ಹೇಳಿದರು.
ಮಡಪ್ಪಾಡಿಗೆ ಬಸ್ ಬೇಡಿಕೆ, ಕಂದ್ರಪ್ಪಾಡಿ ಬಸ್ ಬೇಡಿಕೆಕುರಿತು ಸದಸ್ಯ ವಿಜೇಶ್ ಮುಂದಿಟ್ಟಾಗ, ಸಿಬ್ಬಂದಿ ನೇಮಕ ಸಧ್ಯದಲ್ಲೇ ಆಗಲಿದ್ದು ಬೇಡಿಕೆಗೆ ಅನುಗುಣವಾಗಿ ವ್ಯವಸ್ಥೆ ಸರಿಪಡಿಸುವುದಾಗಿ ಡಿಪ್ಪೊ ಮ್ಯಾನೇಜರ್ ಭರವಸೆ ನೀಡಿದರು.
ಅನ್ನಭಾಗ್ಯದ ಹಣ ನಿನ್ನೆ ಸಂಜೆ ಫಲಾನುಭವಿಗಳ ಖಾತೆಗೆ ಜಮೆ ಆಗಿದೆ ಎಂದು ಆಹಾರ ನಿರೀಕ್ಷಕರು ಮಾಹಿತಿ ನೀಡಿ, 1 ಕೋಟಿ 14 ಲಕ್ಷ ಹಣ ತಾಲೂಕಿಗೆ ಬಂದಿದೆ ಎಂದು ಹೇಳಿದರು. 51 ಫಲಾನುಭವಿಗಳು ಶಿಬಿರ ಆಯೋಜನೆಯಿಂದ ಹೆಚ್ಚಾಗಿದ್ದಾರೆ ಎಂದುಹೇಳಿದರು.
ರೇಷನ್ ಕಾರ್ಡ್ ತಿದ್ದು ಪಡಿಗೆ ಜ.31ರೊಳಗೆ ಅವಕಾಶ ಕಲ್ಪಿಸಿದ್ದು, ಇದರ ಪ್ರಯೋಜನ ಸಾರ್ವಜನಿಕರು ಪಡೆಯುವಂತೆ ಇ.ಒ. ರಾಜಣ್ಣರು ಮಾಹಿತಿ ನೀಡಿದರು.
ತಾಲೂಕು ಪಂಚಾಯತ್ ಆವರಣದಲ್ಲಿ ಆಧಾರ್ ಕೇಂದ್ರ ಪೂರ್ಣಪ್ರಮಾಣದಲ್ಲಿ ಕಾರ್ಯರಂಭ ವ್ಯವಸ್ಥೆ ಆಗುವಂತಾಗಲಿ ಎಂದು ಸದಸ್ಯ ಭವಾನಿಶಂಕರ್ ಕಲ್ಮಡ್ಕ ಹೇಳಿದಾಗ, ಈ ಕುರಿತು ನಡಾವಳಿ ಸಿದ್ಧ ಪಡಿಸಿ ಕಳುಹಿಸುವುದಾಗಿ ಇ.ಒ. ರಾಜಣ್ಣ ಹೇಳಿದರು.
ಜನಪ್ರತಿನಿಧಿಗಳನ್ನು ಸರಕಾರಿ ಕಾರ್ಯಕ್ರಮಕ್ಕೆ ಆಹ್ವಾನಿಸದಿರುವ ಕುರಿತು ಹಾಗೂ ಮುಂದಿನ ದಿನದಲ್ಲಿ ಗ್ಯಾರಂಟಿ ಅನುಷ್ಠಾನ ಅಧ್ಯಕ್ಷ ರು ಹಾಗೂ ಸದಸ್ಯರನ್ನು ಆಹ್ವಾನಿಸಬೇಕು ಸದಸ್ಯ ಭವಾನಿಶಂಕರ್ ಕಲ್ಮಡ್ಕ ಹೇಳಿದಾಗ, ಸರಕಾರದ ಸುತ್ತೋಲೆಯಂತೆ ಮುಂದುವರಿಯುವುದಾಗಿ ಇ.ಒ.ರಾಜಣ್ಣ ಹೇಳಿದರು.