ಮಗ ಹಣ ಡ್ರಾ ಮಾಡಿದ್ದು ತಾಯಿಗೆ ಗೊತ್ತೇ ಇಲ್ಲ : ಫಲಾನುಭವಿಗಳು ಎಚ್ಚರಿಕೆ ವಹಿಸಿ
ವಾರದ ಏಳು ದಿನದಲ್ಲಿ ಯಾವ ದಿನ ಸುಳ್ಯದಲ್ಲಿ ಕರೆಂಟ್ ಇರುತ್ತದೆ ಎಂದು ಮೆಸ್ಕಾಂ ಸ್ಪಷ್ಟ ಮಾಹಿತಿ ನೀಡಬೇಕು ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರು ಅಧಿಕಾರಿಗಳಿಗೆ ತಾಕೀತು ಮಾಡಿರುವ ಘಟನೆ ನಡೆದಿದೆ.
ಜ.28ರಂದು ಸುಳ್ಯ ತಾಲೂಕು ಪಂಚಾಯತ್ ನಲ್ಲಿ ನಡೆದ ಗ್ಯಾರಂಟಿ ಅನುಷ್ಠಾನ ಸಮಿತಿಯ ಮಾಸಿಕ ಸಭೆಯಲ್ಲಿ ಮೆಸ್ಕಾಂ ವಿರುದ್ಧ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ಗೃಹಜ್ಯೋತಿ ಕುರಿತು ಸುಬ್ರಹ್ಮಣ್ಯ ಮೆಸ್ಕಾಂ ಎ.ಇ.ಇ. ಮಾಹಿತಿ ನೀಡಿದರು. ಸಭೆಗೆ ಸುಳ್ಯ ಮೆಸ್ಕಾಂ ಅಧಿಕಾರಿಗಳು ಬಂದಿರಲಿಲ್ಲ. ಸುಳ್ಯದ ಕುರಿತು ಮಾಹಿತಿ ನೀಡಬೇಕೆಂದು ಸದಸ್ಯರು ಒತ್ತಾಯಿಸಿದರು. ಇ.ಒ. ರಾಜಣ್ಣ ಮೆಸ್ಕಾಂ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಸಭೆಗೆ ಬರುವಂತೆ ಹೇಳಿದರು.
ಸುಳ್ಯದಲ್ಲಿ ವಾರದ ಯಾವ ದಿನವೂ ಸರಿಯಾಗಿ ಕರೆಂಟ್ ಇರುವುದಿಲ್ಲ. ಪ್ರತೀ ದಿನ ಕರೆಂಟ್ ಇಲ್ಲವೆಂದು ಪ್ರಕಟಣೆ ಹಾಕುತ್ತೀರಿ. ನೀವು ಇನ್ನು ಮುಂದೆ ಯಾವ ದಿನ ಕರೆಂಟ್ ಇದೆ ಎಂದು ಸ್ಪಷ್ಟವಾಗಿ ತಿಳಿಸಿ ಎಂದು ಸಭೆಯಲ್ಲಿದ್ದ ಸುಬ್ರಹ್ಮಣ್ಯ ಮೆಸ್ಕಾಂ ಅಧಿಕಾರಿಗೆ ಅಧ್ಯಕ್ಷ ಶಾಹುಲ್ ಹಮೀದ್ ಸೂಚನೆ ನೀಡಿದರು.
ಸಭೆಯಲ್ಲಿದ್ದ ಗ್ಯಾರಂಟಿ ಸದಸ್ಯರು ಸುಳ್ಯದ ವಿದ್ಯುತ್ ಕಣ್ಣಾಮುಚ್ಚಾಳೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಸಭೆಗೆ ಮೆಸ್ಕಾಂ ಸುಳ್ಯದ ಅಧಿಕಾರಿಗಳು ಬಾರದಿರುವ ಕುರಿತು ನೋಟೀಸು ನೀಡುವಂತೆ ಸಭೆಯಲ್ಲಿ ನಿರ್ಣಯಿಸಲಾಯಿತು.
ಮಗ ಹಣ ಡ್ರಾ ಮಾಡಿದ : ಗೃಹಲಕ್ಷ್ಮಿ ಯೋಜನೆ ಮಾಹಿತಿ ನೀಡುತ್ತಿದ್ದ ಸಂದರ್ಭ ಇ.ಒ. ರಾಜಣ್ಣರು ವಿಲೇವಾರಿ ಶಿಬಿರದ ಪ್ರಯೋಜನವನ್ನು ವಿವರಿಸಿದರು. ಮಂಡೆಕೋಲಿನಲ್ಲಿ ಶಿಬಿರ ಸಂದರ್ಭ ಮಹಿಳೆಯೊಬ್ಬರು ಹಣ ಬಂದಿಲ್ಲ ಎಂದು ದೂರು ಕೊಟ್ಟರು. ಸ್ಥಳದಲ್ಲಿ ಈ ಕುರಿತು ಪರಿಶೀಲನೆ ನಡೆಸಿ, ಬ್ಯಾಂಕ್ ಖಾತೆ ಪರಿಶೀಲಿಸಿದಾಗ ಆಕೆಯ ಖಾತೆಗೆ 13 ಕಂತು ಹಣ ಬಂದಿತ್ತು. ಆದರೆ ಆ ತಾಯಿ ಖಾತೆಯನ್ನೇ ಚೆಕ್ ಮಾಡಿರಲಿಲ್ಲ. ಶಿಬಿರದಲ್ಲಿ ಇದು ಗೊತ್ತಾಗಿ ಆಕೆ ಬಹಳ ಖುಷಿ ಪಟ್ಟಿದ್ದರು ಎಂದು ಒಂದು ಘಟನೆ ವಿವರಿಸಿದರೆ, ಇನ್ನೋಂದು ತಾಯಿಯೂ ಹಣ ಬಂದಿಲ್ಲ ಎಂದು ದೂರು ಕೊಟ್ಟಳು. ಖಾತೆ ಪರಿಶೀಲನೆ ನಡೆಸಿದಾಗ ಆಕೆಗೆ ದುಡ್ಡು ಬಂದಿದೆ. ಆದರೆ ಆಕೆಯ ಎಟಿಎಂ ಮಗನ ಕೈಯಲ್ಲಿದ್ದುದರಿಂದ ಆತ ಹಣ ಡ್ರಾ ಮಾಡಿದ್ದ. ಇವಳಿಗೆ ಅದು ಗೊತ್ತಾಗಲಿಲ್ಲ. ಅದನ್ನು ಮಗನು ಒಪ್ಪಿಕೊಂಡ ಎಂದು ಇನ್ನೊಂದು ಘಟನೆಯನ್ನು ವಿವರಿಸಿದರು. ಆದ್ದರಿಂದ ಫಲಾನುಭವಿಗಳು ಎಚ್ಚರಿಕೆಯಿಂದ ಇರಬೇಕು ಎಂದು ಅವರು ಹೇಳಿದರು.