ಸುಳ್ಯ ಆಸ್ಪತ್ರೆಯ ಆರೋಗ್ಯಾಧಿಕಾರಿಗೆ ಡಿ.ಎಚ್.ಒ.ರಿಂದ ಶೋಕಾಸ್ ನೋಟೀಸ್

” ಸರಕಾರಿ ಕಾರ್ಯಕ್ರಮದಲ್ಲಿ ಪ್ರೊಟೊಕಾಲ್ ಪಾಲನೆ ಕಡ್ಡಾಯವಾಗಿದ್ದು ಅಧಿಕಾರಿಗಳು ಇದನ್ನು ಪಾಲಿಸಬೇಕು. ಆದರೆ ಇದನ್ನು ಸುಳ್ಯ ಸರಕಾರಿ ಆಸ್ಪತ್ರೆಯ ಕಾರ್ಯಕ್ರಮ ಒಂದಕ್ಕೆ ಸಂಬಂಧಪಟ್ಟ ಅಧಿಕಾರಿಯವರು ಪಾಲಿಸಿಲ್ಲ” ಎಂದು ಆರೋಪಿಸಿ ಸುಳ್ಯ ಕಾಂಗ್ರೆಸ್ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಯವರು ಸುಳ್ಯ ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿದ ಘಟನೆ ವರದಿಯಾಗಿದೆ.
ಎ.5ರಂದು ಸುಳ್ಯ ಸರಕಾರಿ ಆಸ್ಪತ್ರೆಯ ಕಣ್ಣಿನ ಶಸ್ತ್ರ ಚಿಕಿತ್ಸಾ ಘಟಕಕ್ಕೆ ಸಂಬಂಧಿಸಿದ ಯಂತ್ರ ಒಂದರ ಉದ್ಘಾಟನಾ ಕಾರ್ಯಕ್ರಮದ ಆಮಂತ್ರಣ ಪತ್ರದಲ್ಲಿ ಸರಕಾರದಿಂದ ನೇಮಕಗೊಂಡ ಜನಪ್ರತಿನಿಧಿಗಳ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಹೆಸರು ಇಲ್ಲದೇ ಇದ್ದು ಪ್ರೊಟೊಕಾಲ್ ಪಾಲಿಸಿಲ್ಲ ಎಂದು ಸುಳ್ಯ ಕಾಂಗ್ರೆಸ್ ನ ಮುಖಂಡರುಗಳು ಅಸಮಾಧಾನಗೊಂಡಿದ್ದರು.
ಈ ಬಗ್ಗೆ ಗ್ಯಾರಂಟಿ ಅನುಷ್ಠಾನ ಸಮಿತಿಯ ಸುಳ್ಯ ತಾಲೂಕು ಅಧ್ಯಕ್ಷ ಹಮೀದ್ ಕುತ್ತಮೊಟ್ಟೆಯವರು ಪ್ರತಿಭಟನೆಯ ಪ್ರಕಟಣೆಯನ್ನು ನೀಡಿ, ಜಿಲ್ಲಾ ಉಸ್ತುವಾರಿ ಸಚಿವರಿಗೆ, ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ರವಾನಿಸಿದ್ದರು. ಇದೀಗ ಈ ಬಗ್ಗೆ ಬಂದ ಮಾಹಿತಿಯಂತೆ ಆಮಂತ್ರಣ ಪತ್ರದಲ್ಲಿ ಆಗಿರುವ ತಪ್ಪಿಗೆ ಕಾರಣ ಕೇಳಿ ಜಿಲ್ಲಾ ವೈದ್ಯಾಧಿಕಾರಿಯವರಿಂದ ಸುಳ್ಯ ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯವರಿಗೆ ನೋಟಿಸ್ ಬಂದಿರುತ್ತದೆ ಎಂದು ತಿಳಿದು ಬಂದಿದೆ.