ಬಹಿರಂಗ ಚರ್ಚೆಗೆ ಬರುವಂತೆ ಮಹೇಶ್ ಕರಿಕ್ಕಳರ ಸವಾಲಿಗೆ ಪಂಜ ಗ್ರಾಮ ಪಂಚಾಯತ್ ಪ್ರತಿಕ್ರಿಯೆ

0

ಪಂಜ ದೇವಸ್ಥಾನದ ಜಾತ್ರೆಯ ಸಂದರ್ಭ ತಾತ್ಕಾಲಿಕ ಸಂತೆ ಅಂಗಡಿಗಳಿಂದ ಪಂಜ ಗ್ರಾಮ ಪಂಚಾಯತ್ ನವರು ಕರ ವಸೂಲಿ ಮಾಡಿರುವುದನ್ನು ವಿರೋಧಿಸಿರುವ ದೇವಸ್ಥಾನದ ಗೌರವ ಸಲಹೆಗಾರರು ಹಾಗೂ ಕಲ್ಮಡ್ಕ ಗ್ರಾ.ಪಂ. ಅಧ್ಯಕ್ಷ ಮಹೇಶ್ ಕುಮಾರ್ ಕರಿಕ್ಕಳರವರು ಆ ಬಗ್ಗೆ ಬಹಿರಂಗ ಚರ್ಚೆಗೆ ಬರುವಂತೆ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಪಂಜ ಗ್ರಾಮ ಪಂಚಾಯತ್ ” ಪಂಜ ದೇಗುಲವು ಪಂಜ ಗ್ರಾಮ ಪಂಚಾಯತು ವ್ಯಾಪ್ತಿಗೆ ಬರುವುದರಿಂದ ಅದರ ಹೊಣೆ ಅರಿತು ದೇಗುಲದ ವ್ಯವಸ್ಥಾಪನಾ ಸಮಿತಿ ಅಪೇಕ್ಷೆ ಪಟ್ಟ ಸೌಲಭ್ಯವನ್ನು ಗ್ರಾಮ ಪಂಚಾಯತ್‌ನ ಇತಿಮಿತಿ ಒಳಗೆ ಮಾಡಿಕೊಟ್ಟಿದೆ. ಉದಾ: ಮಾನ್ಯ ಶಾಸಕರಲ್ಲಿ ಮನವಿ ಮಾಡಿ ದೇಗುಲದ ಎದುರುಗಡೆಯ ಮೈದಾನವನ್ನು ಸಮತಟ್ಟುಗೊಳಿಸಲು ಸುಮಾರು 10 ಲಕ್ಷ ಅನುದಾನಕ್ಕೆ ಬೇಡಿಕೆ ಇಟ್ಟು ಕಾಮಗಾರಿ ನಡೆಸಲಾಗಿದೆ. ಜಾತ್ರಾ ಸಂದರ್ಭದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಶೌಚಾಲಯ ನಿರ್ಮಾಣ ಮಾಡಿಕೊಡಲಾಗಿದೆ. ಅಲ್ಲದೇ ದಾರಿ ದೀಪ ವಿಸ್ತರಣೆ ಮತ್ತು ದುರಸ್ಥಿ, ಜಾತ್ರಾ ಸಮಯದಲ್ಲಿ ಪಂಚಾಯತಗೆ ಕಾದಿರಿಸಿದ್ದ ಸ್ಥಳವನ್ನು ವಾಹನ ಪಾರ್ಕಿಂಗ್ ಗಾಗಿ ನೀಡಿದ್ದು, ದೇಗುಲದ ಅಭಿವೃದ್ಧಿ ಕಾರ್ಯ ನಡೆಯುವ ಸಂದರ್ಭದಲ್ಲಿ ನೀರಿನ ವ್ಯವಸ್ಥೆಯನ್ನು ಮಾಡಿದೆ. ದೇಗುಲದ ಅಭಿವೃದ್ಧಿಯ ಸಂದರ್ಭದಲ್ಲಿ ಕೆಲಸಗಾರರಿಗೆ ಉಳಿದುಕೊಳ್ಳಲು ಪಂಚಾಯತ್ ಕಟ್ಟಡವನ್ನು ಬಾಡಿಗೆ ರಹಿತವಾಗಿ, ವಿದ್ಯುತ್ ಶುಲ್ಕ ರಹಿತವಾಗಿ ಒದಗಿಸಿಕೊಟ್ಟಿದೆ. ಇನ್ನೂ ಅನೇಕ ರೀತಿಯ ಸಹಕಾರವನ್ನು ಗ್ರಾಮ ಪಂಚಾಯತು ದೇಗುಲಕ್ಕೆ ನೀಡುತ್ತಾ ಬಂದಿದೆ. ಇವೆಲ್ಲಾ ವ್ಯವಸ್ಥಾಪನಾ ಸಮಿತಿಯ ಗೌರವ ಸಲಹೆಗಾರರಾದ ತಮಗೆ ತಿಳಿಯದಿರುವುದು ದೌರ್ಭಾಗ್ಯಕರ. ಕೊಡುಗೆಯ ಬಗ್ಗೆ ಮಾತನಾಡಿದ್ದೀರಿ. ಸಾರ್ವಜನಿಕ ಸೇವೆಗೆ ಹತ್ತಿರವಾಗಬೇಕೆಂಬ ಉದ್ದೇಶ ಹಾಗೂ ಸೌಲಭ್ಯಗಳು ಸಾರ್ವಜನಿಕರಿಗೆ ವೇಗವಾಗಿ ನೀಡುವ ಆಶಯದಿಂದ, ಪಂಚಾಯತ್ ರಾಜ್ ವ್ಯವಸ್ಥೆಯು 1993ರಲ್ಲಿ ಜಾರಿಗೆ ಬಂದು ಅಧಿಕಾರ ವಿಕೇಂದ್ರಿಕರಣವಾಗಿರುತ್ತದೆ. ಹೊರತಾಗಿ ಕೊಡುಗೆ ನೀಡುವ ಉದ್ದೇಶಕ್ಕೆ ಅಲ್ಲ.

ಬಲಾತ್ಕಾರವಾಗಿ ಕರ ವಸೂಲಿ ಮಾಡಿದ್ದಾರೆಂಬ ವಿಚಾರದ ಬಗ್ಗೆ: ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ವ್ಯವಸ್ಥೆಯು ಗ್ರಾಮ ಮಟ್ಟದ ಸರಕಾರವಾಗಿದ್ದು ವ್ಯವಸ್ಥೆಯ ಅಡಿಯಲ್ಲಿ ಸಂಬಂಧಪಟ್ಟ ಎಲ್ಲಾ ದೇವಸ್ಥಾನ, ಶಾಲಾ ಕಾಲೇಜುಗಳು ಹಾಗೂ ಗ್ರಾಮ ಮಟ್ಟದ ಎಲ್ಲಾ ಇಲಾಖೆಗಳು ಗ್ರಾಮ ಪಂಚಾಯತ್ ಅಧೀನಕ್ಕೆ ಬರುತ್ತವೆ. ಕಾನೂನು ರೀತಿಯಲ್ಲಿ ಎಲ್ಲಾ ಪರವಾನಿಗೆ ನೀಡುವ ಹಾಗೂ ದರಗಳನ್ನು ನಿಗದಿಪಡಿಸಿ ಕರ ವಸೂಲಿ ಮಾಡುವ ಹಕ್ಕು ಪಂಚಾಯತು ಹೊಂದಿರುತ್ತದೆ. ಈ ವಿಚಾರ ಪಂಚಾಯತ್ ಅಧ್ಯಕ್ಷರಾದ ತಮಗೆ ತಿಳಿದಿದೆಯೆಂದು ಭಾವಿಸುತ್ತೇವೆ. ಅದಲ್ಲದೇ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರ ಸಮಕ್ಷಮ ಮಾತನಾಡಿ ಪೋಲೀಸ್ ಸಿಬ್ಬಂದಿಗಳ ಜೊತೆಯಲ್ಲಿ ಗ್ರಾಮ ಪಂಚಾಯತು ಸಿಬ್ಬಂದಿಗಳು ಶುಲ್ಕ ವಸೂಲಿ ಮಾಡಿರುತ್ತಾರೆ. ಇದು ಯಾವ ಅರ್ಥದಲ್ಲಿ ಅಕ್ರಮವೆಂದು ತಿಳಿಸಿ.

ಕಾನೂನು ಪುಸ್ತಕ ಹಿಡಿದು ಬರುವ ಅವಶ್ಯಕತೆ ಏನಿದೆ?
ಪಂಚಾಯತ್ ರಾಜ್ ನಿಯಮದ ಪ್ರಕಾರ ಸ್ಥಳೀಯವಾಗಿ ಸಂಪನ್ಮೂಲ ಕ್ರೋಢೀಕರಿಸಲು ಕಾನೂನು ಬದ್ಧವಾಗಿ ಎಲ್ಲಾ ಮೂಲಗಳಿಂದ ಶುಲ್ಕ ವಿಧಿಸಿ ಕರ ವಸೂಲಿ ಮಾಡುವ ಅಧಿಕಾರ ಗ್ರಾಮ ಪಂಚಾಯತ್ ಗೆ ಇದೆ. ತಾವೊಬ್ಬ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿರುವ ಕಾರಣ ತಮಗೆ ಪ್ರತ್ಯೇಕ ತಿಳಿಸುವ ಅವಶ್ಯಕತೆ ಇಲ್ಲ. ಮತ್ತೆ ಕಾನೂನು ಪುಸ್ತಕ ಹಿಡಿದು ಬರುವ ಆವಶ್ಯಕತೆ ನಮಗೆ ಕಾಣುವುದಿಲ್ಲ.

ನಾನು ಇಲ್ಲದಿರುವ ಸಂದರ್ಭ ಸಮಿತಿ ಅಧ್ಯಕ್ಷರಲ್ಲಿ ಮಾತನಾಡಿ ಹೋಗಿರುತ್ತೀರಿ ಎಂದಿದ್ದೀರಿ. ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನವು ಪಂಜ ಗ್ರಾಮ ಪಂಚಾಯತು ವ್ಯಾಪ್ತಿಗೆ ಬರುವ ಕಾರಣ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರ ಜೊತೆ ಮಾತನಾಡದೇ ಮತ್ತೆ ಯಾರ ಜೊತೆ ಮಾತನಾಡಲಿ? ನೀವು ವ್ಯವಸ್ಥಾಪನಾ ಸಮಿತಿಗೆ ಗೌರವ ಸಲಹೆಗಾರರು ಹೊರತು ಪಂಜ ಗ್ರಾಮ ಪಂಚಾಯತ್ ಗೆ ಅಲ್ಲ. ಒಂದು ವೇಳೆ ನಾವು ಸಂತೆಯಲ್ಲಿ ಕರ ವಸೂಲಿ ಮಾಡಿದ್ದು ತಪ್ಪು ಎಂದು ಕಂಡುಬಂದರೆ ಕಾನೂನು ಪ್ರಾಧಿಕಾರಗಳಿವೆ. ಅದು ಬಿಟ್ಟು ಒಂದು ಪಂಚಾಯತ್ ಅಧ್ಯಕ್ಷರಾಗಿ ಮತ್ತೊಂದು ಪಂಚಾಯತ್‌ಗೆ ಬರುವ ಆದಾಯಕ್ಕೆ ಹಸ್ತಕ್ಷೇಪ ಮಾಡುವುದು ಎಷ್ಟು ಸಮಂಜಸ? ಇದರಿಂದಾಗಿ ಸಮಾಜದ ಸ್ವಾಸ್ಥ್ಯ ಹಾಳಾಗುವುದಲ್ಲದೇ ಮತ್ತೇನೂ ಪ್ರಯೋಜನ ? ಈ ಬಗ್ಗೆ ಪಂಜ ಗ್ರಾಮ ಪಂಚಾಯತ್ ಆಡಳಿತ ಮಂಡಳಿಗೆ ಮಾರ್ಗದರ್ಶನ ಮಾಡಿ ಸರಿ ದಾರಿಯಲ್ಲಿ ಕೊಂಡು ಹೋಗುವ ಸಾಕಷ್ಟು ಹಿರಿಯರಿದ್ದಾರೆ. ನಾನು ಹೇಳಿದ್ದೇ ನಡೆಯಬೇಕೆಂಬಲ್ಲಿ ಮಾತ್ರ ಇಂಥಹ ಸಮಸ್ಯೆ ಉದ್ಭವವಾಗುತ್ತದೆ. ಹಾಗಾಗಿ ಈ ವಿಚಾರವನ್ನು ಮುಂದುವರಿಸಿಕೊಂಡು ಹೋಗಿ ಸಮಾಜದ ಸ್ವಾಸ್ಥ್ಯ ಹಾಳು ಮಾಡಲು ನಮಗೆ ಇಷ್ಟವಿರುವುದಿಲ್ಲ ” ಪಂಜ ಗ್ರಾಮ ಪಂಚಾಯತು ತಿಳಿಸಿದೆ.