ದೇಶದ ಪ್ರತಿಷ್ಠಿತ 12 ಕ್ರೀಡಾ ತಂಡಗಳು, ಕ್ರೀಡಾಪಟುಗಳು ಭಾಗಿ
ಪಂದ್ಯಾಟದಿಂದ ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹ – ಹರೀಶ್ ಆರಿಕೋಡಿ
ಶಾರೀರಿಕ ಬೆಳವಣಿಗೆಗೆ ಕಬಡ್ಡಿ ಪಂದ್ಯಾಟ – ನಳಿನ್ ಕುಮಾರ್ ಕಟೀಲು
ಗ್ರಾಮೀಣ ಕ್ರೀಡಾಪಟುಗಳು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಾಗಬೇಕು – ಎಸ್.ಎನ್.ಮನ್ಮಥ

ಗೆಳೆಯರ ಬಳಗ ಐವರ್ನಾಡು ಇದರ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಅಮೆಚೂರು ಕಬಡ್ಡಿ ಅಸೋಸಿಯೇಷನ್, ದ.ಕ.ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಷನ್ ಮಂಗಳೂರು ಹಾಗೂ ಸುಳ್ಯ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಷನ್ ಇವರ ಸಹಭಾಗಿತ್ವದಲ್ಲಿ ಆಹ್ವಾನಿತ 12 ತಂಡಗಳ ಅಂತರ್ ರಾಜ್ಯ ಮಟ್ಟದ ಹೊನಲು ಬೆಳಕಿನ ಪುರುಷರ ಕಬಡ್ಡಿ ಪಂದ್ಯಾಟಕ್ಕೆ ಫೆ.22 ರಂದು ಐವರ್ನಾಡು ಸ.ಪ.ಪೂ.ಕಾಲೇಜು ಮೈದಾನದಲ್ಲಿ ಚಾಲನೆ ನೀಡಲಾಯಿತು.

ಆರಿಕೋಡಿ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ ದೀಪ ಬೆಳಗಿಸಿ ಕ್ರೀಡಾ ಕೂಟ ಉದ್ಘಾಟಿಸಿ ಗ್ರಾಮೀಣ ಪ್ರದೇಶದಲ್ಲಿ ಕ್ರೀಡಾಕೂಟವನ್ನು ಆಯೋಜಿಸಿರುವುದು ಅಭಿನಂದನೀಯ ಇದರಿಂದ ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹ ಸಿಗುವಂತಾಗಿದೆ ಎಂದು ಹೇಳಿದರು.ಗೆಳೆಯರ ಬಳಗದ ಸಂಘಟನೆ ಮುಖಾಂತರ ಇನ್ನೂ ಹೆಚ್ಚು ಕ್ರೀಡಾಕೂಟಗಳು ನಡೆಯಲಿ ಎಂದು ಶುಭಹಾರೈಸಿದರು.

ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ ಕಬಡ್ಡಿ ಜಗತ್ತಿನ ಆಟವಾಗಿದ್ದು ಶಾರೀರಿಕ ಬೆಳವಣಿಗೆಗೆ ಕಸರಣವಾಗಿದೆ ಎಂದು ಹೇಳಿದರು.
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ ಮಾತನಾಡಿ ಐವರ್ನಾಡಿನಲ್ಲಿ ಹಳೆ ನೆನಪನ್ನು ಮೆಲುಕು ಹಾಕುವ ಕೆಲಸ ಆಗಿದೆ.ಯುವ ಜನಾಂಗ ಕಬಡ್ಡಿಯತ್ತ ಆಕರ್ಷಿತರಾಗಿದ್ದಾರೆ ಎಂದು ಹೇಳಿದರು.
ಗೆಳೆಯರ ಬಳಗದ ಗೌರವಾಧ್ಯಕ್ಷ ಹಾಗೂ ಪಂದ್ಯಾಟದ ನೇತೃತ್ವ ವಹಿಸಿದ್ದ ಎಸ್.ಎನ್.ಮನ್ಮಥರವರು ಸ್ವಾಗತಿಸಿ ,ಪ್ರಾಸ್ತಾವಿಕವಾಗಿ ಮಾತನಾಡಿ ಯುವಕರ ಒಕ್ಕೊರಳಿನ ತೀರ್ಮಾನದಂತೆ ಎಲ್ಲರೂ ಒಗ್ಗೂಡಿ ಪಂದ್ಯಾಟ ಹಮ್ಮಿಕೊಂಡಿದ್ದೇವೆ.
ಗ್ರಾಮೀಣ ಪ್ರದೇಶದಲ್ಲಿ ಮ್ಯಾಟ್ ಕಬಡ್ಡಿ ನಡೆಯಬೇಕು,ಗ್ರಾಮೀಣ ಪ್ರತಿಭೆಗಳು ರಾಜ್ಯ,ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತಾಗಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಬಿ.ಕೆ.ಮಾಧವ, ಕಾರ್ಯದರ್ಶಿ ಚಂದ್ರಶೇಖರ ಕರ್ಣ, ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷ ದಯಾನಂದ ಕಟ್ಟತ್ತಾರು,ಗ್ರಾಮ ಪಂಚಾಯತ್ ಉಪಾಧ್ಯಕ್ಷ ಬಾಲಕೃಷ್ಣ ಕೀಲಾಡಿ,ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯ.ಸ.ಅಧ್ಯಕ್ಷ ರಾಜೇಶ್ ಭಟ್ ಬಾಂಜಿಕೋಡಿ, ಕಾಲೇಜಿನ ಪ್ರಾಂಶುಪಾಲ ಮಹಮ್ಮದ್ ಇಸಾಕ್, ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಸೂಫಿ ಪೆರಾಜೆ, ಶಿಕ್ಷಕ ನಾರಾಯಣ ಬೊಳ್ಳೂರು,ಗೆಳೆಯರ ಬಳಗದ ಸಂಚಾಲಕ ವಾಸುದೇವ ಬೊಳುಬೈಲು,ಅಧ್ಯಕ್ಷ ಸಾತ್ವಿಕ್ ಕುದುಂಗು,ಪ್ರ.ಕಾರ್ಯದರ್ಶಿ ಪ್ರಮೋದ್ ಕಣಿಲೆಗುಂಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀಮತಿ ದೇವಕಿ ಚೆಮ್ನೂರು ಪ್ರಾರ್ಥಿಸಿ, ನವೀನ್ ಬಾಂಜಿಕೋಡಿ ಕಾರ್ಯಕ್ರಮ ನಿರೂಪಿಸಿ,
ಸ್ವಾಗತ ಸಮಿತಿ ಸಂಚಾಲಕ ದಿನೇಶ್ ಮಡ್ತಿಲ ವಂದಿಸಿದರು.

ಕ್ರೀಡಾಕೂಟಕ್ಕೆ ಚಾಲನೆ
ಸಭಾ ಕಾರ್ಯಕ್ರಮದ ಮೊದಲು ಪ್ರಗತಿಪರ ಕೃಷಿಕರು, ಹಿರಿಯರಾದ ಕೊರಗಪ್ಪ ಗೌಡ ಪೂಜಾರಿಮನೆಯವರು ತೆಂಗಿನಕಾಯಿ ಹೊಡೆಯುವುದರ ಮೂಲಕ ಪಂದ್ಯಾಟಕ್ಕೆ ಚಾಲನೆ ನೀಡಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಗೆಳೆಯರ ಬಳಗದ ಗೌರವಾಧ್ಯಕ್ಷರು,ಸಂಚಾಲಕರು,ಅಧ್ಯಕ್ಷರು ಹಾಗೂ ಎಲ್ಲಾ ಪದಾಧಿಕಾರಿಗಳು,ಸದಸ್ಯರು,ಪಂದ್ಯಾಟದ ತೀರ್ಪುಗಾರರು,ಕ್ರೀಡಾಪಟುಗಳು,ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.

ಪಂದ್ಯಾಟಕ್ಕೆ ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ನ ಚೇರ್ ಮೆನ್ ರಾಕೇಶ್ ಮಲ್ಲಿ,ಎ.ಪಿ.ಎಂ.ಸಿ.ಮಾಜಿ ಅಧ್ಯಕ್ಷ ಜಾಕೆ ಮಾಧವ ಗೌಡ,ಪಾಪ್ಯುಲರ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಪಿ.ಬಿ.ದಿವಾಕರ ರೈ ಸೇರಿದಂತೆ ಹಲವಾರು ಜನ ರಾಜಕೀಯ ಮುಖಂಡರು,ಕ್ರೀಡಾಪಟುಗಳು, ಗಣ್ಯರು ಆಗಮಿಸಿ ಪಂದ್ಯಾಟ ವೀಕ್ಷಿಸಿ ಶುಭಹಾರೈಸಿದರು.