15 ದಿನಗಳ ಕಾಲ ಹಲವೆಡೆ ಅಧ್ಯಯನ ಭೇಟಿ ನಡೆಸಿ, ಮಾಹಿತಿ ಪಡೆದ ವಿದ್ಯಾರ್ಥಿಗಳು
ವಿದ್ಯಾರ್ಥಿಗಳಲ್ಲಿ ಜೀವನ ಕೌಶಲವನ್ನು ಬೆಳೆಸುವ ಉದ್ದೇಶದಿಂದ ಸ.ಪ.ಪೂ.ಕಾಲೇಜು ಸುಳ್ಯ ಇದರ 8 ಮತ್ತು 9 ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ನಡೆದ ಕಲರವ ವಿಶೇಷ ಶಿಬಿರವು ಮಾ.17 ಸೋಮವಾರ ಸಮಾಪನಗೊಳ್ಳಲಿದೆ. 15 ದಿವಸಗಳ ಈ ಶಿಬಿರದಲ್ಲಿ ಸುಮಾರು 90 ವಿದ್ಯಾರ್ಥಿಗಳು ಭಾಗವಹಿಸಿ ವಿವಿಧ ಚಟುವಟಿಕೆಗಳು ಹಾಗೂ ಕ್ಷೇತ್ರ ಭೇಟಿಗಳ ಮೂಲಕ ಜೀವನ ಅನುಭವ ಪಡೆದರು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಅವರಿಂದ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ಗ್ರಾಮ ಪಂಚಾಯತ್ ಗಳ ಕುರಿತು, ಕಲಾವಿದ ಪುರುಷೋತ್ತಮ ಎಂ.ಎಸ್. ಇವರಿಂದ ಕರಕುಶಲತೆ ಬಗ್ಗೆ, ಶಿಕ್ಷಕರಾದ ಇಬ್ರಾಹಿಂ ಗಾಂಧಿನಗರ ಇವರಿಂದ ಸರಳ ಪ್ರಯೋಗಗಳ ಬಗ್ಗೆ , ನಾಗರಾಜ ಪೆರ್ಲಂಪಾಡಿ ಇವರಿಂದ ಹಾಡುಗಾರಿಕೆ, ಹೇಮಂತ್ ಉಡುಪಿ ಇವರಿಂದ ಜನಪದ ನೃತ್ಯ, ಕೃಷ್ಣಪ್ಪ ಬಂಬಿಲ ಇವರಿಂದ ರಂಗಭೂಮಿ, ದುರ್ಗಾ ಕುಮಾರ್ ನಾಯರ್ ಕೆರೆ ಇವರಿಂದ ಪತ್ರಿಕೋದ್ಯಮ ಕುರಿತು, ಅರವಿಂದ ಕುಡ್ಲ ಇವರಿಂದ ಪರಿಸರ ಮತ್ತು ಪಕ್ಷಿ ವೀಕ್ಷಣೆ, ಪಟ್ಟಾಭಿರಾಮ ಸುಳ್ಯ ಇವರಿಂದ ಮಿಮಿಕ್ರಿ ಮತ್ತು ಶ್ಯಾಡೋ ಪ್ಲೇ, ಚಂದ್ರಮತಿ ಮತ್ತು ಮಮತಾ ಅವರಿಂದ ಕಥೆ ಕವನ ರಚನೆ ಇತ್ಯಾದಿ ವಿಷಯಗಳ ಬಗ್ಗೆ ಸೋದಾರಣ ಮಾಹಿತಿಗಳನ್ನು ಶಿಬಿರಾರ್ಥಿಗಳು ಪಡೆದರು. ಕ್ಷೇತ್ರ ಭೇಟಿಯಲ್ಲಿ ತಾಲೂಕು ಪಂಚಾಯತ್ ಸುಳ್ಯ, ಅರಂಬೂರು ಫೈವುಡ್ ಕಾರ್ಖಾನೆ, ಅರಂಬೂರಿನ ಮರದ ಡಿಪೋ, ಸ್ನೇಹ ಶಾಲೆ ಸುಳ್ಯ, ಗಾಂಧಿನಗರ ಕೆಪಿಎಸ್ ಶಾಲೆಯ ವಿಜ್ಞಾನ ಪ್ರಯೋಗಾಲಯ, ಕೆವಿಜಿ ಮೆಡಿಕಲ್ ಕಾಲೇಜ್, ಕೆವಿಜಿ ಆಯುರ್ವೇದ ಕಾಲೇಜ್, ಪ್ರೆಸ್ ಕ್ಲಬ್ಬಿನ ಪತ್ರಿಕಾ ಭವನ ಸುಳ್ಯ, ಕನ್ನಡ ಭವನ ಸುಳ್ಯ ಇಲ್ಲಿಗೆ ಭೇಟಿ ನೀಡಿ ಪರಿಣತರಿಂದ ವಿಶೇಷ ಮಾಹಿತಿಗಳನ್ನು ಶಿವಿರಾರ್ಥಿಗಳು ಪಡೆದರು.
ಸುಳ್ಯದ ಶಾಸಕರಾದ ಭಾಗೀರಥಿ ಮುರುಳ್ಯ ಇವರ ಜೊತೆ ಸಂವಾದ, ಪತ್ರಿಕಾ ಭವನದಲ್ಲಿ ಪತ್ರಕರ್ತರ ಜೊತೆ ನೇರ ಸಂವಾದ, ಸುಳ್ಯ ನ್ಯಾಯಾಲಯದ ಕಲಾಪಗಳ ನೇರ ವೀಕ್ಷಣೆ, ಬಂಟಮಲೆಗೆ ಅಧ್ಯಯನ ಪ್ರವಾಸ ಇವು ಶಿಬಿರದ ವಿಶೇಷತೆಗಳಲ್ಲಿ ಕೆಲವು. ಸರಕಾರಿ ಜ್ಯೂ.ಕಾಲೇಜಿನ ಉಪಪ್ರಾಂಶುಪಾಲರಾದ ಪ್ರಕಾಶ ಮೂಡಿತ್ತಾಯ ಇವರ ನಿರ್ದೇಶನದಲ್ಲಿ ನಡೆದ ಶಿಬಿರವನ್ನು ಶಿಕ್ಷಕರಾದ ಚಂದ್ರಾವತಿ ಹಾಗೂ ಜಲಜಾಕ್ಷಿ ಸಂಘಟಿಸಿದ್ದರು.
ಶಿಬಿರದ ಕೊನೆಯ ದಿನವಾದ ಮಾ. 17 ರಂದು ವಸ್ತುಪ್ರದರ್ಶನ, ವಿಜ್ಞಾನ ಪ್ರಯೋಗಗಳು, ವಿವಿಧ ಸಾಹಿತ್ಯ ರಚನೆಗಳ ಬಿಡುಗಡೆ, ರಂಗಚಟುವಟಿಕೆ, ಹಾಡು, ಅನುಭವ ಕಥನ ಇತ್ಯಾದಿ ಕಾರ್ಯಕ್ರಮಗಳನ್ನು ಶಿಬಿರಾರ್ಥಿಗಳೇ ಸಂಘಟಿಸಲಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೃಷ್ಣಪ್ಪ, ಸಮನ್ವಯಾಧಿಕಾರಿಗಳಾದ ಶೀತಲ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸುಧಾಕರ ರೈ, ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ರಾಜೇಶ್ವರಿ ಕಾಡುತೋಟ, ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷರಾದ ವಿಜಯಕುಮಾರ್,ಸಿ.ಆರ್.ಪಿ. ಮಮತಾ ಪಡಂಬೈಲು, ಪ್ರಸನ್ನ ಐವರ್ನಾಡು, ಲೋಕೇಶ್ ಊರುಬೈಲ್ ಇವರು ಶಿಬಿರಕ್ಕೆ ಭೇಟಿ ನೀಡಿದರು.