ಕೋಲ್ಚಾರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ
ಪುಷ್ಠಿ ಗೌರವದೊಂದಿಗೆ ಶಾಲಾ ಶಿಕ್ಷಣ ಇಲಾಖೆಯಿಂದ 1 ಲಕ್ಷ ನಗದು ಲಭಿಸಿದೆ.
ಶಾಲಾ ಶಿಕ್ಷಣ ಇಲಾಖೆಯಿಂದ ಅತ್ಯುತ್ತಮ ಶಾಲಾ ನಿರ್ವಹಣೆ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಸಂಬಂಧಿಸಿ ಸಮಗ್ರ ಸಮೀಕ್ಷೆ ನಡೆಸಲಾಗಿದ್ದು ಸಮೀಕ್ಷೆಯಲ್ಲಿ ಸುಳ್ಯ ತಾಲೂಕಿನ ಎಲ್ಲಾ ಕಿರಿಯ ಪ್ರಾಥಮಿಕ ,ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಇಲಾಖೆಯ ವಿದ್ಯಾವಾಹಿನಿ ಪೋರ್ಟಲ್ ನಲ್ಲಿ ಪ್ರಸ್ತಾವನೆ ಸಲ್ಲಿಸಿದ್ದವು.



ಆಯಾ ಕ್ಲಸ್ಟರ್ ಸಿ .ಆರ್. ಪಿ ಗಳು ಪರಿಶೀಲಿಸಿ ಮುಂದಿನ ಹಂತಕ್ಕೆ ವರದಿ ಮಾಡಿದ್ದರು. ಪ್ರಥಮ ಹಂತದಲ್ಲಿ 3 ಪ್ರೌಢ ಶಾಲೆಗಳು, 3 ಕಿರಿಯ ಪ್ರಾಥಮಿಕ ಶಾಲೆಗಳು ಹಾಗೂ 3 ಹಿರಿಯ ಪ್ರಾಥಮಿಕ ಶಾಲೆಗಳು ತಾಲೂಕು ಹಂತದಲ್ಲಿ ಆಯ್ಕೆಯಾಗಿದ್ದವು. ಆಯ್ಕೆಯಾದ 9 ಶಾಲೆಗಳನ್ನು ಸಮನ್ವಯಾಧಿಕಾರಿಗಳು ಬಿ .ಆರ್ .ಪಿ ಗಳು ಸೂಕ್ಷ್ಮವಾಗಿ ಪರಿಶೀಲಿಸಿ ವರದಿ ಸಲ್ಲಿಸಿದ್ದರು. ಬಳಿಕ ಕ್ಷೇತ್ರ ಶಿಕ್ಷಣಾಧಿಕಾರಿಗಳ ತಂಡ ಶಾಲೆಗಳಿಗೆ ಭೇಟಿ ನೀಡಿ ಸಮಗ್ರ ಸಮೀಕ್ಷೆಯನ್ನು ನಡೆಸಿದರು. ಅಂತರ್ ಶಾಲಾ ಎಸ್. ಡಿ. ಎಂ. ಸಿ ಸದಸ್ಯರ ತಂಡ ಮತ್ತು ಮುಖ್ಯ ಶಿಕ್ಷಕರು ಶಾಲೆಗೆ ಭೇಟಿ ನೀಡಿ ಇಲಾಖೆಗೆ ವರದಿ ಸಲ್ಲಿಸಿದ್ದರು. ವರದಿಗಳ ಆಧಾರದ ಮೇಲೆ 3 ಶಾಲೆಗಳು ಜಿಲ್ಲಾ ಹಂತಕ್ಕೆ ಆಯ್ಕೆ ಯಾಗಿತ್ತು.ಈ ಮೂರು ಶಾಲೆಗಳ ಸಮೀಕ್ಷೆಗಾಗಿ ಜಿಲ್ಲಾ ಉಪನಿರ್ದೇಶಕರು ಆಡಳಿತ ಮತ್ತು ಜಿಲ್ಲಾ ಉಪನಿರ್ದೇಶಕರ ಅಭಿವೃದ್ಧಿ ಇವರ ತಂಡವು ಭೇಟಿ ನೀಡಿ ಸಮಗ್ರ ಸಮೀಕ್ಷೆ ಕೈಗೊಂಡಿತು. ಶಾಲೆಯ ಬೆಳವಣಿಗೆಗೆ ಎಸ್. ಡಿ. ಎಂ. ಸಿ ಯ ಕೊಡುಗೆ, ಮಕ್ಕಳ ಶೈಕ್ಷಣಿಕ ಬೆಳವಣಿಗೆ, ಶಿಕ್ಷಕರ ಕಾರ್ಯಕ್ಷಮತೆ, ಅಡುಗೆ ಸಿಬ್ಬಂದಿಗಳ ಕಾರ್ಯ ಚಟುವಟಿಕೆ, ಪೋಷಕರ ಪಾಲ್ಗೊಳ್ಳುವಿಕೆ, ಹಿರಿಯ ವಿದ್ಯಾರ್ಥಿಗಳ ಕೊಡುಗೆ ಮತ್ತು ಪಾಲ್ಗೊಳ್ಳುವಿಕೆ ಹಾಗೂ ಸಂಘ ಸಂಸ್ಥೆಯವರ ಕೊಡುಗೆಗಳು ಮತ್ತು ಪಾಲ್ಗೊಳ್ಳುವಿಕೆ ಹಾಗೂ ಎಲ್ಲದಕ್ಕಿಂತ ಮುಖ್ಯವಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟದ ಬಗ್ಗೆ ಸವಿಸ್ತಾರವಾಗಿ ಪರಿಶೀಲಿಸಿ ರಾಜ್ಯಕ್ಕೆ ವರದಿ ಸಲ್ಲಿಸಿದರು.
ಎಲ್ಲಾ ಹಂತದ ಸಮೀಕ್ಷೆಯಲ್ಲೂ ಕೋಲ್ಚಾರು ಶಾಲೆ ಉತ್ತಮನಿರ್ವಹಣೆಯಾಗಿದ್ದು ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಇಲಾಖೆ, ಸಮಗ್ರ ಶಿಕ್ಷಣ ಕರ್ನಾಟಕ 1 ಲಕ್ಷ ನಗದು ಹಾಗೂ ಮತ್ತು ಪುಷ್ಠಿ ಗೌರವ ನೀಡಿದೆ.