ಜಾಲ್ಸೂರು ಗ್ರಾ.ಪಂ. ಉಪಾಧ್ಯಕ್ಷೆ ತಿರುಮಲೇಶ್ವರಿಯವರ ವಿರುದ್ಧ ಅವಿಶ್ವಾಸ ಗೊತ್ತುವಳಿಗೆ ದಿನ ನಿಗದಿ

0

ಮಾ.29ರಂದು ಎ.ಸಿ. ನೇತೃತ್ವದಲ್ಲಿ ಸಭೆ

ಜಾಲ್ಸೂರು ಗ್ರಾಮದ ಪಂಚಾಯತ್ ಉಪಾಧ್ಯಕ್ಷರಾಗಿರುವ ತಿರುಮಲೇಶ್ವರಿ ಅರ್ಭಡ್ಕರ ವಿರುದ್ಧ ಅವಿಶ್ವಾಸ ಗೊತ್ತುವಳಿಗೆ ಪಂಚಾಯತ್ ಅಧ್ಯಕ್ಷರು ಸೇರಿ ೧೩ ಮಂದಿ ಸದಸ್ಯರು ಸಹಿ ಹಾಕಿದ್ದಾರೆ. ಮಾ.೩ರಂದು ಈ ಪತ್ರವನ್ನು ಪಂಚಾಯತ್ ಸದಸ್ಯ ಪುತ್ತೂರು ಸಹಾಯಕ ಕಮಿಷನರ್‌ರಿಗೆ ನೀಡಿದ್ದು, ಅವಿಶ್ವಾಸ ನಿರ್ಣಯ ಗೊತ್ತುವಳಿಗೆ ಮಾ.೨೯ರಂದು ಶನಿವಾರ ದಿನ ನಿಗದಿ ಮಾಡಲಾಗಿದೆ.
ಪಂಚಾಯತ್ ಉಪಾಧ್ಯಕ್ಷರಾಗಿರುವ ತಿರುಮಲೇಶ್ವರಿ ಅರ್ಭಡ್ಕರವರು ಪಂಚಾಯತ್ ಸದಸ್ಯರೊಂದಿಗೆ ಬೇಜವಾಬ್ದಾರಿ ವರ್ತನೆ, ಉದ್ಧಟತನದಿಂದ ವರ್ತಿಸುತ್ತಿರುವುದರಿಂದ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಗೊತ್ತುವಳಿ ಕೈಗೊಂಡು ಜಾಲ್ಸೂರು ಗ್ರಾಮ ಪಂಚಾಯತ್‌ನ ಉಪಾಧ್ಯಕ್ಷ ಹುದ್ದೆಯಿಂದ ತೆರವುಗೊಳಿಸಬೇಕು ಅವರು ಪುತ್ತೂರು ಸಹಾಯಕ ಕಮಿಷನರ್‌ರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
೧೭ ಸದಸ್ಯ ಬಲವಿರುವ ಜಾಲ್ಸೂರು ಗ್ರಾಮ ಪಂಚಾಯತ್‌ನಲ್ಲಿ ಪಂಚಾಯತ್ ಅಧ್ಯಕ್ಷರಾಗಿರುವ ಸಾವಿತ್ರಿ ಅಡ್ಕಾರು, ಸದಸ್ಯರುಗಳಾದ ಬಾಬು ಕೆ.ಎಂ., ಸತೀಶ್ ಎನ್.ಎಂ., ಸಂದೀಪ್ ಕುಮಾರ್ ಕದಿಕಡ್ಕ, ತಿರುಮಲೇಶ್ವರಿ ಮರಸಂಕ, ಗೀತಾ ಬೊಳುಬೈಲು, ಗೀತಾ ಅರ್ಭಡ್ಕ, ಲೀಲಾವತಿ ವಿನೋಬಾನಗರ, ಆರ್.ಎಸ್.ಅಂಬಿಕಾ, ಶಿವಪ್ರಸಾದ ನೀರಬಸುರು, ದೀಪ ಅಜಕ್ಕಳ, ಎಸ್.ಈಶ್ವರ ನಾಯ್ಕ ಸೋಣಂಗೇರಿ , ಸಂಧ್ಯಾ ಸಿ.ಆರ್.,ಅವಿಶ್ವಾಸ ಗೊತ್ತುಳಿಗೆ ಸಹಿ ಹಾಕಿದ್ದಾರೆ.
ಉಪಾಧ್ಯಕ್ಷೆ ತಿರುಮಲೇಶ್ವರಿ ಸೇರಿದಂತೆ ಸದಸ್ಯರಾದ ಮಜೀದ್ ನಡುವಡ್ಕ, ವಿಜಯ ವಿನೋಬಾನಗರ, ಮುಜೀಬ್ ಪೈಚಾರುರವರು ಈ ನಿರ್ಣಯಕ್ಕೆ ಸಹಿ ಹಾಕಿಲ್ಲ.
ಮಾ.೩ರಂದು ೧೩ ಮಂದಿ ಸದಸ್ಯರು ಎ.ಸಿ.ಯವರಿಗೆ ಮನವಿ ನೀಡಿದ್ದು, ಅದು ಪಂಚಾಯತ್‌ಗೆ ಪರಿಶೀಲನೆಗಾಗಿ ಬಂದಿದೆ. ಮಾ.೨೯ರಂದು ಪುತ್ತೂರು ಸಹಾಯಕ ಕಮಿಷನರ್‌ರವರ ನೇತೃತ್ವದಲ್ಲಿ ಸಭೆ ನಡೆದು ಅವಿಶ್ವಾಸ ಗೊತ್ತುವಳಿ ಮಂಡನೆಯಾಗಲಿದೆ.