ಪೋಲಿಸ್ ಕೇಸು ದಾಖಲು : ಕಂಠಿಯವರಿಂದ ಆರೋಪ ನಿರಾಕರಣೆ
ಸುಳ್ಯ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ ವಿರುದ್ಧ ಗಾಂಧಿನಗರದ ನಾವೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಮಹಿಳೆಯೋರ್ವರು
ಸುಳ್ಯ ಪೋಲಿಸರಿಗೆ ದೂರು ನೀಡಿದ್ದಾರೆ. ಕಂಠಿಯವರು ತನಗೆ ಹೊಡೆದಿರುವುದಾಗಿ ದೂರಿನಲ್ಲಿ ಅವರು ತಿಳಿಸಿದ್ದಾರೆ.
ನಾವೂರು ಬಳಿ ಬಾಡಿಗೆ ಮನೆಯಲ್ಲಿರುವ ಮಹಿಳೆ ಚಂದ್ರಿಕಾ ಎಂಬವರು ನೀಡಿದ ದೂರಿನಲ್ಲಿ ” ಶರೀಫ್ ಕಂಠಿಯವರು ಅವರ ಕಾರನ್ನು ತಂದು ನಮ್ಮ ಮನೆಯ ಮುಂದೆ ಗೇಟಿನ ಎದುರು ಅಡ್ಡಲಾಗಿ ನಿಲ್ಲಿಸಿದ್ದರು. ನಮ್ಮ ಗೇಟಿನ ಮುಂದೆ ಹೀಗೆ ನಿಮ್ಮಕಾರನ್ನು ಇರಿಸಿದಲ್ಲಿ ನಾವು ಬರುವುದು ಹೇಗೆ? ನಿಮ್ಮ ಕಾರನ್ನು ಮುಂದಕ್ಕೆ ಇಡುವಂತೆ ಕೇಳಿಕೊಂಡಾಗ ನನಗೆ ಅವಾಚ್ಯ ಶಬ್ಧಗಳಿಂದ ಬೈದುದಲ್ಲದೆ ಕಾರಿಂದ ಇಳಿದು ಬಂದು ನನ್ನ ಮೇಲೆ ಹಲ್ಲೆ ನಡೆಸಿದರಲ್ಲದೆ, ನನ್ನ ಬಟ್ಟೆ ಹರಿದಿದ್ದಾರೆ. ನಾನು ಅಲ್ಲಿಂದ ತಪ್ಪಿಸಿಕೊಂಡು ಓಡಿದಾಗ ನನ್ನನ್ನು ಹಿಡಿದಿರುತ್ತಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮಹಿಳೆಯು ನೀಡಿದ ದೂರಿನ ಮೇರೆಗೆ
ಸುಳ್ಯ ಪೋಲಿಸರು ಶರೀಫ್ ಕಂಠಿಯವರ ಮೇಲೆ ಕೇಸು ದಾಖಲಿಸಿಕೊಂಡಿದ್ದಾರೆ.



ನಾನು ಹಲ್ಲೆ ನಡೆಸಿಲ್ಲವೆಂದು ಯಾವ ದೇವಸ್ಥಾನದಲ್ಲಿ ಬೇಕಾದರೂ ಪ್ರಮಾಣ ಮಾಡುತ್ತೇನೆ : ಶರೀಫ್ ಕಂಠಿ ಪ್ರತಿಕ್ರಿಯೆ

ಈ ಬಗ್ಗೆ ನ.ಪಂ.ಸದಸ್ಯ ಶರೀಫ್ ಕಂಠಿಯವರಲ್ಲಿ ವಿಚಾರಿಸಿದಾಗ, ” ರಸ್ತೆಯ ಬದಿ ಕಾರು ಪಾರ್ಕಿಂಗ್ ಮಾಡಿದ ಬಗ್ಗೆ ಮಹಿಳೆ ಕೆಟ್ಟ ಕೆಟ್ಟ ಮಾತುಗಳಿಂದ ನನ್ನನ್ನು
ನಿಂದಿಸಿದರು. ಆಗ ನಾನು ಅವರಿಗೆ ಜೋರು ಮಾಡಿದ್ದೇನೆ. ಆದರೆ ಹೊಡೆಯಲು ಹೋಗಿಯೂ ಇಲ್ಲ. ಹೊಡೆದೂ ಇಲ್ಲ. ನಾನು ಕಾರಿಂದ ಇಳಿದಿರಲಿಲ್ಲ. ಈಗ ಸುಳ್ಳು ದೂರು ನೀಡಿದ್ದಾರೆ. ಅವರು ಎಲ್ಲಿಗೆ ಕರೆದರೂ ಬಂದು ಪ್ರಮಾಣ ಮಾಡಲು ಸಿದ್ಧನಿದ್ದೇನೆ ” ಎಂದು ಹೇಳಿದರು. ” ಆ ಮಹಿಳೆ ಆ ಪರಿಸರದಲ್ಲಿ ಯಾವಾಗಲೂ ಗಲಾಟೆ ಮಾಡಿಕೊಂಡಿರುತ್ತಾರೆ. ಎರಡು ವರ್ಷದ ಹಿಂದೆ ಯುವತಿಯೊಬ್ಬರು ತನ್ನ 4 ವರ್ಷದ ಮಗುವಿಗೆ ಕಬ್ಬಿಣದ ಸಟ್ಟುಗ ಬಿಸಿ ಮಾಡಿ ಮುಖ ಕೈ ಕಾಲುಗಳಿಗೆ ಬರೆ ಎಳೆದ ಘಟನೆ ನಡೆದಿತ್ತು. ಈ ವಿಷಯ ನ.ಪಂ.ಸದಸ್ಯನಾದ ನನಗೆ ದೂರು ಬಂದು ನಾನು ಮಹಿಳಾ ಮತ್ತು ಮಕ್ಕಳ ಇಲಾಖೆಯವರಿಗೆ ತಿಳಿಸಿ, ಆ ಯುವತಿಯ ಮೇಲೆ ಕೇಸಾಗಿತ್ತು.
ಮಗುವನ್ನು ರಕ್ಷಿಸಲಾಗಿತ್ತು. ನ್ಯಾಯಾಲಯದಲ್ಲೂ ನಾನು ಸಾಕ್ಷಿ ಹೇಳಿದ ಕಾರಣ ಆರೋಪಿಗೆ ಶಿಕ್ಷೆಯಾಗಿತ್ತು. ಆ ಸಂದರ್ಭದಲ್ಲಿ ಆ ಪುಟ್ಟ ಮಗುವಿನ ಅಜ್ಜಿಯಾದ ಈ ಚಂದ್ರಿಕಾರವರು ನನ್ನಲ್ಲಿಗೆ ಬಂದು ಮಗಳ ವಿರುದ್ಧ ಸಾಕ್ಷಿ ಹೇಳಬಾರದೆಂದು ಕೇಳಿಕೊಂಡಿದ್ದರು. ಆದರೆ ನಾನು ಒಪ್ಪದೆ ನ್ಯಾಯಾಲಯದಲ್ಲಿ ಸತ್ಯ ಹೇಳಿದ್ದೆ. ಆ ದ್ವೇಷಕ್ಕಾಗಿ ಈಗ ನನ್ನ ಮೇಲೆ ಸುಳ್ಳು ದೂರು ನೀಡಿದ್ದಾರೆ ” ಎಂದು ಶರೀಫ್ ಕಂಠಿ ತಿಳಿಸಿದ್ದಾರೆ.