ಸೂಕ್ತ ತನಿಖೆ ನಡೆಸಲು SDPI ಆಗ್ರಹ
ಸುಳ್ಯ, ಮಾರ್ಚ್ 28: ನಗರ ಪಂಚಾಯತ್ ಸದಸ್ಯರಾದ ಶರೀಫ್ ಕಂಠಿ ವಿರುದ್ಧ ಮಹಿಳೆಯೊಬ್ಬರು ದೈಹಿಕ ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಿದ್ದು, ಇದೊಂದು ಸುಳ್ಳು ಆರೋಪ ಎಂದು ಸಾರ್ವಜನಿಕ ವಲಯದಲ್ಲಿ ತೀವ್ರ ರೀತಿಯಲ್ಲಿ ಚರ್ಚೆ ನಡೆಯುತ್ತಿದ್ದು,ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಪ್ರಕರಣದ ಸತ್ಯಾಸತ್ಯತೆಯನ್ನು ಬಯಲುಗೊಳಿಸಬೇಕೆಂದು ಎಸ್‌ಡಿಪಿಐ ಸುಳ್ಯ ಬ್ಲಾಕ್ ಅಧ್ಯಕ್ಷರಾದ ಸಿದ್ದೀಕ್ ಸಿ.ಎ ಆಗ್ರಹಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಶರೀಫ್ ಕಂಠಿರವರು ಜನಪ್ರತಿನಿಧಿಯಾಗಿದ್ದುಕೊಂಡು ನಿರಂತರವಾಗಿ ಸಾರ್ವಜನಿಕರೊಂದಿಗೆ ಒಡನಾಟದಲ್ಲಿರುವವರಾಗಿದ್ದಾರೆ.
ಒಂದು ವೇಳೆ ಒಬ್ಬಳು ಮಹಿಳೆಗೆ ಕಾರಣ ಇದ್ದು ಕೂಡ ಹಲ್ಲೆ ನಡೆಸಿದರೆ ಅದರ ಪರಿಣಾಮ ಅರಿವಿರದ ವ್ಯಕ್ತಿಯಲ್ಲ ಹಾಗೂ ಇದಕ್ಕೆ ಪೂರಕವಾಗಿ ಶರೀಫ್ ರವರು ಪತ್ರಿಕಾ ಹೇಳಿಕೆಯ ಮೂಲಕ ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದಲ್ಲದೇ, ದೂರುದಾರೆ ಮಹಿಳೆಯನ್ನು ಪ್ರಮಾಣಕ್ಕೆ ಆಹ್ವಾನಿಸಿದ್ದು, ಹಿಂದು ಮುಂದು ನೋಡದೆ ಆರೋಪಿಯ ಹೆಸರು ಮುಸ್ಲಿಮ್ ಹೆಸರು ಇದ್ದ ಕಾರಣ ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿದ ಸಂಘಪರಿವಾರ ಸಂಘಟನೆಗಳಿಗೆ ತಾಕತ್ತಿದ್ದರೆ ಆ ಮಹಿಳೆಯನ್ನು ನಿಮ್ಮ ನೇತೃತ್ವದಲ್ಲೇ ಸತ್ಯ ಪ್ರಮಾಣಕ್ಕೆ ಸಿದ್ದರಾಗಿಸಿ ಎಂದು ಸವಾಲೆಸಿದಿದ್ದಾರೆ.
ಮೇಲ್ನೋಟಕ್ಕೆ ಕೆಲವು ಸ್ಥಾಪಿತ ಹಿತಾಸಕ್ತಿಗಳು ಪಂಚಾಯತ್ ಸದಸ್ಯರಾದ ಶರೀಫ್ ಕಂಠಿಯವರ ತೇಜೋವಧೆ ಮಾಡಲು ಪ್ರಯತ್ನಿಸುತ್ತಿರುವುದು ಕಾಣುತ್ತಿದೆ. ಈ ಪ್ರಕರಣದಲ್ಲಿ ಕೋಮು ಸೌಹಾರ್ದತೆಯನ್ನು ಕೆಡಿಸಲು ಸಂಘಪರಿವಾರ ಸಂಘಟನೆಗಳು ಪ್ರಯತ್ನಿಸುತ್ತಿದೆ.
ಕೆಲವೇ ದಿನಗಳಲ್ಲಿ ಮುಸ್ಲಿಮರ ಪವಿತ್ರ ಈದ್ ಹಬ್ಬವು ಬರಲಿರುವುದರಿಂದ, ಮತೀಯ ಗಲಭೆ ನಡೆಸಲು ಕೋಮುವಾದಿಗಳಿಗೆ ಅವಕಾಶ ನೀಡಬಾರದು, ಈ ಪ್ರಕರಣದ ಇಂತಹ ಸುಳ್ಳು ದೂರು ದಾಖಲು ಮಾಡಿದವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಈ ಪ್ರಕರಣವನ್ನು ಇಲಾಖೆಯು ಗಂಭೀರವಾಗಿ ಪರಿಗಣಿಸಿ, ಸೂಕ್ತ ತನಿಖೆ ನಡೆಸಿ ಸತ್ಯಾಸತ್ಯತೆ ಬಯಲು ಮಾಡಬೇಕೆಂದು ಅವರು ಪತ್ರಿಕಾ ಪ್ರಕಟಣೆಯ ಮೂಲಕ ಒತ್ತಾಯಿಸಿದ್ದಾರೆ