ಸುಳ್ಯ ತಾಲೂಕು ಆರೋಗ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಡಾ. ನಂದಕುಮಾರ್ ಬಾಳಿಕಳ ಮಾ. 31ರಂದು ವಯೋ ನಿವೃತ್ತಿ ಹೊಂದಲಿದ್ದಾರೆ.
ಮಡಪ್ಪಾಡಿ ಗ್ರಾಮದ ಕಡ್ಯ ತರವಾಡು ಮನೆಯ ರಾಘವ ರೇಂಜರ್ ಎಂದೇ ಖ್ಯಾತಿ ಹೊಂದಿದ್ದ ನಿವೃತ್ತ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ದಿ. ರಾಘವ ಗೌಡ ಬಾಳಿಕಳ ಮತ್ತು ಶ್ರೀಮತಿ ಯಶೋಧ ದಂಪತಿಯ ಪುತ್ರನಾಗಿ 23-03-1965ರಂದು ಜನಿಸಿದ ಡಾ. ನಂದಕುಮಾರ್ ಬಾಳಿಕಳ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಯ, ಪುತ್ತೂರು, ಬೈಂದೂರು, ಹೆಬ್ರಿಯಲ್ಲಿ, ಪ್ರೌಢ ಶಿಕ್ಷಣ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಜೂನಿಯರ್ ಕಾಲೇಜಿನಲ್ಲಿ ಪೂರೈಸಿ, ಎಮ್‌ಬಿಬಿಎಸ್ ಪದವಿಯನ್ನು 1992ರಲ್ಲಿ ಬೆಂಗಳೂರು ಒಕ್ಕಲಿಗರ ಸಂಘದ ಕೆಂಪೇಗೌಡ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪಡೆದು ಬೆಂಗಳೂರಿನಲ್ಲಿ ಪ್ರಾಕ್ಟೀಸ್ ಆರಂಭಿಸಿ ಊರಿಗೆ ಮರಳಿದರು.
ಪುತ್ತೂರು ಚೇತನಾ ಆಸ್ಪತ್ರೆಯಲ್ಲಿ, ಕಾಸರಗೋಡು ಕಿಮ್ಸ್ ಆಸ್ಪತ್ರೆಯಲ್ಲಿ 2 ವರ್ಷಗಳ ಕಾಲ ಸೇವೆ ಸಲ್ಲಿಸಿ, 1996–1998 ರಲ್ಲಿ ಸುಳ್ಯದ ಗಾರ್ಡನ್ ಆಸ್ಪತ್ರೆಯಲ್ಲಿ ಸರ್ಕಾರಿ ಸೇವೆಗೆ ಸೇರ್ಪಡೆಗೊಂಡರು. ಬಳಿಕ ಸರಕಾರದ ಆದೇಶದ ಮೇರೆಗೆ ಗುತ್ತಿಗೆ ಆಧಾರದಲ್ಲಿ 01-05-1998 ರಲ್ಲಿ ಪ್ರಾಥಮಿಕ ಆರೋಗ್ಯಕೇಂದ್ರ ಕೊಲ್ಲಮೊಗ್ರುವಿಗೆ ಗುತ್ತಿಗೆ ಆಧಾರದಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯಕ್ಕೆ ಹಾಜರಾದರು. ಬಳಿಕ 2006ರಲ್ಲಿ ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವರ್ಗಾವಣೆಗೊಂಡು 2015ರ ತನಕ ಸೇವೆ ಸಲ್ಲಿಸಿ, ಪದೋನ್ನತಿ ಹೊಂದಿ ಎಸ್.ಎಂ.ಒ. ಆಗಿ ಸಂಚಾರಿ ಗಿರಿಜನ ಘಟಕಕ್ಕೆ ವರ್ಗಾವಣೆಗೊಂಡರು. 2021ರಲ್ಲಿ ಕೋವಿಡ್ ಸಮಯದಲ್ಲಿ ಪ್ರಭಾರ ತಾಲೂಕು ಆರೋಗ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿ, 2023ರಂದ ಖಾಯಂ ತಾಲೂಕು ಆರೋಗ್ಯಾಧಿಕಾರಿಯಾಗಿ ಮುಂದುವರೆದು ಒಟ್ಟು 29 ವರ್ಷಗಳ ಸುದೀರ್ಘ ಸರಕಾರಿ ಸೇವೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ನೀಡಿ ಮಾ. 31ರಂದು ವಯೋನಿವೃತ್ತಿ ಹೊಂದಲಿದ್ದಾರೆ. ಕಡ್ಯ- ಬಾಳಿಕಳ ಶ್ರೀ ರಾಜನ್ ಶಿರಾಡಿ ದೈವಸ್ಥಾನದ ಆಡಳಿತ ಮೊಕ್ತೇಸರರಾಗಿ ಸೇವೆ ಸಲ್ಲಿಸುತ್ತಿರುವ ಇವರು 2013 ರಿಂದ 2018ರ ತನಕ ಸುಳ್ಯ ತಾಲೂಕು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಸಂಘವನ್ನು ಮುನ್ನಡೆಸಿದ್ದರು.



ಇವರ
ಪತ್ನಿ ಶ್ರೀಮತಿ ಮಂಜುಳಾ ಗೃಹಿಣಿಯಾದರೆ, ಪುತ್ರಿ ಕು. ಆತ್ಮೀಕಾ ಬಿ.ಇ. ಪದವಿಯನ್ನು ಪಡೆದು ಬೆಂಗಳೂರಿನ ಎಮ್.ಎನ್.ಸಿ. ಐಬಿಎಂ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದಾರೆ.ಪುತ್ರ ಆಸ್ತಿಕ್ ರಾಘವ್ ನಿಟ್ಟೆ ಎಬಿ ಶೆಟ್ಟಿ ಡೆಂಟಲ್ ಕಾಲೇಜಿನಲ್ಲಿ 2ನೇ ವರ್ಷದ ಬಿಡಿಎಸ್ ವಿದ್ಯಾರ್ಥಿ.ಶ್ರೀಮತಿ ಪ್ರಮೀಳಾ ನಳಿನ್ ಕುಮಾರ್ ಕೋಡ್ತುಗುಳಿ ಮತ್ತು ಶ್ರೀಮತಿ ಲತಾ ಮಧುಸೂಧನ್ ಕುಂಬಕೋಡು ಇವರ ಇಬ್ಬರು ಸಹೋದರಿಯರು.