ನಾಳೆ ಕೊಡಿ ಏರುವುದು – ಉಳ್ಳಾಕುಳು ಭಂಡಾರ ಆಗಮನ
ಸೀಮೆಯ ಗ್ರಾಮಗಳಿಂದ ಹರಿದು ಬರಲಿದೆ ಹಸಿರುವಾಣಿ

ಸುಳ್ಯ ಸೀಮೆ ಮಹಾತೋಭಾರ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವ ಎ. 13 ರಿಂದ ಆರಂಭಗೊಳ್ಳಲಿದ್ದು, ಈ ಬಾರಿ ಅದ್ದೂರಿಯ ತೊಡಿಕಾನ ಜಾತ್ರೆ ನಡೆಸಲು ವ್ಯವಸ್ಥಾಪನಾ ಸಮಿತಿ ಹಾಗೂ ಜಾತ್ರೋತ್ಸವ ಸಮಿತಿ ನಿರ್ಧರಿಸಿದ್ದು ಅದಕ್ಕಾಗಿ ಸಮಾರೋಪಾದಿಯಲ್ಲಿ ಸಿದ್ಧತೆಗಳು ನಡೆಯುತ್ತಿದೆ.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಕೊಳಲುಮೂಲೆ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಪಿ. ಬಿ. ದಿವಾಕರ ರೈ ಹಾಗೂ ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ನೇತೃತ್ವದಲ್ಲಿ ಗ್ರಾಮದಲ್ಲಿ ಹಾಗೂ ಸೀಮೆಯ ಗ್ರಾಮಗಳಲ್ಲಿ ಹಲವಾರು ಸಭೆಯನ್ನು ನಡೆಸಿ, ಈ ಬಾರಿ ಅದ್ದೂರಿಯ ಜಾತ್ರೆ ನಡೆಸಲು ಸಿದ್ಧತೆ ನಡೆಯೂತ್ತಿದೆ. ಜಾತ್ರೋತ್ಸವ ಸಮಿತಿಗೆ ಹಲವು ಉಪಸಮಿತಿಗಳನ್ನು ಮಾಡಿಕೊಂಡು, ಆಯಾ ಸಮಿತಿಯ ಜವಾಬ್ದಾರಿ ನಿರ್ವಹಿಸಲು ಸಂಚಾಲಕರು ಹಾಗೂ ಪದಾಧಿಕಾರಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಪ್ರತೀ ದಿನ ರಾತ್ರಿ ಮತ್ತು ಹಗಲು ದೇವಸ್ಥಾನದ ಪರಿಸರದಲ್ಲಿ ಸ್ವಚ್ಛತೆ ಹಾಗೂ ಅಲಂಕಾರ ಗ್ರಾಮಸ್ಥರಿಂದ ಹಾಗೂ ಸೀಮೆಯ ಹಲವು ಸಂಘ ಸಂಸ್ಥೆಗಳ ಮೂಲಕ ನಡೆಯುತ್ತಿದೆ. ದೇವಸ್ಥಾನದ ಬಳಿಯಿಂದ ಆರಂತೋಡು ತನಕ ರಸ್ತೆಯ ಹಲವು ಕಡೆ ದ್ವಾರ ನಿರ್ಮಾಣ,ಬಂಟಿಂಗ್ಸ್ ಹಾಗೂ ತೋರಣ ಕಟ್ಟಿ ಶೃಂಗಾರ ಮಾಡಲಾಗುತ್ತಿದೆ. ಆರಂತೋಡಿನಿಂದ ತೊಡಿಕಾನದ ತನಕ ರಸ್ತೆಯ ಎರಡೂ ಕಡೆ ಚರಳು ಹೊಯಿಗೆ ಹಾಕಿ ಸರಿಪಡಿಸಲಾಗಿದೆ. ದೇವಸ್ಥಾನದ ಬಳಿಯೂ ನೀರು ನಿಲ್ಲುವ ಕಡೆ, ಕೆಸರು ತುಂಬಿರುವ ಕಡೆ ಹೊಯಿಗೆ ಹಾಕಿ ಸರಪಡಿಸಲಾಗಿದೆ.
ಎ. 13 ರಂದು ಧ್ವಜಾರೋಹಣ :
ದೇವಸ್ಥಾನದಲ್ಲಿ ಎ. 13 ರಂದು ಧ್ವಜಾರೋಹಣದೊಂದಿಗೆ ಜಾತ್ರೋತ್ಸವದ ಕಾರ್ಯಕ್ರಮಗಳು ಆರಂಭಗೊಳ್ಳಲಿದೆ. ಬೆಳಿಗ್ಗೆ ತೋಟoಪಾಡಿ ಉಲ್ಲಾಕುಲು ದೈವದ ಭಂಡಾರ ಬಂದು ಉಗ್ರಾಣ ತುಂಬಿಸುವ ಕಾರ್ಯಕ್ರಮ ನಡೆಯಲಿದೆ. ಮದ್ಯಾಹ್ನ ಧ್ವಜಾರೋಹಣ ನಡೆಯಲಿದೆ.
ಹರಿದು ಬರಲಿದೆ ಹಸಿರುವಾಣಿ :
ಈ ಬಾರಿ ವಿಶೇಷವಾಗಿ ಸೀಮೆಯ ಎಲ್ಲಾ ಗ್ರಾಮದ ಎಲ್ಲಾ ಮನೆ – ಮನೆಯಿಂದ ಹಸಿರುವಾಣಿ ಸಂಗ್ರಹ ಆಗಬೇಕೆನ್ನುವುದು ಜಾತ್ರೋತ್ಸವ ಸಮಿತಿಯ ಯೋಚನೆ. ಅದಕ್ಕೆ ಪೂರಕವಾಗಿ ಹಸಿರುವಾಣಿ ಸಮಿತಿಯ ಸಂಚಾಲಕ, ಗ್ರಾಮ ಪಂಚಾಯಿತಿ ಅಧ್ಯಕ್ಷ ಕೇಶವ ಅಡ್ತಲೆ ನೇತೃತ್ವದಲ್ಲಿ, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೇಶವ ಕೊಳಲುಮೂಲೆ, ಹಾಗೂ ವ್ಯವಸ್ಥಾಪನಾ ಸಮಿತಿ ಸದಸ್ಯರು ಸೀಮೆಯ ಗ್ರಾಮ – ಗ್ರಾಮದಲ್ಲಿ ಸಭೆ ನಡೆಸಿ, ಆಮಂತ್ರಣ ಪತ್ರಿಕೆ ವಿತರಣೆ ಹಾಗೂ ಹಸಿರುವಾಣಿ ಸಂಗ್ರಹದ ಕುರಿತು ತಿಳಿಸಿದ್ದಾರೆ. ಎಲ್ಲಾ ಗ್ರಾಮದಿಂದಲೂ ಪೂರಕ ಸ್ಪಂದನೆ ಬಂದಿದ್ದು, ಎ. 13 ರಂದು ಬೆಳಿಗ್ಗೆ 9 ಗಂಟೆಗೆ ಆರಂತೋಡಿನಲ್ಲಿ ಸಂಗ್ರಹವಾಗಲಿದೆ. ಅಲ್ಲಿಂದ ತೊಡಿಕಾನದ ದೇವರ ಜಳಕದ ಗುಂಡಿ ಬಳಿ 9.30 ಗೆ ಸೇರಿ ತೊಟoಪಾಡಿ ಉಲ್ಲಾಕುಲು ಬಂಡಾರ ಬರುವಾಗ, ಅದರ ಜೊತೆಗೆ ಹಸಿರುವಾಣಿ ಮೆರವಣಿಗೆ ಬ್ಯಾಂಡ್ ವಾಲಗ, ಕುಣಿತ ಭಜನೆ, ನಾಸಿಕ್ ಬ್ಯಾಂಡ್ ಕಲರವದೊಂದಿಗೆ ಹರಿದು ಬರಲಿದೆ. ಸೀಮೆಯ ನೂರಾರು ಭಕ್ತರು ಈ ಸಂದರ್ಭದಲ್ಲಿ ಮೆರವಣಿಗೆ ಜೊತೆ ಹೆಜ್ಜೆ ಹಾಕಲಿದ್ದಾರೆ.
2 ಬಾರಿ ಹಸಿರು ತೋರಣ :
ಈ ಬಾರಿ ಮಿತ್ತೂರು ನಾಯರ್ ದೈವದ ಭಂಡಾರ ಕೂಡ ಬರಲಿರುವುದರಿಂದ 2 ಬಾರಿ ಹಸಿರು ತೋರಣಗಳಿಂದ ಭಂಡಾರ ಬರುವ ರಸ್ತೆಯನ್ನು ಶೃಂಗಾರ ಮಾಡಲಾಗುತ್ತದೆ. ಎ. 13 ರಂದು ಉಲ್ಲಾಕುಲು ಬಂಡಾರ ಬರುವಾಗ ಹಾಗೂ ಇನ್ನೊಮ್ಮೆ ಎ. 19 ರಂದು ಮಿತ್ತೂರ್ ನಾಯರ್ ಭಂಡಾರ ಬರುವಾಗ ಹಸಿರು ತೋರಣದಿಂದ ಶೃಂಗರಿಸಲಾತ್ತದೆ. ಭಂಡಾರ ಬರುವಾಗ ಅಲ್ಲಲ್ಲಿ ಸ್ಥಳೀಯರು ಸೇರಿ ವಿಶ್ರಾಂತಿ ಹಾಗೂ ಲಘು ಉಪಹಾರದ ವ್ಯವಸ್ಥೆ ಮಾಡಲಿದ್ದಾರೆ. ಭಂಡಾರ ಬರುವಾಗ ಸ್ವಚ್ಚತೆ, ಮನೆ, ಅಂಗಡಿ ಮುಂದೆ ಅಲಂಕಾರ, ಆತಿಥ್ಯದ ಕುರಿತು ಸ್ಥಳೀಯ ಮನೆಯವರು, ಸಂಘ ಸಂಸ್ಥೆಯವರು ಸಹಕರಿಸಬೇಕಾಗಿ ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ವಿನಂತಿಸಿಕೊಂಡಿದ್ದಾರೆ.