ಕೆ.ಎಫ್.ಡಿ.ಸಿ.ಯ ಐವರ್ನಾಡು ಫ್ಯಾಕ್ಟರಿ ಉತ್ಪಾದನಾ ವಿಭಾಗ ಸ್ಥಗಿತಕ್ಕೆ ಎಂ.ಡಿ. ಆದೇಶ

0

 

ಕಾರ್ಮಿಕರು ಅಯೋಮಯ – ಮ್ಯಾನೇಜರ್ ಮಾಹಿತಿಯ ಬಳಿಕ ಉತ್ಪಾದನೆ ಪುನರಾರಂಭಿಸಲು ಎಂ.ಡಿ. ಮೌಖಿಕ ಒಪ್ಪಿಗೆ

ರಬ್ಬರ್ ಫ್ಯಾಕ್ಟರಿಯಲ್ಲಿ ಉತ್ಪಾದನೆಯಾಗಿರುವ ರಬ್ಬರ್ ಉತ್ಪನ್ನ ಮಾರಾಟವಾಗದೆ ಸ್ಟಾಕ್ ಇದೆ ಎಂಬ ಕಾರಣಕ್ಕಾಗಿ ಉತ್ಪಾದನೆಯನ್ನು ಸ್ಥಗಿತಗೊಳಿಸಲು ಕೆಎಫ್ ಡಿಸಿ ಎಂ.ಡಿ.ಯವರು ಆದೇಶ ಮಾಡಿದ್ದರಿಂದ ಫ್ಯಾಕ್ಟರಿ ಕಾರ್ಮಿಕರು ಅಯೋಮಯ ಗೊಂಡು ಧರಣಿಗೆ ನಿರ್ಧರಿಸಿದ ಹಾಗೂ ಫ್ಯಾಕ್ಟರಿ ಮ್ಯಾನೇಜರ್ ರವರು ಎಮ್ ಡಿ ಯೊಂದಿಗೆ ಮಾತನಾಡಿ ವಾಸ್ತವ ಪರಿಸ್ಥಿತಿಯನ್ನು ಮನವರಿಕೆ ಮಾಡಿದ ಬಳಿಕ ಉತ್ಪಾದನೆ ಪುನರಾರಂಭಿಸಲು ಎಂ.ಡಿ.ಯವರು ಮೌಖಿಕ ಸೂಚನೆ ನೀಡಿದ ಘಟನೆ ಐವರ್ನಾಡು ದರ್ಖಾಸಿನಿಂದ ವರದಿಯಾಗಿದೆ.

ರಬ್ಬರ್ ಉತ್ಪನ್ನಗಳು ಮಾರಾಟವಾಗದೇ ದಾಸ್ತಾನು ಇದ್ದ ಹಿನ್ನೆಲೆಯಲ್ಲಿ ಕೆಲವು ಸಮಯ ಉತ್ಪಾದನಾ ಘಟಕವನ್ನು ಸ್ಥಗಿತಗೊಳಿಸಲು ಎಂಡಿಯವರು ಆಗಸ್ಟ್ 26 ರಂದು ಆದೇಶಿಸಿದ್ದರು . ಆದರೆ ಈ ಆದೇಶ ಜಾರಿಯಾಗಿರಲಿಲ್ಲ. ಎಮಿಲಿ ಅವರ ಸತತ ಒತ್ತಡದ ಹಿನ್ನೆಲೆಯಲ್ಲಿ ಇಂದಿನಿಂದ ಈ ಆದೇಶವನ್ನು ಜಾರಿಗೊಳಿಸಲು ನಿರ್ಧರಿಸಲಾಗಿತ್ತು. ಉತ್ಪಾದನಾ ಘಟಕದಲ್ಲಿ ಸುಮಾರು ಇಪ್ಪತ್ತೈದು ಮಂದಿ ಕಾರ್ಮಿಕರಿದ್ದು ಅವರಿಗೆ ಟ್ಯಾಪಿಂಗ್ ಮತ್ತಿತರ ಕೆಲಸಗಳನ್ನು ನೀಡಲು ಸೂಚನೆ ನೀಡಲಾಗಿತ್ತು. ಆದರೆ ಆ ಎಲ್ಲ ಕಾರ್ಮಿಕರಿಗೆ ಟ್ಯಾಪಿಂಗ್ ಕೆಲಸ ಬರುತ್ತಿರಲಿಲ್ಲ ಎನ್ನಲಾಗಿದೆ.


ಎಂ.ಡಿ. ಆದೇಶದಂತೆ ಇಂದಿನಿಂದ ಉತ್ಪಾದನೆ ಸ್ಥಗಿತಗೊಳಿಸಲು ನಿರ್ಧರಿಸಲಾಗಿತ್ತು. ಇಂದು ಬೆಳಿಗ್ಗೆ ಕಾರ್ಮಿಕರು ಬಂದು ಫ್ಯಾಕ್ಟರಿಯ ಆವರಣದೊಳಗೆ ಸುಮ್ಮನೆ ಕುಳಿತರು. ವಿಷಯ ತಿಳಿದು ಕಾರ್ಮಿಕ ನಾಯಕರಾದ ಚಂದ್ರಲಿಂಗಮ್, ಸುಪ್ಪಯ್ಯ ಮೊದಲಾದವರು ಬಂದು ಫ್ಯಾಕ್ಟರಿ ಮೇನೇಜರ್ ರೊಂದಿಗೆ ಮಾತನಾಡಿದರು.
ಬಳಿಕ ಉತ್ಪಾದನಾ ಘಟಕ ಸ್ಥಗಿತಗೊಳಿಸಿದರೆ ಕಾರ್ಮಿಕರಿಗೆ ಆಗುವ ಸಮಸ್ಯೆಯ ಕುರಿತು ಫ್ಯಾಕ್ಟರಿ ಮೇನೇಜರ್ ರವರು ಎಂ.ಡಿ.ಗೆ ಫೋನ್ ಮಾಡಿ ವಿವರಿಸಿದಾಗ, ಉತ್ಪಾದನೆ ಪುನರಾರಂಭಿಸಲು ಮೌಖಿಕವಾಗಿ ಒಪ್ಪಿಗೆ ಸೂಚಿಸಿದರು.
ಈ ಹಿನ್ನೆಲೆಯಲ್ಲಿ ಐವರ್ನಾಡು ರಬ್ಬರ್ ಫ್ಯಾಕ್ಟರಿಯ ಉತ್ಪಾದನಾ ಘಟಕವನ್ನು ಪುನರಾರಂಭಿಸಲಾಯಿತು.
ಈಗ ತಾತ್ಕಾಲಿಕವಾಗಿ ಸಮಸ್ಯೆ ಪರಿಹಾರವಾದಂತಾಗಿದೆ.