ನವರಾತ್ರಿ ವೈಭವದಲ್ಲಿ ನಾಡು…

0
477


ನವರಸಗಳ ಭಂಗಿಯಲಿ
ವದನಾರವಿಂದವ ಹೊತ್ತು
ರಾರಾಜಿಸುತಿಹ ಮಾತೆ
ತ್ರಿಭುವನಂಗಳ ಪೊರೆವ ದಾತೆಗೆ ನಮೋಸ್ತುತೆ ||
ನವರಾತ್ರಿ ಆಚರಣೆ ಎನ್ನುವುದು ಇದು ಒಂಭತ್ತು ದಿನಗಳ ವಿಶೇಷತೆಯನ್ನು ಹೊತ್ತ ಸಂಭ್ರಮಾಚರಣೆ. ದಸರಾ ಉತ್ಸವದ ಆಚರಣೆಯ ಒಂದು ಅಂಗವೇ ನವರಾತ್ರಿ. ಇದನ್ನು ಶರನ್ನವರಾತ್ರಿ ಎಂದೂ ಕರೆಯುವರು. ಪಂಚಾಂಗದ ಪ್ರಕಾರ ಅಶ್ವಯುಜ ಶುದ್ಧಪ್ರತಿಪದೆಯ ದಿನ ನವರಾತ್ರಿ ಪ್ರಾರಂಭವಾಗುತ್ತದೆ. ನವರಾತ್ರಿಯ ಸಮಯದಲ್ಲಿ ಜಗಜ್ಜನನಿ ದುರ್ಗಾದೇವಿಯನ್ನು ಒಂಭತ್ತು ರೂಪಗಳಲ್ಲಿ ಪೂಜಿಸಿ ಆರಾಧಿಸಲಾಗುತ್ತದೆ. ದುರ್ಗಾಮಾತೆಯ ಒಂಭತ್ತು ರೂಪಗಳೆಂದರೆ, ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡ, ಸ್ಕಂದಮಾತಾ, ಕಾತ್ಯಾಯಿನಿ, ಕಾಲರಾತ್ರಿ, ಮಹಾಗೌರಿ ಮತ್ತು ಸಿದ್ಧಿದಾತ್ರಿ.
ನವರಾತ್ರಿಯ ಮೊದಲನೆಯ ದಿನ ಶಕ್ತಿದೇವತೆಯಾದ ದುರ್ಗಾಮಾತೆಗೆ ಕಳಸ ಬೆಳಗುವುದರೊಂದಿಗೆ ದೀಪ ಹಚ್ಚಿ ಪೂಜೆ ಮಾಡಿ ದೇವಿಯ ಪ್ರತಿಷ್ಟಾಪನೆ ಇರುತ್ತದೆ. ಎರಡನೆಯ ದಿನ ಲಕ್ಷ್ಮಿದೇವಿಗೆ ಇಷ್ಟವಾದ ನೈವೇದ್ಯ ನೀಡಿ ಅಷ್ಟೋತ್ತರಗಳಿಂದ ಆರಾಧಿಸಲಾಗುತ್ತದೆ. ಮೂರನೆಯ ದಿನ ಮಹಿಶಾಸುರ ಮರ್ದಿನಿ ರೂಪದಲ್ಲಿ ದೇವಿಯನ್ನು ಪೂಜಿಸಲಾಗುತ್ತದೆ. ನಾಲ್ಕನೆಯ ದಿನ ಸಿಂಹವನ್ನು ವಾಹನವಾಗಿಸಿಕೊಂಡ ಚಾಮುಂಡೇಶ್ವರಿ ದೇವಿಗೆ ವಿಶೇಷಪೂಜೆ, ಹೋಮಗಳನ್ನು ಮಾಡಲಾಗುತ್ತದೆ. ಐದನೆಯ ದಿನ ಧೂಮ್ರಾಹ ಎಂಬ ಹೆಸರಲ್ಲಿ ದೇವಿಯನ್ನು ಪೂಜಿಸಿ ಪಂಚರಾತ್ರೋತ್ಸವ ಆಚರಿಸುವರು. ಆರನೆಯ ದಿನ ಧನಲಕ್ಷ್ಮಿಯ ರೂಪದಲ್ಲಿ ಪೂಜಿಸಲಾಗುತ್ತದೆ. ಏಳನೆಯ ದಿನ ವಿದ್ಯೆಯನ್ನು ಕರುಣಿಸುವ ಸರಸ್ವತಿ ಮಾತೆಯ ರೂಪದಲ್ಲಿ ಪೂಜಿಸುವರು. ಈ ದಿನದಲ್ಲಿ ಶಾರದಾ ಪೂಜೆಯನ್ನು ಮಾಡುವ ಮೂಲಕ ಶಾರದೆಯ ಕೃಪೆಗೆ ಜನರು ಪಾತ್ರರಾಗುತ್ತಾರೆ. ಎಂಟನೆಯ ದಿನವನ್ನು ದುರ್ಗಾಷ್ಟಮಿ ಎಂದು ಕರೆಯುತ್ತಾರೆ. ಅಂದರೆ, ದುರ್ಗಾದೇವಿಯನ್ನು ಪೂಜಿಸುವ ಎಂಟನೆಯ ದಿನ ಇದಾಗಿದೆ. ದೇವಿಯಪೂಜೆ, ಉಪವಾಸವ್ರತ, ಕುಂಕುಮಾರ್ಚನೆಗಳನ್ನು ಈ ದಿನ ಮಾಡುತ್ತಾರೆ. ದೇವಿ ಒಂಭತ್ತನೆಯ ದಿನದಂದು ಮಹಿಷಾಸುರನ ಮರ್ಧನಮಾಡಿ ಲೋಕಕ್ಕೆ ಶಾಂತಿ ತಂದುಕೊಟ್ಟ ದಿನವಾದ್ದರಿಂದ ಆ ನಂಬಿಕೆಯ ದ್ಯೋತಕವಾಗಿ ಆಯುಧ ಪೂಜೆ ಮಾಡಲಾಗುತ್ತದೆ.
ನವರಾತ್ರಿ ಕಳೆದು ಹತ್ತನೆಯ ದಿನ ಅಂದರೆ, ವಿಜಯದಶಮಿಯಂದು ಹಬ್ಬವನ್ನು ವಿಜ್ರಂಭಣೆಯಿಂದ ಆಚರಿಸಲಾಗುತ್ತದೆ. ವಿಜಯದ ಸಂಕೇತವಾದ ಶಮೀವೃಕ್ಷವನ್ನು ಪೂಜಿಸಿದರೆ ಶತ್ರುಜಯ, ಪಾಪಪರಿಹಾರ, ಮುಖ್ಯ ಕೆಲಸಕಾರ್ಯಗಳಲ್ಲಿ ವಿಜಯ ದೊರೆವುದೆಂಬುದು ನಂಬಿಕೆ.
ಪುರಾಣಗಳ ಪ್ರಕಾರ ನವರಾತ್ರಿಯಲ್ಲಿನ ಮೊದಲ ಮೂರು ದಿನಗಳಂದು ತಮೋಗುಣವನ್ನು ಕಡಿಮೆ ಮಾಡಲು ತಮೋಗುಣಿ ಮಹಾಕಾಳಿಯನ್ನು, ನಂತರದ ಮೂರು ದಿನಗಳಂದು ರಜೋಗುಣವನ್ನು ವೃದ್ಧಿಸಲು ಮಹಾಲಕ್ಷ್ಮಿಯನ್ನು ಮತ್ತು ಕೊನೆಯ ಮೂರು ದಿನಗಳಂದು ಸಾಧನೆಯನ್ನು ತೀವ್ರಗೊಳಿಸಲು ಸತ್ತ್ವಗುಣಿ ಮಹಾಸರಸ್ವತಿಯನ್ನು ಪೂಜೆಮಾಡುವರು.
ರಾತ್ರಿ ಎನ್ನುವುದು ಆಗುತ್ತಿರುವ ಬದಲಾವಣೆ.ಭೂಮಿಯ ಸಹಜ ಗುಣವೇ ಬದಲಾವಾಣೆ. ಅಂದರೆ, ಹಗಲು ರಾತ್ರಿಯಾಗಿ ತಿರುಗುತ್ತಿರುವುದು. ಇಂತಹಾ ಬದಲಾವಣೆ ಸಹಿಸುವ ಶಕ್ತಿವೃದ್ಧಿಗೆ ವ್ರತಾಚರಣೆ ಮಾಡುತ್ತಾರೆ. ಜಗತ್ತಿನಲ್ಲಿ ತಾಮಸಿಕ, ಅಸುರೀ ಮತ್ತು ಕ್ರೂರ ಜನರು ಪ್ರಬಲರಾಗಿ ಸಾತ್ವಿಕ ಮತ್ತು ಸಜ್ಜನರನ್ನು ಪೀಡಿಸುತ್ತಿರುವುದು ನಿರ್ಮೂಲನೆಗೊಂಡು ಶಾಂತಿ, ಸಹಬಾಳ್ವೆಯು ರೂಪುಗೊಳ್ಳಬೇಕೆಂಬುದನ್ನು ಈ ಹಬ್ಬಸಾರುತ್ತದೆ.

  • ವಿದ್ಯಾಸರಸ್ವತಿಯಂ.
    ಶಿಕ್ಷಕಿ, ಸೈಂಟ್ ಜೋಸೆಫ್ ಶಾಲೆ, ಸುಳ್ಯ

LEAVE A REPLY

Please enter your comment!
Please enter your name here